ಅಂಕಣ

ಸಾದಾ ಜೀವನ ಉಚ್ಛ ವಿಚಾರವಾದಿ ಬಾಪೂಜಿ..ಜಯಶ್ರೀ ಭಂಡಾರಿ ಬರಹ

ನನ್ನೊಳಗಿನ ಬಾಪೂ..

ರಾಷ್ಟ್ರಪಿತ, ಬಾಪೂ ಹಾಗೂ ಮಹಾತ್ಮ ಎಂದು ಪ್ರೀತಿಯಿಂದ ಕರೆಯಲ್ಪಡುವ ದಿವ್ಯ ಚೇತನ ಗಾಂಧೀಜಿ.ಅವರ ದಿವ್ಯ ಸ್ಮರಣೆ ಸದಾ ಶಾಶ್ವತವಾದದು. ಅವರ ಪ್ರಭಾವ ಸ್ವಾತಂತ್ರ್ಯ ಯೋಧ ತಾತನ ಮೇಲೆ.ಪ್ರೀತಿಯ ತಾತನ ಪ್ರಭಾವ , ಆಶಿರ್ವಾದ ಮೊಮ್ಮಗಳ ಮೇಲೆ.

ಗಾಂಧೀಜಿಯವರ ಅನೇಕ ಉತ್ತಮ ಗುಣಗಳಲ್ಲಿ ನಾನು ಇಷ್ಟಪಡುವ ಉತ್ತಮ ಗುಣ ಸ್ವಾವಲಂಬಿತನ. ಗಾಂಧೀಜಿಯವರು ಯಾವಾಗಲೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಯೋಧ ನೀಲಕಂಠಜಿ ಗಣಾಚಾರಿ ಅವರ ಹಿರಿಯ ಮೊಮ್ಮಗಳಾದ ನಾನು ಅಜ್ಜನಿಂದ ಸಾಕಷ್ಟು ಕಲಿತಿದ್ದೇನೆ.

ಅಜ್ಜ ದಿನಾಲೂ ಮುಂಜಾನೆ ಹಾಗೂ ಸಾಯಂಕಾಲ ಎರಡು ಪ್ರಾರ್ಥನೆಗಳಲ್ಲಿ ಗಾಂಧೀಜಿಯವರ ಒಡನಾಟದ ಕುರಿತು ನಮಗೆ ಸಾಕಷ್ಟು ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಕರ್ನಾಟಕದ ಗಾಂಧಿ ಹಾಗೂ ಸರ್ವೋದಯ ಸಂತನೆಂದು ಕರೆಸಿಕೊಂಡ ನನ್ನ ತಾತ ಗಾಂಧೀಜಿಯವರ ಜೊತೆಗೆ ಅನೇಕ ಬಾರಿ ಜೈಲುವಾಸವನ್ನು ಕಂಡವರು.

ಗಾಂಧಿ ತರಹ ಪಂಚೆ ಹಾಗೂ ಮೇಲೆ ಒಂದು ವಸ್ತ್ರವನ್ನು ಧರಿಸುತ್ತಿದ್ದ ನನ್ನ ಅಜ್ಜ ನೋಡಲು ಕುಳ್ಳ ಆಗಿದ್ದರೂ ತುಂಬಾ ನಿಷ್ಠುರವಾದಿ ಗಳಾಗಿದ್ದರು. ಮದ್ಯಪಾನ ನಿಷೇಧ ಹಾಗೂ ಗೋಹತ್ಯಾ ನಿಷೇಧ ಚಳುವಳಿಗಳಲ್ಲಿ ವಿನೋಭಾರ ಜೊತೆಗೆ ಸದಾ ಭಾಗಿಯಾದರು ನನ್ನ ತಾತ. ಶತ್ರುಗಳನ್ನು ಕೂಡ ಮಿತ್ರರಂತೆ ಕಾಣುತ್ತಿದ್ದ ಗಾಂಧೀಜಿಯವರ ಗುಣ ನನ್ನ ಮೇಲೆ ತುಂಬಾ ಪರಿಣಾಮ ಬೀರಿದೆ.

