ಪ್ರಮುಖ ಸುದ್ದಿವಿನಯ ವಿಶೇಷ

ಬಿದ್ದರೂ ಎದ್ದರೂ ಬೆಳಗೆರೆ ನಡೆದದ್ದೇ ದಾರಿ.!

ಬಿದ್ದರೂ ಎದ್ದರೂ ಬೆಳಗೆರೆ ನಡೆದದ್ದೇ ದಾರಿ.!
..
ಬೆಳಗೆರೆ ಈ ಹೆಸರೇ ಮಾಂತ್ರಿಕ, ಅನನ್ಯ ವ್ಯಕ್ತಿತ್ವ. ನಿರ್ಭಿಡೆ ಬದುಕು. ಬಿದ್ದರೂ ಎದ್ದರೂ ಬೆಳಗೆರೆ ನಡೆದದ್ದೇ ದಾರಿ.

ಏಳುಬೀಳುಗಳನ್ನು ಕಂಡ ಅವರು ಸಾಧಿಸಿದ್ದು ಮಹತ್ತರವೇ.
ಲಂಕೇಶ್ ಒಂದು ರೀತಿ, ಇವರದು ಇನ್ನೊಂದು ಬಗೆ. ಬಳ್ಳಾರಿಯಿಂದ ಬಂದು ಹೈರಾಣಾಗಿ ಅದೇ ಲಂಕೇಶರ ಬಳಿ ಹೋಗಿ ಕೆಲಸ ಕೇಳಿ ಪಡೆಯುತ್ತಾರೆ. ಅಷ್ಡೇ ಬೇಗ ಬಿಡುತ್ತಾರೆ. ಏನೇನೊ ಅನುಭವಿಸಿ, ‘ಹಾಯ್ ಬೆಂಗಳೂರ್’ ಎನ್ನುವ ವಿಚಿತ್ರ ಹೆಸರಿನ ಪತ್ರಿಕೆ ಮಾಡಿ ಕಸುವಿಗೆ ಬೀಳುತ್ತಾರೆ.

ಅದು ಬೆಂಗಳೂರಿಗೆ ಮಾತ್ರ ಸೀಮಿತ ಅಂತ ತಿಳಿದು ಮಾಡಿದ್ದು. ಆದರೆ, ಬರವಣಿಗೆ ಅವರನ್ನು ರಾಜ್ಯದ ಕೊನೆಗೂ ಮುಟ್ಟಿಸಿ ಹಾಯ್ ಬಳ್ಳಾರಿ, ಹಾಯ್ ತುಮಕೂರು, ಹಾಯ್ ಶಿವಮೊಗ್ಗ, ಹಾಯ್ ಬಿಜಾಪುರ ಅಂತ ಚಿಗುರುವಂತೆ ಎಲ್ಲೆಡೆ ಪತ್ರಿಕೆಗಳು ಬರಲೂ ಇವರು ಕಾರಣರಾಗಿದ್ದೀಗ ಇತಿಹಾಸ.
ಹೆಣ್ಗರುಳು..
ರವಿ ಬೆಳಗೆರೆ ಅವರದು ಹೆಣ್ಣಿನ ಕರುಳು. ಎಲ್ಲದಕ್ಕೂ ಮಿಡಿವ ಮನಸ್ಸು. ಅಮ್ಮನ ಬಗ್ಗೆ ಕ್ಷಣ ಕ್ಷಣಕ್ಕೂ ಮಿಸುಕಾಡಿದರು.

ಕಾರಣ, ಇವರ ತಾಯಿ ಬದುಕಿದ್ದಾಗ ಬರೀ ರವಿಯ ಅಶಿಸ್ತಿನ, ಕುಡಿತದ, ಅಬ್ಬೇಪಾರಿ, ಅಲೆಮಾರಿ ಜೀವನವನ್ನೇ ನೋಡಿದರು. ಇವರು ಯಶಗಳಿಸಿ ಗೂಡುಕಟ್ಟಿಕೊಳ್ಳುವಷ್ಟರಲ್ಲಿ ಅವರು ಇರದಂಗಾಗಿತ್ತು. ಗಂಡನಿಲ್ಲದೆ ಇದ್ದೊಬ್ಬ ಮಗ ದಾರಿ ಬಿಡದಂತೆ ಬದುಕಿದರೆ ಸಾಕೆನ್ನುವ ಬಯಕೆ ಅವರದು.

