ನಿಸರ್ಗ ಪರಿಸರದಲ್ಲಿ ಕುವೆಂಪು ಅವರ ಕಾವ್ಯಾನುಸಂಧಾನ
ಜೀವನೋತ್ಸಾಹ ತುಂಬುವ ದೋಣಿಹಾಡು- ಕವಿ ತಳವಾರ
ಯಾದಗಿರಿ, ಶಹಾಪುರಃ ನಿಸರ್ಗದ ಒಂದೊಂದು ಸಣ್ಣ ಅಂಶದಲ್ಲೂ ಜೀವನೋತ್ಸಾಹವನ್ನು ಕಾಣುವ ಕವಿ ಕುವೆಂಪು ಅವರು ಯುವ ಪ್ರತಿಭೆಗಳಿಗೆ ಆದರ್ಶ ಕವಿಯಾಗಿ ಇಂದಿಗೂ ಅವರ ಕೃತಿಗಳ ಮೂಲಕ ಜೀವಂತವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಚಿತ್ರಕಲಾವಿದ, ಶಿಕ್ಷಕ ರುದ್ರಪ್ಪ ಎಸ್. ತಳವಾರ ಅಭಿಪ್ರಾಯಪಟ್ಟರು.
ತಾಲೂಕಿನ ಹುಲಕಲ್ ಗ್ರಾಮದ ಹೊರವಲಯದ ಪ್ರಾಕೃತಿಕ ಮಡಿಲಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಜ್ಯೋತಿರ್ಗಮಯ ಸೇವಾ ಸಂಸ್ಥೆಯಿಂದ ನಡೆದ ವಿಶ್ವಮಾನವ ದಿನಾಚರಣೆ, ಕಾವ್ಯಾನುಸಂಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ಅವರು ರಚಿಸಿದ ‘ದೋಣಿ ಹಾಡು’ ಕವಿತೆ ಇಂದಿಗೂ ಓದಿದ ಪ್ರತಿಯೊಬ್ಬರಿಗೂ ಜೀವನೋತ್ಸವ ತುಂಬುತ್ತಿದೆ. ಅದರಲ್ಲಿ ಬೆಳಗಿನ ಉಲ್ಲಾಸದ ವಾತಾವರಣ, ತರಂಗಗಳಲ್ಲಿ ತೇಲುವ ದೋಣಿ ವಿಹಾರ ಕುರಿತು ಅದ್ಭುತವಾಗಿ ವರ್ಣಿಸಿದ್ದಾರೆ.
ಕುವೆಂಪು ಅವರು ಕವಿತೆ ಮೂಲಕ ವಿಶ್ವಮಾನವ ಸಂದೇಶವನ್ನು ಪ್ರಸ್ತುತಪಡಿಸಿದ್ದು, ಮಾನವ ಕುಲ ಒಳಿತಿಗೆ ಶಾಂತಿ ಸಂದೇಶವನ್ನು ಸಾರಿದ್ದಾರೆ. ಅವರ ಜನ್ಮದಿನಾಚರಣೆ ನಮ್ಮಗೆಲ್ಲ ಹಬ್ಬದಂತೆ. ಅವರ ಕವಿತೆ ಲೇಖನದ ಮೂಲಕ ಜನಸಮುದಾಯ ಹೇಗೆ ನಡೆದುಕೊಳ್ಳಬೇಕು. ಸಮಾನತೆಯ ಬದುಕು ಅನುಸರಿಸುವಂತೆ ಅದರಿಂದ ಶಾಂತಿ ನೆಮ್ಮದಿ ಕಾಣಬಹುದು ಎಂಬದನ್ನು ತಿಳಿಸಿದ್ದಾರೆ ಎಂದರು.
ಶಿಕ್ಷಕ ನಿಂಗಣ್ಣ ಹಯ್ಯಾಳರವರು ವಾಚಿಸಿದ ದೋಣಿಹಾಡು ಕವನದಲ್ಲಿರುವ ಅದಮ್ಯ ಜೀವನ ಪ್ರೀತಿಯ ಮೌಲ್ಯಗಳನ್ನು ತಿಳಿಸಿದರು. ಮನುಷ್ಯ ಜಾತಿ, ಧರ್ಮ, ಪಂಗಡ, ಪಂಥ, ದೇಶ, ಭಾಷೆಗಳನ್ನು ಮೀರಿ ವಿಶಾಲ ಮನೊಭಾವನೆಯಿಂದ ಬದುಕುವುದೇ ವಿಶ್ವಮಾನವ ಸಂದೇಶದ ಸಾರವಾಗಿದೆ ಎಂದು ಬಣ್ಣಿಸಿದರು.
ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಮಾತನಾಡಿ, ಕನ್ನಡ ನಾಡಿನ ಸಾಮಾಜಿಕ ಪರಿವರ್ತನೆಯಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ದಾರ್ಶನಿಕ ಚಿಂತನೆ ಮತ್ತು ಸಾಹಿತ್ಯವು ಗಣನಿಯ ಪಾತ್ರವಹಿಸಿದೆ. ಅವರ ಅಸಾಧಾರಣ ಪ್ರತಿಭೆ ಮತ್ತು ಉದಾರವಾದ ವ್ಯಕ್ತಿತ್ವದಿಂದ ಹೊರಹೊಮ್ಮಿರುವ ಸಾಹಿತ್ಯವು ನಮ್ಮ ಸಮಾಜದ ಮನಸ್ಸನ್ನು ಸಚ್ಚೇತನಗೊಳಿಸಿದೆ ಎಂದು ತಿಳಿಸಿದರು.
ಸಂಸ್ಥೆಯ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಯ್ಯಾಳಪ್ಪ ಚಂದಾಪುರ `ಸುಗ್ಗಿ ಬರುತ್ತಿದೆ’ ಜಾನಪದ ಕಲಾವಿದ ಗೌಡಪ್ಪಗೌಡ ಹುಲಕಲ್ ಅವರು ಬಾದ್ರಪದ ಸುಪ್ರಭಾತ, ಶಂಕರ ಹುಲಕಲ್ ಅವರು ಮೆಟ್ಟುವ ನೆಲ ಕರ್ನಾಟಕ, ಮಹೇಶ ಪತ್ತಾರ ವಿಶ್ವಮಾನವ ಗೀತೆ ಅನಿಕೇತನ, ಶ್ರೀನಿವಾಸ ದೋರನಹಳ್ಳಿ ಅವರು ದೇವರು ರುಜು ಮಾಡಿದ ಎಂಬ ಕುವೆಂಪು ಅವರ ಅನೇಕ ಕವಿತೆಗಳನ್ನು ವಾಚಿಸಿದರು.
ಪ್ರತಿ ಕವಿತೆಗಳಲ್ಲಿ ಹಡಗಿರುವ ನಿಸರ್ಗದ ರಮ್ಯತೆ, ಸಾಮಾಜಿಕ ಅವ್ಯವಸ್ಥೆ, ಜಟಿಲತೆ, ಕನ್ನಡ ಪ್ರೇಮ, ಜಾತ್ಯಾತೀತ ವಿಚಾರಗಳು, ವಿಶ್ವಪ್ರೇಮ, ನಾಡುನುಡಿಯ ಕಾಳಜಿ, ಜೀವಪರ ಮೌಲ್ಯಗಳು ಮುಂತಾದವುಗಳ ಕುರಿತು ಅಭಿವ್ಯಕ್ತಿಸುವ ಮೂಲಕ ವಿಶಿಷ್ಠವಾಗಿ ಜನ್ಮ ದಿನಾಚರಣೆ ಆಚರಿಸಿದರು.