ಗುರುಮಠಕಲ್ ಕ್ಷೇತ್ರ ಹಸಿರು ಕ್ರಾಂತಿಯನ್ನಾಗಿಸಲು ಸಂಕಲ್ಪಃ ಚಿಂಚನಸೂರ
ಯಾದಗಿರಿಃ ಬೆಳೆಗೆರಾ ಬಳಿ ಸೇತುವೆ, ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ
ಯಾದಗಿರಿ: ಗುರುಮಠಕಲ್ ಕ್ಷೇತ್ರದ ರೈತರ ಜಮೀನುಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಿ ಹಸಿರು ಕ್ರ್ರಾಂತಿಯನ್ನಾಗಿಸುವ ದೃಢ ಸಂಕಲ್ಪ ಹೊಂದಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗುರುಮಠಕಲ್ ಮತಕ್ಷೇತ್ರದ ಶಾಸಕ ಬಾಬುರಾವ್ ಚಿಂಚನಸೂರು ಹೇಳಿದರು.
ಯಾದಗಿರಿ ತಾಲೂಕಿನ ಬೆಳೆಗೇರಾ ಗ್ರಾಮದ ಹತ್ತಿರ ನಾಲೆಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬ್ಯಾರೇಜ್ ಕಮ್ ಬ್ರಿಡ್ಜ್ ಹಾಗೂ ಅಣೆಕಟ್ಟು ನಿರ್ಮಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರ ಜಮೀನುಗಳಿಗೆ ನೀರಾವರಿ ಇಲ್ಲದೆ ಸಂಕಷ್ಟ ಎದುರಿಸುತ್ತಿರುವುದನ್ನು ಮನಗಂಡು ಈ ಭಾಗದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈ ಎರಡೂ ಕಾಮಗಾರಿಗಳಿಗೆ 150 ಲಕ್ಷ ರೂ. ಅನುದಾನ ಒದಗಿಸಲು ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಒಟ್ಟು 126.51 ಲಕ್ಷ ರೂ ಅನುದಾನದಲ್ಲಿ ಗುತ್ತಿಗೆದಾರರು ಕಾಮಗಾರಿ ಮುಗಿಸಲು ಮುಂದಾಗಿದ್ದಾರೆ. ಈ ಬ್ಯಾರೇಜ್ ನಿರ್ಮಾಣದಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಮಾನಗಳಲ್ಲಿ ಇಲ್ಲಿಯ ಬಹುತೇಕ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸಮೃದ್ಧಿಯಾಗಿ ಫಸಲನ್ನು ಬೆಳೆದು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದರು.
ಗುರುಮಠಕಲ್ ಕ್ಷೇತ್ರದ ಶಿಕ್ಷಣವಂತ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಬಾಡಿಯಾಳ-ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3284.55 ಎಕರೆ ವಿಸ್ತೀರ್ಣದಲ್ಲಿ ವಿವಿಧ ಫ್ಯಾಕ್ಟರಿಗಳು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣ ಮಾಡಲಾಗಿದೆ. ಹಾಗೆಯೇ ಬಂದಳ್ಳಿ ಗ್ರಾಮದ ಪ್ರದೇಶದಲ್ಲಿ ಹೈಟೆಕ್ ತರಬೇತಿ ಸಂಸ್ಥೆ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳನ್ನು ಫ್ಯಾಕ್ಟರಿಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.
ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ರಾಜ್ಯದಲ್ಲಿ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸರಕಾರ ಯಾವುದಾದರೂ ಇದ್ದರೆ ಅದು ನಮ್ಮ ರಾಜ್ಯ ಸರ್ಕಾರ ಮಾತ್ರ. ಇದಕ್ಕೆ ಜಾತಿ-ಬೇಧ ಯಾವುದೂ ಇಲ್ಲ, ಈ ಹಿಂದೆ ಯಾರೂ ಮಾಡದೇ ಇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿ ತೋರಿಸಿದೆ.
ಮುಂಡರಗಿ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮೀ ಸಾಬಯ್ಯ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಮಹಿಪಾಲರೆಡ್ಡಿ ಹತ್ತಿಕುಣಿ, ಜಿ.ಪಂ.ಸದಸ್ಯ ಶಿವಲಿಂಗಪ್ಪ ಪುಟಗಿ, ಎಪಿಎಂಸಿ ಅಧ್ಯಕ್ಷ ಚೆನ್ನಾರೆಡ್ಡಿ ಬಂದಳ್ಳಿ, ಹಣಮಂತ ಚಾನಳ್ಳಿ, ಸಣ್ಣ ನೀರಾವರಿ ಅಧಿಕಾರಿ ತೇಜಪ್ಪಗೌಡ ಅರಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.