ಕಲಬುರಗಿ: ಮಣ್ಣಾಗಿದ್ದ ಶವ ಹೊರತೆಗೆದು ಚಿನ್ನಾಭರಣ ದೋಚಿದ ಕಳ್ಳರು!
ಸತ್ತವರ ಗಂಟು ನುಂಗುವವರಿದ್ದಾರೆ ಹುಷಾರ್!
ಕಲಬುರಗಿ: ಆಳಂದ ತಾಲೂಕಿನ ಖಜೂರಿ ಗ್ರಾಮದ ವೃದ್ಧೆ ಪ್ರೇಮಾಬಾಯಿ(76) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಐದು ದಿನಗಳ ಹಿಂದಷ್ಟೇ ಅವರು ಕೊನೆಯುಸಿರೆಳೆದಿದ್ದರು. ಆದರೆ, ಪ್ರೇಮಾಬಾಯಿಗೆ ವಾರಸುದಾರರಿಲ್ಲದ ಕಾರಣ ಅವರ ಮೈಮೇಲಿದ್ದ ಸುಮಾರು 1.50 ಲಕ್ಷ ಮೌಲ್ಯದ 50ಗ್ರಾಂ ಚಿನ್ನದ ಸರದ ಸಮೇತ ಮಣ್ಣು ಮಾಡಲಾಗಿತ್ತು.
ಆದರೆ, ಚಿನ್ನಾಭರಣ ಸಮೇತ ಮಣ್ಣು ಮಾಡಿರುವುದನ್ನು ಗಮನಸಿದ ಕಳ್ಳರು ನಿನ್ನೆ ಸಮಾಧಿಯನ್ನು ಅಗೆದು ಶವ ಹೊರತೆಗೆದಿದ್ದು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಇಂದು ಗ್ರಾಮಸ್ಥರು ಸಮಾಧಿ ಮೇಲೆ ಶವ ಪತ್ತೆಯಾಗಿದ್ದು ಕಂಡು ಗಾಬರಿಯಾಗಿದ್ದಾರೆ. ಬಳಿಕ ಚಿನ್ನಗಳ್ಳರ ಕೃತ್ಯವೆಂಬುದು ತಿಳಿದು ಬಂದಿದೆ. ಆಳಂದ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಮೃತಳ ಸಂಭಂಧಿಕರು ಹಾಗೂ ಗ್ರಾಮಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸಮಾಧಿ ಅಗೆದು ಬಂಗಾರ ದೋಚಿದ್ದು ಹಿಂದೆಂದೂ ಕಂಡಿಲ್ಲ, ಕೇಳಿಲ್ಲ ಎಂದು ಗ್ರಾಮದ ಹಿರಿಯ ನಾಗರೀಕರು ಹೇಳಿದ್ದಾರೆ. ಅಲ್ಲದೆ ಖದೀಮರು ಯಾರೇ ಆಗಿದ್ದರೂ ಕೂಡಲೇ ಪೊಲೀಸರು ಪತ್ತೆ ಹಚ್ಚಿ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.