ಆದರೆ, ಇವರು ಊರೆಲ್ಲ ಅಲೆವ ಅವರೇ ಬರೆದುಕೊಂಡಂತೆ ಉಡಾಳ. ತಮಗಿಂತ ದೊಡ್ಡವರಾದ ಲಲಿತಮ್ಮರನ್ನು ಮದುವೆಯಾಗಿ, ಬಳ್ಳಾರಿಯ ಯಾವುದೋ ಕಾಲೇಜಿನಲ್ಲಿ ಶಿಕ್ಷಕನಾಗಿ, ಆಮೇಲೆ ಅಲ್ಲೇ ಪತ್ರಿಕೆ ಶುರು ಮಾಡಿ ಹಾಳೆದ್ದು ನಂತರ ಸಂಯುಕ್ತ ಕರ್ನಾಟಕ ಸೇರಿ, ಕರ್ಮವೀರ ಕಟ್ಟಿ ಬೆಳೆದವರು ಬೆಳಗೆರೆ ರವಿಯವರು. ಹುಬ್ಬಳ್ಳಿಯವರೇ ಆಗಿ ಬದುಕು ಮಾಡಿ,‌ ಉತ್ತರ ಕರ್ನಾಟಕದ ಗಟ್ಟಿತನ ಬೆಳೆಸಿಕೊಂಡವರು.

ಇದಕ್ಕೆ ಕಾರಣ, ಮೂಲತಃ ಬಳ್ಳಾರಿಯವರಾಗಿದ್ದು. ಹೀಗೆ ಸಾಗಿದ ಬೆಳಗೆರೆ ಬದುಕು ಲೋಕ ಶಿಕ್ಷಣ ಟ್ರಸ್ಟ್ ನ ಶಾಮರಾಯರ ನೆರಳಿಂದ ಬೆಂಗಳೂರು ತಲುಪಿಯೂ ಸುಖಕರವಾಗಿರಲಿಲ್ಲ. ಅಲ್ಲಿಂದ ಹೊರ ಬಂದು ಏನೇನೊ ಮಾಡಿ, ಅಗ್ನಿ ಶ್ರೀಧರ್ ಅವರ ಸಹಾಯದಿಂದ ‘ಹಾಯ್..’ ಶುರು ಮಾಡಿದರು.

ಪದ್ಮನಾಭನಗರದ ಸಣ್ಣ ಖೋಲಿಯಲ್ಲಿ ಸುರುವಾದ ಈ ಪತ್ರಿಕೆ ಹುಚ್ಚಾಟದ ಅಲೆಯನ್ನೇ ಸೃಷ್ಟಿಸಿತು. ಹುಚ್ಚುತನವಿದ್ದರೇನೆ ಏನಾದರೂ ಸಾಧ್ಯ ಅನ್ನೋದು ಬೆಳಗೆರೆ ಅವರ ಭರವಸೆಯೂ ಹೌದು. ಹಾಗೆ ಬಿರುಸಾಗಿ ಬೆಳೆದ ರವಿ ಬೆಳಗೆರೆ ಮೂಲತಃ ಕತೆಗಾರ, ಕಾದಂಬರಿಕಾರ, ಸಾಹಿತಿ. ಸಾಹಿತ್ಯ, ಇತಿಹಾಸದ ವಿದ್ಯಾರ್ಥಿ. ಇದೆಲ್ಲ ಅವರ ಗುಣ ಪತ್ರಿಕೆ ಮಾಡಿ ಅದರ ಗಿರಣಿಗೆ ಬಿದ್ದ ಮೇಲೆ ಮರೆಯಾಯಿತು. ಇವರು ಶುದ್ಧ ಸಾಹಿತ್ಯದಲ್ಲಿದ್ದರೆ ಚೆಂದಗಿತ್ತು ಅನ್ನುವವರೂ ಇದ್ದಾರೆ.

ಇವರನ್ನು ಎಷ್ಟೇ ಬೈದರೂ ಒಳ ಮನಸ್ಸಲ್ಲಿ ಮೆಚ್ಚುಗೆ, ಆಪ್ತತೆ ಇದ್ದವರೇ ಹೆಚ್ಚು. ಭೀಮಾತೀರದ ಕ್ರೌರ್ಯಗಳ ಬಗ್ಗೆ ರೋಮಾಂಚನ ಸೃಷ್ಟಿಸಿ ಬರೆದವರು ಇವರು. ‘ಭೀಮಾ ತೀರ’ ಎಂದು ಹೆಸರು ಬರಲು ಇವರೇ ಕಾರಣ.

ಬೆಳಗೆರೆ ಅವರು ಪತ್ರಿಕೋದ್ಯಮದಲ್ಲಿ ತಲ್ಲಣ ಸೃಷ್ಟಿಸಿದ ಜೀವ. ಸಾಮಾನ್ಯರನ್ನು ಓದುಗರನ್ನಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈಗಿನ ಡಿಜಿಟಲ್ ದಿನಗಳು ಇಲ್ಲದೇ ಇರುವ ದಿನಗಳಲ್ಲೇ ಮಹತ್ತರದನ್ನು ಅವರು ಬರೆದು, ಚಿತ್ರ ಸಮೇತ ಪ್ರಕಟಿಸಿ ಮನೆ ಮಾತಾದರು. ಅಸಂಖ್ಯಾತ ಓದುಗರನ್ನು ಸೃಷ್ಟಿ ಮಾಡಿದರು. ಬರೆಯುವುದನ್ನು ಉದ್ಯಮವಾಗಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ.

