ವಲಸೆ ಕಾರ್ಮಿಕರ ನೋವಿನ ದನಿ-ಸಿಎಸ್‍ಬಿ ರಚಿಸಿದ ಕಾವ್ಯ
ವಲಸೆ ಕಾರ್ಮಿಕರ ನೋವಿನ ದನಿ
ಒಂದೊಂದು ಹೆಜ್ಜೆ ಮುಂದಿಟ್ಟಂತೆ ಒಂದೊಂದು
ಕಲ್ಲು-ಮುಳ್ಳು ಚುಚ್ಚಿ ನಮ್ಮ ಪಾದಗಳ
ಕೊರೆದಿವೆ ಎಂಬುದು ಗೊತ್ತಿಲ್ಲದೇ ನಾವು
ನೂರಾರು ಮೈಲು ಕ್ರಮಿಸಿ ಮುನ್ನಡೆದಿದ್ದೇವೆ.
ಕೋವಿಡ್ -19 ಹರಡಿರುವ ಈ ದೇಶದಲ್ಲಿ
ಮೈಮುರಿದು ದುಡಿವ ನಮ್ಮ ಜೀವಕ್ಕೆಲ್ಲ
ಪ್ರೀತಿಯಿಂದ ಅಪ್ಪಿಕೊಳ್ಳುವ ಎದೆಯೆಲ್ಲಿ ಈ ದೇಶದಲ್ಲಿ?
ನಮ್ಮ ನೋವುಗಳ ಹೇಳುವುದು ಯಾರಿಗೆ ?
ಬಿಸಿಲು ಬಿರುಗಾಳಿ ಮಳೆ ಚಳಿ
ಚಂಡ ಮಾರುತಗಳು
ಭೌಗೋಳಿಕ ವ್ಯತ್ಯಾಸಗೊಳ್ಳುತ್ತವೆ
ಎಂಬುದನ್ನು ನಾವು ಮರೆತೇ ಬಿಟ್ಟಿದ್ದೇವೆ.
ಕೈಯಲ್ಲಿ ಕಾಸಿಲ್ಲದೆ ಹೆಂಡತಿ ಮಕ್ಕಳನ್ನು
ಕರೆದುಕೊಂಡು ಉಟ್ಟ ಬಟ್ಟೆಯೊಂದಿಗೆ
ನಮ್ಮೂರ ಸೇರಬೇಕೆಂಬ ಆಸೆಯಿಂದ
ಹಗಲಿರುಳು ಹಾದಿ ತುಳಿಯುತ್ತಿದ್ದೇವೆ.
ಮಾತು ಮಾತಲ್ಲಿ ಮಹಲು ಕಟ್ಟುತ
ನಮ್ಮ ಒಡಲಿಗೆ ಬೆಂಕಿ ಇಕ್ಕಿದವರೆ
ಬಸ್ಸಿಲ್ಲ ರೈಲಿಲ್ಲ ದಿಕ್ಕು ತಪ್ಪಿಸಿದ ನಮ್ಮ
ಬದುಕು, ಕಾರಣ ಪುರುಷತ್ವ ಯಾರಿಗೆ?
ಪ್ರಭುಗಳೆ, ಸ್ವಲ್ಪ ಹೊತ್ತು ನಿಮ್ಮ ಬಂಗಲೆ ಮಹಡಿ
ಮಹಲು ದರ್ಬಾರು ಕಾರು ಅಪ್‍ಸ್ಟೇರ್
-ಗಳಿಂದ ಕೆಳಗಿಳಿದು ಬನ್ನಿ ಈ ನೆಲಕ್ಕೆ
ನಮ್ಮೊಂದಿಗೆ ಬರಗಾಲಲಿ ಸ್ವಲ್ಪ ಹೆಜ್ಜೆ ಹಾಕಲು.
ನೀವೀಗ ನಮ್ಮ ಈ ನೆಲದ ಸಂಪರ್ಕ
ತಪ್ಪಿಸಿಕೊಂಡು ಎತ್ತರದಲ್ಲಿ ದೊಡ್ಡ
ಗ್ರಹಗಳಾಗಿದ್ದೀರಿ ,ಅದಕ್ಕೆಂದೇ ನಿಮ್ಮನ್ನ
ನಾವು ಈಗ ಕೂಗಿ ಕೂಗಿ ಕರೆಯುತ್ತಿದ್ದೇವೆ.
ಈ ದೇಶ ಪ್ರಜಾಪ್ರಭುತ್ವದ ದೇಶ
ಗೊತ್ತು ಪ್ರಭುಗಳೇ, ಇಂಥ ಕುಲದ
ನೆಲವು ಒಮ್ಮೊಮ್ಮೆ ಸಾವನೊಡ್ಡುವ ಉಂಡೆಗಳ
ಗಣಿಯಾಗುತ್ತದೆ ಅಂತ ನೆನಪಿರಲಿ ಪ್ರಭುವೇ.
ಅಮೃತವಿದ್ದಲ್ಲಿ ಹಾಲಹಲ ವಿಷ ಪ್ರಭುವೇ
ಕಪ್ಪು ತುಂಬಿದ ಕರಿ ನೆಲದ ಎದೆಗೆಲ್ಲ
ನೀಲಿ ರಕ್ತದ ಬೆದೆಯ ಮಾದಕತೆ ಕಂಡು
ನಮ್ಮ ನಾಲಿಗೆ ನಿತ್ಯ ಸೇದಿ ಹೋಗಿದೆ.
ರಾಜ ಆಳಿದರೇನು, ರಾಣಿ ಆಳಿದರೇನು
ನಮ್ಮ ಗೋಳಿನ ಕಥೆಯು ಕೇಳವವರಿಲ್ಲೋ
ಈ ಭೂಮಿಯಲ್ಲಿ ಹುಟ್ಟಿ ನಾವು
ಕಣ್ಣೀರ ಹೊರತು ಏನೂ ಪಡೆಯಲಿಲ್ಲ.
ರಣಗುಡುವ ಬಿಸಿಲಿನಲಿ ಕಾದ ರಸ್ತೆಯ
ಮೇಲೆ ನಡೆದು ನಡೆದು ನಮ್ಮ ಅಂಗಾಲಿ
-ನಿಂದ ರಕ್ತ ಸೋರಿ ಹರಿಯುತ್ತಿದೆ
ನಿಮಗೆ ಕಾಣುತ್ತಿಲ್ಲವೆ ನಮ್ಮ ಈ ಸಂಕಟ?
-ಸಿ.ಎಸ್. ಭೀಮರಾಯ (ಸಿಎಸ್ಬಿ)
ಆಂಗ್ಲ ಉಪನ್ಯಾಸಕರು.