ಶಹಾಪುರಃ ಮಹಲ್ ರೋಜಾದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ, ಆರೋಪಿ ಪೊಲೀಸರ ವಶಕ್ಕೆ
ಮಹಲ್ ರೋಜಾದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆಃ ನಗರದಲ್ಲಿ ಪ್ರತಿಭಟನೆ ಆಕ್ರೋಶ
ಶಹಾಪುರಃ ಹೊಲದಿಂದ ವಾಪಾಸ್ ಮನೆಗೆ ಬರುವಾಗ ಮಾರ್ಗ ಮಧ್ಯೆ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಹೊಡೆದು ಕೊಲೆಗೈದ ಘಟನೆ ತಾಲೂಕಿನ ಸಗರ ಗ್ರಾಮ ಸಮೀಪದ ಮಹಲ್ ರೋಜಾ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಹಣಮಂತ ನಾಯ್ಕೋಡಿ ಅಲಿಯಾಸ ಹಣಮಂತ್ರಾಯ ಪೂಜಾರಿ (58) ಕೊಲೆಯಾದ ವ್ಯಕ್ತಿಯಾಗಿದ್ದು, ಮಚ್ಚಿನಿಂದ ಹಿಂಬದಿ ತಲೆಗೆ ಮತ್ತು ಮುಖಕ್ಕೆ ಏಟು ಬಿದ್ದ ಕಾರಣ ಅತೀವ ರಕ್ತಸ್ರಾವದಿಂದ ನರಳುತ್ತಿದ್ದ ಈತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಇಲ್ಲಿನ ವೈದ್ಯರು ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ಕಳುಹಿಸಿದ್ದು, ಮಾರ್ಗ ಮಧ್ಯೆ ಪ್ರಾಣ ಹೋಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಆರೋಪಿ ನಿಂಗಪ್ಪ ತಂದೆ ಭೀಮರಾಯ ಕೊಂಗಂಡಿ (28) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ವ್ಯಕ್ತಿ ಪರಿಚಯಃ ಕೊಲೆಯಾದ ವ್ಯಕ್ತಿ ಹಣಮಂತ ಪೂಜಾರಿ ಮುತ್ಯಾ ಎಂದೇ ಸುತ್ತಲಿನ ಗ್ರಾಮಗಳಲ್ಲಿ ಸುಪರಿಚಿತರಾಗಿದ್ದಾರೆ. ಮಹಲ್ ರೋಜಾ ಗ್ರಾಮದಲ್ಲಿ ಯಮನೂರಪ್ಪ ಮುತ್ಯಾನವರ ದೇವಸ್ಥಾನ ನಿರ್ಮಿಸಿದ್ದು, ಶ್ರೀದೇವರ ಆರಾಧಕರಾಗಿದ್ದರು. ಅಲ್ಲದೆ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಗುರುತಿಸಿಕೊಂಡಿದ್ದರು.
ಪ್ರತಿ ವರ್ಷ ಯಮನೂರಪ್ಪ ಜಾತ್ರ ಮಹೋತ್ಸವ ಅಂಗವಾಗಿ ಉಚಿತ ಸಾಮೂಹಿಕ ವಿವಾಹದಂತೆ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಸಾಮಾಜಿಕ ಸೇವೆಗಳನ್ನು ಕೈಗೊಳ್ಳುತ್ತಿದ್ದರು. ಮತ್ತು ಕ್ಷೇತ್ರಕ್ಕೆ ಬಂದ ಹಲವಾರು ರೋಗಿಗಳಿಗೆ (ಜಡಿಬೂಟಿ) ಆಯುರ್ವೇದ ಔಷಧಿಗಳನ್ನು ನೀಡುತ್ತಿದ್ದರು. ಮತ್ತು ಭವಿಷ್ಯವಾಣಿ ಸಹ ನುಡಿಯುತ್ತಿದ್ದರು. ಹಿರಿಯರಿಂದ ಹಿಡಿದು ಮಹಿಳೆಯರು ಮಕ್ಕಳಿಗೆ ಜ್ವರ, ಇತರೆ ಖಾಯಿಲೆಗಳಿಗೆ ಔಷಧಿಯು ನೀಡುತ್ತಿದ್ದಾರೆ. ಅಪಾರ ಭಕ್ತರನ್ನು ಹೊಂದಿದ್ದರು. ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಭರ್ಜರಿಯಾಗಿ ನಡೆಸುತ್ತಿದ್ದರು. ಸಚಿವರು, ಶಾಸಕರು ಸೇರಿದಂತೆ ಸುರಪುರ, ಶಹಾಪುರ ಕ್ಷೇತ್ರದ ಗಣ್ಯರು ಕಲಬುರ್ಗಿ ಕ್ಷೇತ್ರ ರಾಜಕೀಯ ಗಣ್ಯರು ವಿವಿಧ ಮಠಾಧೀಶರು ಇವರು ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಎಸ್ ಪಿ ಯಡಾ ಮಾರ್ಟಿನ್ ಹೇಳಿಕೆಃ
ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದಿರುವುದು ಮಹಾ ಅಪರಾಧ. ಕಾರಣ ಏನೇ ಇರಲಿ ಕೊಲೆಗೈದಿರುವುದು ತಪ್ಪು. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸಮುದಾಯದವರು ಹತ್ಯೆ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದು, ಈ ಕುರಿತು ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ ಮನವೊಲಿಸಲಾಗಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಎಸ್ಪಿ ಯಡಾ ಮಾರ್ಟೀನ್ ತಿಳಿಸಿದ್ದಾರೆ.
