ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ವೈಜ್ಞಾನಿಕ ಮನೋಧರ್ಮ ತಿಳಿಸಿ
ಯಾದಗಿರಿಃ ಪ್ರಸ್ತುತ ಸಂದಿಗ್ಧ ಸಾಮಾಜಿಕ ಸಂದರ್ಭದಲ್ಲಿ ಯುವ ಜನತೆಗೆ ಮಾನವೀಯ ಮೌಲ್ಯಗಳು ಹಾಗೂ ವೈಜ್ಞಾನಿಕ ಮನೋಧರ್ಮವನ್ನು ಕುರಿತು ತಿಳಿಸುವ ಅಗತ್ಯವಿದೆ ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕರಿಗುಳ್ಳೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಬಾಪೂಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕದಿಂದ ಆಯೋಜಿತಗೊಂಡ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ವಿದ್ಯಾರ್ಥಿಗಳು ಓದಿನೊಂದಿಗೆ ಮಾನವೀಯತೆ, ನಿಷ್ಠೆ, ಪ್ರಾಮಾಣಿಕತೆ, ಸೇವಾ ಮನೋಭಾವನೆ, ದೇಶಾಭಿಮಾನ, ಆತ್ಮವಿಶ್ವಾಸ, ಪರಂಪರೆಯ ಹಾಗೂ ಗುರು ಹಿರಿಯರ ಬಗ್ಗೆ ಗೌರವ, ಹೊಂದಾಣಿಕೆ, ಸಹಿಷ್ಣುತೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡು ವೈಚಾರಿಕ, ವೈಜ್ಞಾನಿಕ ಮನೋಭಾವದಿಂದ ಉತ್ತಮ ನಾಗರಿಕರಾಗಬೇಕು.
ಜಾತಿ, ಪಂಥ, ಧರ್ಮ ಮುಂತಾದ ಹೆಸರಿನಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗಿರುವ ಇಂದಿನ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳ ಮತ್ತು ವೈಜ್ಞಾನಿಕ ಮನೋಭಾವನೆಯ ತಿಳುವಳಿಕೆಯ ಅವಶ್ಯಕತೆ ಹೆಚ್ಚಾಗಿದೆ. ಮುಖ್ಯವಾಗಿ ಯುವಜನತೆ ಇದನ್ನು ಗ್ರಹಿಸಬೇಕಾಗಿದೆ ಎಂದು ಹಲವಾರು ನಿರ್ದೇಶನಗಳ ಮೂಲಕ ತಿಳಿಸಿಕೊಟ್ಟರು.
ಶರಭಲಿಂಗೇಶ್ವರ ಸಂಸ್ಥಾನ ಮಠದ ಶರಭೇಶಯ್ಯ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಮುಖಂಡರಾದ ಸಂಜೀವರೆಡ್ಡಿ ದರ್ಶನಾಪೂರ, ತಾ.ಪಂ ಸದಸ್ಯರಾದ ನಾಗಣ್ಣ ಪೂಜಾರಿ, ಹಿರಿಯ ಉಪನ್ಯಾಸಕ ಸೈಯದ್ ಚಾಂದಪಾಷ, ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ವೈದ್ಯ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಲಿಂಗಣ್ಣ ಸಾಹು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್ನಸ್ಸೆಸ್ ಎ ಘಟಕದ ಅಧಿಕಾರಿ ಪ್ರೊ. ಸಂಗಣ್ಣ ದಿಗ್ಗಿ ಸ್ವಾಗತಿಸಿದರು. ಎನ್ನೆಸ್ಸೆಸ್ ಬಿ ಘಟಕದ ಅಧಿಕಾರಿ ಶುಭಲಕ್ಷ್ಮೀ ಸಂಕಾ ಅವರು ಪ್ರಾಸ್ತಾವಿಕ ಮಾತನಾಡಿ, ಶಿಬಿರದ ದ್ಯೇಯ ಉದ್ದೇಶಗಳನ್ನು ತಿಳಿಸಿಕೊಟ್ಟರು. ಎನ್ನೆಸ್ಸೆಸ್ ಶಿಬಿರದ ಶರಭಲಿಂಗೇಶ್ವರ ತಂಡದ ಸದಸ್ಯೆ ಭಾಗೀರಥಿ ನಿರೂಪಿಸಿದರು, ಪ್ರತಿಭಾ ಮತ್ತು ನಂದಿನಿ ಪ್ರಾರ್ಥಿಸಿದರು.