ಶೈಕ್ಷಣಿಕವಾಗಿ ಈಡಿಗ ಸಮಾಜ ಸದೃಢವಾಗಲಿ – ದರ್ಶನಾಪುರ
ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ 165 ನೇಯ ಜಯಂತ್ಯುತ್ಸವ
ಯಾದಗಿರಿ, ಶಹಾಪುರಃ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಸೌಲಭ್ಯ ವಂಚಿತರಾಗಿರುವ ಈಡಿಗ ಸಮಾಜ ಶೈಕ್ಷಣಿಕವಾಗಿ ಮೊದಲು ಪ್ರಗತಿ ಸಾಧಿಸಬೇಕಿದೆ. ಆ ನಿಟ್ಟಿನಲ್ಲಿ ಸಮಾಜದ ಮುಖಂಡರು ಸಂಘಟನಾತ್ಮಕವಾಗಿ ಶ್ರಮಿಸಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.
ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬ್ರಹ್ಮರ್ಷಿ ನಾರಾಯಣ ಗುರುಗಳ 165 ನೇಯ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಡಿಗ ಸಮಾಜ ಶೈಕ್ಷಣಿಕವಾಗಿ ತೀರ ಹಿಂದುಳಿದೆ. ಶೈಕ್ಷಣಿಕವಾಗಿ ಪ್ರಬಲರಾಗಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢತೆ ಹೊಂದಬೇಕು.
ಯಾವುದೇ ಸಮುದಾಯ ಶಿಕ್ಷಣದಿಂದ ಮಾತ್ರ ಸಮೃದ್ಧಿ ಹೊಂದಲು ಸಾಧ್ಯವಿದೆ. ಹೀಗಾಗಿ ಸಮಾಜದ ಸದ್ಗುರು ಬ್ರಹ್ಮರ್ಷಿ ನಾರಾಯಣ ಗುರುಗಳ ಆದರ್ಶಗಳನ್ನು ಬೆಳೆಸಿಕೊಂಡು ಉಳಿದೆಲ್ಲ ಸಮಾದಜ ಜೊತೆಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಮಾಜದ ಜೊತೆಗೆ ತಾವೂ ಬೆಳೆಯಬೇಕು. ಶರಣರು ಸಂತರು ದಾರ್ಶನಿಕರು ಅಂದು
ಸಮಾಜದ ಅಂಕುಡೊಂಕುಗಳನ್ನು ತಮ್ಮ ಜ್ಞಾನದಿಂದ ತಿದ್ದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಶರಣ, ಸಂತರ ಚರಿತ್ರೆಯನ್ನು ಓದುವ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲ ಅಳವಡಿಸಿಕೊಂಡು ನಡೆಯಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ಈಡಿಗ ಸಮಾಜವನ್ನು ಮುಖ್ಯವಾಹಿನಿಗೆ ಕರೆ ತರುವಲ್ಲಿ ಸಮಾಜದ ಮುಖಂಡರು ಶ್ರಮ ಅಗತ್ಯವಿದೆ.
ದೇಶದಲ್ಲಿ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತವಾಗಿದ್ದು, ಅವುಗಳ ಕಡಿವಾಣಕ್ಕೆ ಸಾಮಾಜಿಕ ಚಿಂತನೆಗಳು ನಡೆಯಬೇಕಿದೆ. ಸಮಾಜ ಕಟ್ಟುವ ಕೆಲಸ ಸಾಮಾನ್ಯವಲ್ಲ.
ಪ್ರಾಮಾಣಿಕ ಜವಬ್ದಾರಿಯಿಂದ ಕೆಲಸ ಮಾಡಬೇಕು. ಸಮಾಜದಲ್ಲಿ ಹಲವಾರು ಸವಾಲುಗಳು ಎದುರಾಗಬಹದು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು. ಪರಸ್ಪರರ ಸಹಕಾರ ಮನೋಭಾವದಿಂದ ಸಮಾಜದ ಏಳ್ಗೆಗೆ ಶ್ರಮಿಸಬೇಕು. ಹಿಂಜರಿಕೆಯೇ ಹಿಂದುಳಿವಿಕೆಗೆ ಕಾರಣವಾಗುತ್ತಿದೆ. ಇದನ್ನು ಮನವರಿಕೆ ಮಾಡಿಕೊಂಡು ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಶರಣಪ್ಪ ಸಲಾದಪುರ ಮಾತನಾಡಿ, ಹಿಂದುಳಿದ ಜನಾಂಗದ ಶ್ರೇಯೋಭಿವೃದ್ದಿಗೆ ಸಂವಿಧಾನ ಆಸರೆಯಾಗಿದ್ದು, ಡಾ.ಅಂಬೇಡ್ಕರವರ ಅಮೋಘ ಕೊಡುಗೆ ಸ್ಮರಣೆ ಮಾಡಬೇಕು ಎಂದರು. ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಉಪನ್ಯಾಸಕಿ ಹಣಮಂತಿ ಗುತ್ತೇದಾರ ಮಾತನಾಡಿ, ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ಜೀವನ ಆದರ್ಶಗಳು ಮತ್ತು ಅವರ ಜೀವನ ಚರಿತ್ರೆ ಕುರಿತು ವಿವರಿಸಿದರು.
ಸಮಾಜದ ಮುಖಂಡರಾದ ನಾಗರಾಜಗೌಡ ಕಡಿಮನಿ, ಹುಣಸಿಗಿ ಈಡಿಗ ಸಮಾಜದ ಅಧ್ಯಕ್ಷ ಬಸಯ್ಯ ಗುತ್ತೆದಾರ, ಜೇವರ್ಗಿ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸುರಪುರ ಅಧ್ಯಕ್ಷ ಸುಭಾಶ, ಕಲಬುರ್ಗಿ ಅಧ್ಯಕ್ಷ ಹಣಮಯ್ಯ, ರಾಯಚೂರ ಅಧ್ಯಕ್ಷ ಸುರೇಶ ಗುತ್ತೇದಾರ ಸೇರಿದಂತೆ ಸ್ಥಳೀಯ ಮುಖಂಡರಾದ ಭೀಮರಾಯ ಕಟ್ಟಿಮನಿ, ಬಾಲಯ್ಯಗೌಡ ಹೊಸಕೇರಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ವೆಂಕೋಬಾ ಗುತ್ತೇದಾರ, ನಾಗರಾಜಗೌಡ ಮಾನಸಗಲ್ ಇತರರು ಉಪಸ್ಥಿತರಿದ್ದರು. ನಾಗಯ್ಯ ವಕೀಲರು ಸ್ವಾಗತಿಸಿದರು. ಶಿಕ್ಷಕ ಸಂಗಯ್ಯ ನಿರೂಪಿಸಿದರು. ಸಂಗಣ್ಣ ಕಲಾಲ ವಂದಿಸಿದರು.