ಚುನಾವಣೇಲಿ ಬಹುಮತ ಸಿಗದಿದ್ದರೆ ಜೆಡಿಎಸ್ ನಿಲುವೇನು.? ದೇವೇಗೌಡರು ಹೇಳಿದ್ದೇನು..?
ಎಲ್ಲರಿಂದಲೂ ಸಾಕಷ್ಟು ತೊಂದರೆ ಅನುಭವಿಸಿದ್ದೇವೆಃಎಚ್ ಡಿಡಿ
ಹಾಸನಃ ಮುಂದಿನ ಚುನಾವಣೆಯಲ್ಲಿ ಬಹುಮತ ಸಿಗದಿದ್ದರೆ, ವಿರೋಧ ಪಕ್ಷದಲ್ಲಿ ಕೂಡುತ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪುನರುಚ್ಚರಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆ ಯಾರೊಂದಿಗೂ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ. ಈಗಾಗಲೇ ಎಲ್ಲರಿಂದಲೂ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಹೀಗಾಗಿ ಈ ಬಾರಿ ಸಮ್ಮಿಶ್ರ ಸರ್ಕಾರ ಮಾಡುವ ಅನಿವಾರ್ಯತೆ ಎದುರಾದರೆ, ನಾವು ಯಾರೊಂದಿಗೂ ಕೈಜೋಡಿಸುವದಿಲ್ಲ. ವಿಪಕ್ಷ ಸ್ಥಾನ ಅಲಂಕರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಆ ಮೂಲಕ ನಾಡಿನ ಅಭಿವೃದ್ಧಿಗೆ ಸಹಕರಿಸುತ್ತೇವೆ. ಹಿಂದೆ ಜೆಡಿಎಸ್‍ಗೆ ಶ್ರೀನಿವಾಸ ಪ್ರಸಾದರನ್ನು ನಾನೇ ಕರೆ ತಂದಿದ್ದೆ. ಆಗ ಸಿದ್ರಾಮಯ್ಯ ಪ್ರಶ್ನೆ ಮಾಡಿದ್ದರು. ಈಗ ಸಿದ್ರಾಮಯ್ಯನವರ ವಿರುದ್ಧ ನನ್ನ ಹೋರಾಟ ಎಂದು ಶ್ರೀನಿವಾಸ ಪ್ರಸಾದ ಹೇಳುತ್ತಿದ್ದಾರೆ ಎಂದರು.
ನಂಜನಗೂಡು ಉಪ ಚುನಾವಣೆಯಲ್ಲಿ ಸ್ವತಂತ್ರರಾಗಿ ಸ್ಪರ್ಧೆ ಮಾಡಿ ಎಂದು ಸಲಹೆ ನೀಡಿದ್ದೆ. ಆದರೆ ಅವರು ಬಿಜೆಪಿ ಸೇರಿ ಸ್ಪರ್ಧಿಸಿದ್ದರು. ಈಗ ಚುನಾವಣೆಗೆ ನಿಲ್ಲುವದಿಲ್ಲ ಎನ್ನುತ್ತಿದ್ದಾರೆ. ಸಿಪಿ ಯೋಗಿಶ್ವರ ನಮ್ಮ ಪಕ್ಷಕ್ಕೆ ಬರೋದು ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಒಬ್ಬ ನಟ. ಆತನ ಚರಿಷ್ಮಾ ಪಕ್ಷಕ್ಕೆ ಅನುಕೂಲವಾಗಲಿದೆ ಎಂದಾದರೆ ಬಳಕೆ ಮಾಡಿಕೊಳ್ಳುತ್ತೇವೆ. ಪಕ್ಷ ಬಲವರ್ಧನೆಗೊಳಿಸಲಿದ್ದಾರೆ ಎಂದರೆ ಏಕೆ ಬಳಸಿಕೊಳ್ಳಬಾರದು ಎಂದು ಪ್ರಶ್ನಿಸಿದರು. ಪ್ರಜ್ವಲ್ ರೇವಣ್ಣ ಈಗಾಗಲೇ ಪಾಲಿಟಿಕ್ಸ್ ನಲ್ಲಿದ್ದಾನೆ. ಪ್ರಜ್ವಲ್ ಚುನಾವಣೆಗೆ ನಿಲ್ಲುವುದು, ಬಿಡುವುದರ ಅಂತಿಮ ನಿರ್ಧಾರ ನನ್ನದು. ಸುಮ್ಮ ಹುಣಸೂರು, ಬೇಲೂರು, ಈಗ ರಾಜರಾಜೇಶ್ವರಿ ನಗರ ಅಂತಿದ್ದಾರೆ. ಅದೆಲ್ಲ ಸುಳ್ಳು ಎಂದು ಸ್ಪಷ್ಟ ಪಡಿಸಿದರು.