ಅಂಕಣಮಹಿಳಾ ವಾಣಿ

“ಯಾದ್ ವಶೇಮ್” ಕೃತಿ ವಿಮರ್ಶಾ ಲೇಖನ

ನೇಮಿಚಂದ್ರ ಅವರ ಇತಿಹಾಸ ಆಧಾರಿತವಾದ ಕಾದಂಬರಿ ಯಾದ್ ವಶೇಮ್. ಇವರು ವೃತ್ತಿ ಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳು. ಇವರ ಕತೆಗಳು ಅಪ್ಪಟ ಮಹಿಳಾ ಪರ ನಿಲುವು ಹೊಂದಿವೆ.

ಇವರು ಅಂಕಣಕಾರರು ಹೌದು ಬದುಕು ಬದಲಿಸಬಹುದು ಎಂಬ ಕೃತಿ ಯಲ್ಲಿ ಜೀವನದ ಕುರಿತಾದ ಧನಾತ್ಮಕ ಚಿಂತನೆ ಓದುಗರ ಮನಸ್ಸನ್ನು ಸೆಳೆಯುತ್ತದೆ. ಇವರ ಪೆರುವಿನ ಪವಿತ್ರ ಕಣಿವೆಯಲ್ಲಿ ಪ್ರವಾಸ ಕಥನ ಹೆಚ್ಚು ಓದುಗರನ್ನು ಆಕರ್ಷಿ ಸಿದೆ.ಅವರ ಬರವಣಿಗೆಯ ಶೈಲಿ ಹೆಚ್ಚು ಆಪ್ತವಾಗಿದ್ದು,ಯಾವ ಪಂಥಕ್ಕೂ ಸೇರದೆ ಸತ್ಯಾನ್ವೇಷಣೆಯ ಮಾರ್ಗ ಅವರದು.

ಬರವಣಿಗೆಯ ಹಿಂದೆ ಸಾಕಷ್ಟು ಶ್ರಮ ವಿರುತ್ತದೆ. ಕ್ಷೇತ್ರ ಕಾರ್ಯ ಕೈಗೊಂಡು ಬರೆಯುವದರಿಂದ ಕಥಾ ವಸ್ತುವಿನಲ್ಲಿ ಗಟ್ಟಿತನ ವಿರುತ್ತದೆ. ನೇಮಿಚಂದ್ರ ಅವರು ಯಹೂದಿಗಳ ಸಮಾಧಿಯನ್ನು ಬೆಂಗಳೂರಿನ ಗೋರಿಪಾಳ್ಯದಲ್ಲಿ ಗಮನಿಸಿ ಅಲ್ಲಿಯ ಹಿಬ್ರೂ ಭಾಷೆಯನ್ನು ಕಂಡು ಅದರ ಮೂಲ ಅರಸುತ್ತಾ ಹೊರಟು ಈ ಕಾದಂಬರಿ ರಚನೆಗೊಂಡಿತು.

ಇತಿಹಾಸದಲ್ಲಿ ನಡೆದ ಘಟನೆಗಳಿಗೆ ಪಾತ್ರ ಗಳನ್ನು ಹೆಣೆದು ಕಥಾ ಚೌಕಟ್ಟು ನೀಡಿದ್ದು ವಿಶೇಷ.
ಜರ್ಮನಿಯಲ್ಲಿ ಯಹೂದಿ ಕುಟುಂಬ ಹಿಟ್ಲರ್ ನ ದೌರ್ಜನ್ಯಕ್ಕೆ ಒಳಗಾಗಿ ,ಅಮಸ್ಟರಡಾಮ್ ಕಡೆ ಕುಟುಂಬ ಸಮೇತ ಪಲಾಯನ ಮಾಡುತ್ತದೆ ಆದರೆ ಅಲ್ಲಿಯೂ ನಾಜಿಗಳ ಆಕ್ರಮಣವಾಗುತ್ತದೆ.

ಕೊನೆಗೆ ತಂದೆ ಮಗಳು ಹ್ಯಾನಾ ಭಾರತಕ್ಕೆ ಬಂದು ನೆಲೆ ನಿಲ್ಲುವರು. ಆದರೆ ತಾಯಿ, ಅಕ್ಕ ರೆಬೆಕ್ಕಾ ತಮ್ಮ ಐಸಾಕ್ ಸೈನಿಕರ ಕಪಿಮುಷ್ಟಿಯಲ್ಲಿ ಸಿಲುಕಿ ಡಕಾವ್ ಕ್ಯಾಂಪಿಗೆ ಎಳೆದೊಯ್ಯುತ್ತಾರೆ.

