ಸುಲಭವಾಗಿ ಮಾಡಿ ಬದನೆಕಾಯಿ ಎಣ್ಣೆಗಾಯಿ! ಹೇಗೆ ಗೊತ್ತಾ?

ಎಣ್ಣೆಗಾಯಿ ಬದನೆಕಾಯಿ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ – 5
- ಮೆಂತ್ಯ
- ಜೀರಿಗೆ
- ಸಾಸಿವೆ
- ಕಡಲೆ ಬೀಜ
- ಬಿಳಿ ಎಳ್ಳು
- ಕರಿಬೇವು
- ಧನಿಯಾ
- ಗರಂ ಮಸಾಲ
- ಖಾರದ ಪುಡಿ
- ಒಣ ಮೆಣಸು
- ಎಣ್ಣೆ
- ತೆಂಗಿನ ಕಾಯಿ
- ಹುಣಸೆ ಹಣ್ಣು
- ಈರುಳ್ಳಿ
- ಟೊಮೆಟೋ
- ಉಪ್ಪು
- ಉದ್ದಿನ ಬೇಳೆ
- ಅರಶಿನ
ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ
ಮೊದಲು ಎಲ್ಲಾ ಬದನೆಕಾಯಿಯನ್ನೂ ತೊಟ್ಟು ಸ್ವಲ್ಪ ಉದ್ದ ಇಟ್ಟು 4 ಭಾಗವಾಗ ಕತ್ತರಿಸಿಕೊಳ್ಳಿ. ಬದನೆಕಾಯಿ ಇಡಿಯಾಗಿರಲಿ. ಬಳಿಕ ಅದನ್ನು ನೀರಿನಲ್ಲಿ ಹಾಕಿ ಇಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಮೆಂತ್ಯ, ಧನಿಯಾ, ಜೀರಿಗೆ, ಕಡಲೆ ಬೀಜ, ಕಡಲೆ ಬೇಳೆ, ಬಿಳಿ ಎಳ್ಳು, ಹುರಿಗಡಲೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಬೆಳ್ಳುಳ್ಳಿ ಹಾಕಿಕೊಂಡಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈ ಮಸಾಲೆಯನ್ನು ಪಾತ್ರೆಯಿಂದ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಮತ್ತೊಂದು ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎರಡೂ ಪದಾರ್ಥಗಳನ್ನು ಹಾಕಿಕೊಳ್ಳಿ, ಮೊದಲು ಫ್ರೈ ಮಾಡಿಕೊಂಡ ಪದಾರ್ಥಗಳು ಹಾಗೂ ಒಣ ಮೆಣಸು ಕರಿಬೇವಿನ ಮಿಶ್ರಣವನ್ನು ಹಾಕಿ. ಅದಕ್ಕೆ ತೆಂಗಿನ ಕಾಯಿ, ಹುಣಸೆ ಹಣ್ಣು, ಗರಂ ಮಸಾಲೆ, ಈರುಳ್ಳಿ, ಉಪ್ಪು, ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಈ ರುಬ್ಬಿರುವ ಖಾರವನ್ನು ಬದನೆಕಾಯಿಯ ಮಧ್ಯದಲ್ಲಿ ತುಂಬಿಸಿಕೊಳ್ಳಿ. ಎಲ್ಲಾ ಬದನೆಕಾಯಿಗೆ ಖಾರ ತುಂಬಿದ ಬಳಿಕ, ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 1 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಬಳಿಕ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಅರಶಿನ ಹಾಕಿ ಮಿಕ್ಸ್ ಮಾಡಿ ಇದಕ್ಕೆ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಟೊಮೆಟೋ ಸಹ ಹಾಕಿಕೊಂಡು ಫ್ರೈ ಮಾಡಿ. ಈಗ ಬದನೆಕಾಯಿಗೆ ಹಾಕಿ ಉಳಿದಿರುವ ಖಾರವನ್ನು ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿಕೊಂಡು ಬಿಡಿ. ಬಳಿಕ ಮಸಾಲೆ ತುಂಬಿರುವ ಬದನೆಕಾಯಿಯನ್ನು ಒಂದೊಂದಾಗಿ ಇಡುತ್ತಾ ಬನ್ನಿ. ಬಳಿಕ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ, ಬಳಿಕ 2 ಸೀಟಿ ಹೊಡೆಯುವವರೆಗೂ ಬಿಡಿ. ಬಳಿಕ ಗ್ಯಾಸ್ ಪೂರ್ತಿ ಹೋದ ಬಳಿಕ ಕುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿಕರ ಎಣ್ಣೆಗಾಯಿ ಪಲ್ಯ ರೆಡಿಯಾಗಿರುತ್ತೆ.