ಕೊಲೆ ಖಂಡಿಸಿ ಪ್ರತಿಭಟನೆಃ ಕೋಲಿ ಸಮಾಜ ಆಕ್ರೋಶ
ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ದೇವಸ್ಥಾನ ಪೂಜಾರಿ ಹಣಮಂತ ಪೂಜಾರಿ ಅವರನ್ನು ಗ್ರಾಮದ ಹೊರವಲಯದ ಹೊಲಕ್ಕೆ ತೆರಳಿ ವಾಪಾಸ್ ಬರುವಾಗ ದುಷ್ಕರ್ಮಿಯೊಬ್ಬ ಕೊಲೆಗೈದಿರುವುದನ್ನು ಖಂಡಿಸಿ ನಗರದ ಬಸವೇಶ್ವರ ವೃತ್ತದ ಬಳಿ ಆತನ ಶವವಿದ್ದ ಅಂಬ್ಯುಲೆನ್ಸ್ ವೃತ್ತದ ಬಳಿ ನಿಲ್ಲಿಸಿ ಪ್ರತಭಟನೆ ನಡೆಸಿದರು.
ಇದೇ ವೇಳೆ ಕೋಲಿ ಸಮಾಜದವರ ಮೇಲೆ ಜಿಲ್ಲೆಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಸಾಕಷ್ಟು ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ನಡೆದರು ಪೊಲೀಸರು ಯಾವುದೇ ಸಮರ್ಪಕ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಹಣದ ಸಂಬಂಧ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಆರೋಪಿಯನ್ನು ಬಂಧಿಸಿರುವುದು ಸಮಾಧಾನ ತಂದಿದೆ. ಆದರೆ ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪೂಜಾರಿ ಹತ್ಯೆ ಅತ್ಯಂತ ಹೇಯ ಕೃತ್ಯವಾಗಿದೆ. ಈ ಕೊಲೆಯಿಂದ ಯಾರ ಕೈವಾಡಿದೆ ಪೊಲೀಸರು ತೀವ್ರ ತನಿಖೆ ನಡೆಸಿ ಕೊಲೆ ಹಿಂದೆ ಅಡಗಿದ ಕಾಣದ ಕೈಗಳ ಮೇಲೂ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಸ್ಥಳಕ್ಕೆ ಆಗಮಿಸಿ ಪೊಲೀಸ್ ಪಡೆ ಮತ್ತು ಸ್ಥಳೀಯ ಸಿಪಿಐ ಜನರನ್ನು ಸಮಾಧಾನಿಸಿ ಶವ ಪರೀಕ್ಷೆಗೆ ಮೊದಲು ಅನುಕೂಲ ಕಲ್ಪಿಸಿ ಎಂದು ಶವವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಯಾಣಿಕರಿಗೆ ಅಡೆತಡೆಯುಂಟಾಗಿರುವುದು ಕಂಡು ಬಂದಿತು.
ಆಸ್ಪತ್ರೆ ಬಳಿ ಮತ್ತೆ ಪ್ರತಿಭಟನೆಃ ಶವ ಪರೀಕ್ಷೆಗೆಂದು ಸರ್ಕಾರಿ ಆಸ್ಪತ್ರೆಗೆ ತಂದ ಶವವನ್ನು ಪರೀಕ್ಷೆ ಕೇಂದ್ರ ಸ್ಥಳಕ್ಕೆ ಒಯ್ಯಲಾಯಿತು.
ಈ ಮಧ್ಯೆ ಆಸ್ಪತ್ರೆ ಬಳಿ ಸೇರಿದ ಕೋಲಿ ಸಮಾಜ ಬಾಂಧವರು ಇಲ್ಲಿಯೂ ಕೆಲಹೊತ್ತು ಕೊಳೆ ಖಂಡಿಸಿ ಪ್ರತಿಭಟನೆಗೆ ಇಳಿದರು. ಪೊಲೀಸರು ಸಮುದಾಯದ ಮುಖಂಡರ ಜೊತೆ ಮಾತನಾಡಿ ಸಮಧಾನ ಪಡಿಸಿದರು. ಈ ಸಂದರ್ಭದಲ್ಲಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ, ರಾಜ್ಯ ಯುವ ಕೋಲಿ ಸಮಾಜದ ಅಧ್ಯಕ್ಷ ಶಿವಾಜಿ ಮೆಟೆಗಾರ, ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ. ಪ್ರಧಾನ ಕಾರ್ಯದರ್ಶಿ ಸಣ್ಣ ನಿಂಗಣ್ಣ ನಾಯ್ಕೋಡಿ, ಮಹಾದೇವಪ್ಪ ಸಾಲಿಮನಿ, ನಾಗಪ್ಪ ತಹಸೀಲ್ದಾರ, ಶಿವಪ್ಪ ರಸ್ತಾಪುರ ಸೇರಿದಂತೆ ಸಮುದಾಯದ ಯುವಕರು ಕೊಲೆಯಾದ ಪೂಜಾರಿಯ ಯವರ ಸಂಬಂಧಿಕರು ಆಪ್ತರು ಭಕ್ತರು ಭಾಗವಹಿಸಿದ್ದರು.