ಹ್ಯಾನಾ ಮಾತ್ರ ಅಪ್ಪನೊಂದಿಗೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಎರಡನೇ ಮಹಾಯುದ್ಧದ ಕೊನೆಗಾಗಿ ಕಾತುರತೆಯಿಂದ ಕಾಯುತ್ತಿರುತ್ತಾಳೆ ಮರಳಿ ತನ್ನ ವರನ್ನೂ ಸೇರಲು.ನೆರೆಮನೆಯಲ್ಲಿ ಹಿಂದೂ ಕುಟುಂಬದ ಜೊತೆಗೆ ಒಡನಾಟ ಬೆಳೆಸಿಕೊಂಡು ,ಇಲ್ಲಿನ ಧಾರ್ಮಿಕ ಆಚರಣೆ ಅವಳಲ್ಲಿ ಹಲವು ಪ್ರಶ್ನೆಗಳಿಗೆ ಎಡೆಮಾಡುತ್ತವೆ.ಗಾಂಧಿ ನೆಲದಲ್ಲಿನ ವಿವಿಧತೆಯಲ್ಲಿ ಏಕತೆ ಕಂಡು ಸೋಜಿಗಪಡುತ್ತಾಳೆ.

ಆದರೆ ಅವಳ ಬದುಕಿನಲ್ಲಿ ವಿಧಿ ಆಟ ಬೇರೆ ಇರುತ್ತದೆ. ಹಲವು ಖಂಡಗಳು ದಾಟಿ ಭಾರತದಲ್ಲಿ ಆಶ್ರಯ ಪಡೆಯಲು ಬಂದ ಹ್ಯಾನಾಳ ತಂದೆ ತೀರಿಕೊಂಡು ಅಕ್ಷರಶಃ ಅನಾಥ ಳಾಗುತ್ತಾಳೆ.ಆಗ ಆಸರೆಯಾಗಿ ನಿಲ್ಲುವದು ಪಕ್ಕದ ಮನೆ ಕುಟುಂಬ. ಇದು ಭಾರತದಲ್ಲಿ ಮಾತ್ರ ಸಾಧ್ಯ. ಅವಳು ಯಹೂದಿ ಎಂದು ತಿಳಿದು ಅವಳ ವ್ಯಕ್ತಿ ಸ್ವಾತಂತ್ರ್ಯ ಕ್ಕೆ ಅಡ್ಡಿಯಾಗದೆ ಮನೆ ಮಗಳಂತೆ ಕಂಡು ಮುಂದೆ ತಮ್ಮ ಏಕಮಾತ್ರ ಪುತ್ರ ವಿವೇಕ್ ಗೆ ಪತ್ನಿ ಯಾಗುತ್ತಾಳೆ.

ವಿಶಾಲ್ ಎಂಬ ಮಗನನ್ನು ಪಡೆದು ೬೦ ವಸಂತಗಳನ್ನು ಕ್ರಮಿಸಿದರು ತನ್ನ ಬೇರಿನ ಹುಡುಕಾಟ ಅವಳ ಅಂತರಂಗದಲ್ಲಿ ನಡೆದಿರುತ್ತದೆ. ಅಕ್ಕ ,ಅಮ್ಮ ,ತಮ್ಮ ನ ಕುರಿತ ಹಂಬಲ ಮತ್ತೆ ತನ್ನ ನೆಲೆಯನ್ನು ಅರಸಲು ಪ್ರೆರೆಪಿಸುತ್ತದೆ.

ಮಗ ಇಂಜಿನಿಯರ್ ಆದ ಕಾರಣ ಅವನ ಸಹಾಯದಿಂದ ಗಂಡ ವಿವೇಕ್ ಹೆಂಡತಿ ಹ್ಯಾನಾ( ಅನೀತಾ) ಇತಿಹಾಸ ಕೆದಕಲು ಪ್ರಯತ್ನ ಮಾಡಿದಾಗ ಹಿಟ್ಲರ್ ನ ಪೈಶಾಚಿಕ ಕೃತ್ಯ ಕಣ್ಣಿಗೆ ರಾಚುತ್ತದೆ.೬೦ ಲಕ್ಷ ಯಹೂದಿಗಳನ್ನು ಕೊಂದದ್ದು ಅದರಲ್ಲಿ ತನ್ನ ಕುಟುಂಬ ಎಲ್ಲಿ ಎಂದು ಹುಡುಕುವ ಪ್ರಯತ್ನ ಓದುಗನ ಉಸಿರು ಬಿಗಿಹಿಡಿಯುವಂತೆ ಮಾಡುತ್ತದೆ.