ರಕ್ತಪಾತವಿಲ್ಲದೆ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇತಿಹಾಸವನ್ನು ಜಗತ್ತಿನಲ್ಲಿ ನಾವು ಕಾಣಲಾರೆವು. ಅಂತ ಮಹಾನ್ ಮಾನವ ಗಾಂಧೀಜಿ ನಮ್ಮವರು ಎಂಬುದೇ ನಮಗೆ ತುಂಬಾ ಹೆಮ್ಮೆ ಪಡುವಂಥ ಸಂಗತಿ. ಸತ್ಯ, ಶಾಂತಿ, ಅಹಿಂಸೆ ಗಳೆಂಬ ಅಸ್ತ್ರಗಳೊಂದಿಗೆ, ಸಾದಾ ಜೀವನ ಉಚ್ಚ ವಿಚಾರ ಹೊಂದಿದ ಬಾಪೂಜಿ ನಮ್ಮೆಲ್ಲರ ಆತ್ಮಬಂಧು.

ಗಾಂಧೀಜಿಯವರ ಸ್ವಾವಲಂಬಿ ಜೀವನ, ಸರಳತೆ, ನಿಷ್ಠುರತೆ ಹಾಗೂ ಮಾನವ ಪ್ರೀತಿ ನನ್ನ ಮೇಲೆ ಪರಿಣಾಮ ಬೀರಿದ ಅಂಶಗಳು.” ಈಶನಾವಾಸವಿ ಜಗದೊಳಿಹುದೆಲ್ಲವೂ” ಎಂಬ ಅವರ ಪ್ರಾರ್ಥನೆಯನ್ನು ಹಾಗೂ “ರಘುಪತಿ ರಾಘವ “ಎಂಬ ಭಜನೆಯನ್ನು ನಾನು ದಿನನಿತ್ಯ ಹೇಳುತ್ತಿರುತ್ತೇನೆ.

ಅಲ್ಲದೆ ಗಾಂಧಿ ಜಯಂತಿಯ ಆಚರಣೆಯ ನಿಮಿತ್ಯ ನನ್ನ ಶಾಲೆಯಲ್ಲಿ ಮಕ್ಕಳಿಗೆ ಪ್ರಾರ್ಥನೆ ಹಾಗೂ ಭಜನೆಗಳನ್ನು ಹೇಳುವುದರೊಂದಿಗೆ ಧರ್ಮಗ್ರಂಥಗಳ ಪಠಣ ಮಕ್ಕಳಿಂದ ಮಾಡಿಸುತ್ತೇನೆ. ಇಂದಿಗೂ ನಾನು ನನ್ನ ಮನೆಯ ಎಲ್ಲ ಕೆಲಸಗಳನ್ನು ನಾನೇ ಮಾಡಿಕೊಳ್ಳುವುದರ ಮೂಲಕ ಗಾಂಧೀಜಿಯವರ ಉತ್ತಮವಾದ ಗುಣ ಸ್ವಾವಲಂಬಿತನ ಇವತ್ತಿನವರೆಗೂ ಪಾಲಿಸಿಕೊಂಡು ಬರುತ್ತಿದ್ದೇನೆ.

ಮಾನವತೆಯ ಹರಿಕಾರರಾಗಿ ದೇಶ ಬೆಳಗಿದರು. ಇಂದು ನಾವು ಗಾಂಧೀಜಿಯವರ 150 ನೇಯ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿದ್ದೇವೆ.ಎಂದಿಗಿಂತಲೂ ಇಂದು ನಮಗೆ ಗಾಂಧೀಜಿಯವರ ತತ್ವಗಳು ತುಂಬಾ ಅವಶ್ಯಕವೆನಿಸುತ್ತಿವೆ. ಗಾಂಧೀಜಿ ರಾಮರಾಜ್ಯದ ಕನಸು ನನಸಾಗುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಿದೆ.
ಸರ್ವೇ ಜನಾಹ ಸುಖಿನೋ ಬಂತು.

-ಜಯಶ್ರೀ ಭ.ಭಂಡಾರಿ.
 ಬಾದಾಮಿ.

Related Articles

Leave a Reply

Your email address will not be published. Required fields are marked *

Back to top button