ಒಡನಾಟ
ಬೆಳಗೆರೆ ಅವರು ನನ್ನಂತಹ ಅನೇಕರೊಂದಿಗೆ ಅನ್ಯೋನ್ಯ ಸಂಬಂಧ ಹೊದಿದ್ದರು. ದೌರ್ಬಲ್ಯಗಳನ್ನು ಮುಚ್ಚಿಟ್ಟುಕೊಂಡು ಬದುಕುವವರ ಮಧ್ಯೆ ಬೆಳಗೆರೆ ನೇರವಾಗಿ, ತೆರೆದಂತೆ ದೌರ್ಬಲ್ಯಗಳ ಜತೆಗೇ ಬದುಕಿದರು.

ಇದ್ದದ್ದನ್ನು ಇದ್ದ ಹಾಗೆ ‘ಖಾಸ್ ಬಾತ್’ ಅಂತ ಬರೆದು ಮನ ಕಲಕಿದರು. ತಮ್ಮಷ್ಟಕ್ಕೆ ತಾವೇ ಅಳುವವರಿಗೂ ದನಿಯಾದರು. ಏನಾದರೂ ಸಾಧಿಸುವ ಮನಸ್ಸುಳ್ಳವರಿಗೂ ಪ್ರೇರಣೆಯಾದರು. ಅಸಂಖ್ಯಾತ ಅಕ್ಷರಗಳ ಹೊಸೆದು ಹತ್ತಾರು ಪುಸ್ತಕ ಬರೆದರು. ಮೊದಲು ಹೇಳಿದಂತೆ, ಕೆಟ್ಟತನಗಳ ಜತೆಗೇ ಇದ್ದು ಒಳ್ಳೆಯವರಾಗಿರಲು ಹೆಣಗಿದರು.

‘ಮನುಷ್ಯ ಬೆತ್ತಲಾದಂತೆ ಮಾನವಂತನಾಗುತ್ತಾನೆ’ ಅಂತ ಬೆತ್ತಲಾದರು. ಇರುವ ತನಕ ಎಲ್ಲರ ಸಾಂಗತ್ಯ ಬಯಸಿದರು. ಹಲವರೊಂದಿಗೆ ಜಗಳ ಮಾಡಿಕೊಂಡರೂ ಮತ್ತೆ ಅದೆಲ್ಲ ಮರೆತು ಪ್ರೀತಿ ಬಯಸಿದರು. ಲೆಕ್ಕವಿಲ್ಲದಷ್ಟು ಯುವಕ, ಯುವತಿಯರಿಗೆ ಓದು, ಬರವಣಿಗೆ, ಪುಸ್ತಕ ಪ್ರೀತಿಗೆ ಸರಕಾದರು.

ಇಷ್ಟು ಸಾಕಲ್ಲವೇ ಒಬ್ಬ ಪತ್ರಕರ್ತನಾಗಿ ಬದುಕಿದವನಿಗೆ.
ಟೀಕೆಗಳು ಎಲ್ಲರಿಗೂ ಇವೆ. ಬೆಳಗೆರೆ ಅವರಿಗೆ ಜರ ಹೆಚ್ಚೇ ಇವೆ. ಆದರೂ ಬೆಳಗಿನ ಜಾವದಿಂದ ಅವರ ಬಗೆಗಿನ ಚರ್ಚೆಯೇ, ನೆನಪೇ ಅವರ ಬದುಕಿನ ಪ್ರತಿಫಲನ ಅನ್ನಬಹುದು.
ನನ್ನೊಂದಿಗೆ ತುಂಬ ಆಪ್ತವಾಗಿದ್ದ, ನೋವಿಗೂ ನಲಿವಿಗೂ ಮಾತನಾಡ‌ಬಲ್ಲ ಹಿರಿಯನೊಬ್ಬನನ್ನು ಕಳೆದುಕೊಂಡ ದುಃಖ ನನ್ನದು. ಭೌತಿಕವಾಗಿ ನಿಮಗೆ ವಿದಾಯ ಸರ್.. ಇಷ್ಟೂ ಹೇಳದಿದ್ದರೆ ನಾನು ‘ಪಾಪಿಗಳ ಲೋಕದಲ್ಲಿ’ನ ಪಾಪಿಯಾಗಬೇಕಾಗುತ್ತದೆ.

ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ

Related Articles

Leave a Reply

Your email address will not be published. Required fields are marked *

Back to top button