ನಕಲಿ ಮತದಾನ ಚೀಟಿ ಪತ್ತೆಃ ಕ್ರಮಕ್ಕೆ ಜೆಡಿಎಸ್ ಆಗ್ರಹ
ವಿಧಾನಸಭೆ ಫಲಿತಾಂಶದ ಮೇಲೆ ನಕಲಿ ಮತದಾನ ಪರಿಣಾಮ ಜೆಡಿಎಸ್ ಆರೋಪ
ಯಾದಗಿರಿ, ಶಹಾಪುರಃ ನಗರದಲ್ಲಿ ನಕಲಿ ಮತದಾನ ಚೀಟಿಗಳು ದೊರೆತಿದ್ದು, ಇದು ವಿಧಾನ ಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಸಾಧ್ಯತೆ ಇದ್ದು, ಕೂಡಲೇ ನಕಲಿ ಮತದಾನ ಚೀಟಿ ಕುರಿತು ಸಮರ್ಪಕ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ತಾಲೂಕು ಜೆಡಿಎಸ್ ತಹಶೀಲ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ವಿಠಲ್ ವಗ್ಗಿ, 2018 ವಿಧಾನಸಭೆಯಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಬಂದಿರುವದು ಇಡಿ ತಾಲೂಕಿನ ಮತದಾರರಲ್ಲಿ ಅಚ್ಚರಿ ಮೂಡಿಸಿತ್ತು. ಈ ತರಹ ಫಲಿತಾಂಶ ಯಾವ ಅವಧಿಯಲ್ಲೂ ಬಂದಿಲ್ಲವೆಂದು ಮಾತನಾಡಿಕೊಳ್ಳುವದು ಸಾಮಾನ್ಯವಾಗಿ ಕಂಡು ಬಂದಿತು.
ಅಲ್ಲದೆ ಈ ಫಲಿತಾಂಶದ ಹಿಂದೆ ಯಾವುದೋ ಕಾಣದ ಕೈ ಕೆಲಸ ಮಾಡಿದೆ ಎಂಬ ಸಂಶಯ ಮೂಡಿತ್ತು. ಪ್ರಸ್ತುತ ಈ ನಕಲಿ ಮತದಾನ ಚೀಟಿ ದೊರೆತಿರುವದರಿಂದ ಸಂಶಯಕ್ಕೆ ಬಲ ಬಂದಿದೆ. ಅಲ್ಲದೆ ದೊರೆತಿರುವ ನಕಲಿ ಮತದಾನ ಚೀಟಿ ಆನ್‍ಲೈನ್ ನಲ್ಲಿ ಪರಿಶೀಲನೆ ಮಾಡಿದಾಗ ಚೀಟಿಯಲ್ಲಿರುವ ವಿಳಾಸ ಆನ್‍ಲೈನ್ ನಲ್ಲಿರುವ ವಿಳಾಸ ಬೇರೆ ಬೇರೆಯದ್ದಾಗಿದೆ.
ಅಲ್ಲದೆ ಒಬ್ಬ ವ್ಯಕ್ತಿಯೇ ಗ್ರಾಮೀಣ, ನಗರ ಮತ್ತು ಜಿಲ್ಲಾಮಟ್ಟದ ಮತದಾನ ಪಟ್ಟಿಯಲ್ಲಿ ಹೆಸರಿರುವದು ಕಂಡು ಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಓರ್ವ ವ್ಯಕ್ತಿ ಮೂರು ಮೂರು ಕಡೆ ಮತದಾನ ಮಾಡಿರುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಈ ಬಾರಿ ವಿಧಾನಸಭೆ ಫಲಿತಾಂಶ ಮೂರು ಪಟ್ಟು ಹೆಚ್ಚಾಗಿದೆ.
ಮತ್ತು ಪ್ರಸ್ತುತ ನಡೆಯುವ ಲೋಕಾಸಭೆ, ನಗರಸಭೆ ಚುನಾವಣೆಗಳಲ್ಲಿ ಇದೇ ಮತದಾನ ಪಟ್ಟಿ ಮುಂದುವರೆಸುವದು ಬೇಡ. ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ ನಕಲಿ ಮೂರು ಕಡೆ ಮತದಾನದ ಹಕ್ಕು ಹೊಂದಿದ್ದ ಅಕ್ರಮ ಮತದಾರರನ್ನು ಪಟ್ಟಿಯಿಂದ ರದ್ದುಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಅರುಣಿ, ತಿರುಪತಿ ಆಲ್ದಾಳ, ರಾಜು ಪಂಚಬಾವಿ, ಶರಣಗೌಡ ಮಾಲಹಳ್ಳಿ, ದಾಮು ನಾಯಕ, ಶಿವನಗೌಡ ಪಾಟೀಲ್ ಆಲ್ದಾಳ ಇತರರಿದ್ದರು.