ಯುರೋಪ್,ಅಮೆರಿಕ ಸುತ್ತಿ ಕೊನೆಗೆ ಇಸ್ರೇಲ್ ನಲ್ಲಿ ಅಕ್ಕ ರೆಬೆಕ್ಕಾ ಆರು ದಶಕದ ನಂತರ ಭೇಟಿ ಮಾಡಿದ ಕ್ಷಣ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಆದರೆ ರೆಬೆಕ್ಕಾ ತನ್ನ ಕತೆ ಹೇಳುವ ಮೂಲಕ ನಾಜಿಗಳ ಕರಾಳ ಮುಖ ಕಾಣಿಸುತ್ತಾಳೆ.ಅಮ್ಮ ತಮ್ಮ ಒಂದೇ ದಿನ ಕೊಲ್ಲಲ್ಪಟ್ಟರು.

ರೆಬೆಕ್ಕಾ ಮಾತ್ರ ಕ್ಯಾಂಪ್ ನಲ್ಲಿ ಕೆಲಸ ಮಾಡುತ್ತ ಅನೇಕ ಶೋಷಣೆಗೆ ಬಲಿಯಾಗಿ, ಮತ್ತೆ ಹೊರಗೆ ಬಂದು ಹೊಸ ಬದುಕು ಕಟ್ಟಿಕೊಂಡು ಯಹೂದಿಗಳ ನಾಡಾದ ಇಸ್ರೇಲ್ ನಲ್ಲಿ ಕುಟುಂಬ ಸಮೇತ ನೆಲೆ ನಿಲ್ಲುತ್ತಾಳೆ.ಅಕ್ಕ ತಂಗಿ ಭೇಟಿ ಆದಾಗ ಒಡೆದು ಹೋದ ಕುಟುಂಬ ಪುನರ್ ಮಿಲನವಾದರು ಅವರ ಆಲೋಚನಾ ಕ್ರಮ ಭಿನ್ನ ವಾಗಿರುತ್ತದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ಕಂಡು ಮತ್ತೆ ಇತಿಹಾಸ ಮರುಕಳಿಸುತ್ತಿದೆ.ಹಿಂಸೆಗೆ ಪ್ರತಿ ಹಿಂಸೆ ಉತ್ತರವೆ ಎಂದು ಹ್ಯಾನಾ ಪ್ರಶ್ನಿಸುತ್ತಾಳೆ.ಬಂದೂಕಿನ ನಳಿಕೆಯಲ್ಲಿ ಹಕ್ಕಿ ಗೂಡು ಕಟ್ಟಲಿ ಎಂಬ ಆಶಯದಿಂದ ಕತೆ ಕೊನೆಗೊಳ್ಳುವುದು.

ಲೇಖಕಿ ಇತಿಹಾಸದ ತಪ್ಪಗಳನ್ನು ಪ್ರಸ್ತುತ ದಿನಮಾನಕ್ಕೆ ಅನ್ವಯಿಸಿ “ಮನುಷ್ಯ ಜಾತಿ ತಾನೊಂದೆ ವಲಂ ” ಎಂದು ಭಯೋತ್ಪಾದನೆ ಅಳಿದು ದಯವೆ ಧರ್ಮದ ಮೂಲ ಎಂಬ ನಿಲುವು ತಾಳಬೇಕೆನ್ನುವರು.ಒಂದು ಚಿಕ್ಕ ಎಳೆ ಹಿಡಿದು ಇಡಿ ಜಗತ್ತಿನ ಇತಿಹಾಸ ಮತ್ತು ಪ್ರಸ್ತುತ ಸಂದರ್ಭವನ್ನು ಅನಾವರಣ ಗೊಳಿದಿದ್ದಾರೆ.

ಡಾ.ಶೈಲಜಾ ಎನ್ ಬಾಗೇವಾಡಿ ಕನ್ನಡ ಉಪನ್ಯಾಸಕರು.

Related Articles

Leave a Reply

Your email address will not be published. Required fields are marked *

Back to top button