ಅಂಕಣ

ಪ್ರಪಂಚದಾದ್ಯಂತ ಬೀದಿಯಲ್ಲಿರುವ ಮಕ್ಕಳೆಷ್ಟು ಗೊತ್ತೆ..?

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಕ್ಕಳ ಹಕ್ಕುಗಳು

– ರಾಘವೇಂದ್ರ ಹಾರಣಗೇರಾ

ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ದಿನನಿತ್ಯ 22 ಮಕ್ಕಳು ಕಣ್ಮರೆಯಾಗುತ್ತಿವೆ. 2015 ರಲ್ಲಿ ಒಟ್ಟು 7928 ಮಕ್ಕಳು ಕಣ್ಮರೆಯಾಗಿದ್ದಾರೆ. ಮಕ್ಕಳ ಅಪಹರಣ, ಮಾನವ ಕಳ್ಳ ಸಾಗಣೆ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ನಮ್ಮ ದೇಶದಲ್ಲಿ ಲಕ್ಷಾಂತರ ಮಕ್ಕಳು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಹಲವು ತಾರತಮ್ಯಗಳಿಗೆ ಒಳಗಾಗಿವೆ.

ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಒಂದು ಅಂದಾಜಿನಂತೆ ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಬೀದಿ ಮಕ್ಕಳಿದ್ದಾರೆ. ಹಲವು ವಿದ್ವಾಂಸರು ನೀಡಿರುವ ವರದಿ ಪ್ರಕಾರ ಭಾರತದಲ್ಲಿ 1.5 ಮಿಲಿಯನ್ ಮಕ್ಕಳು ಅಪೌಷ್ಠಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಬೆಳಗಾದರೆ ನಗರ, ಪಟ್ಟಣಗಳಲ್ಲಿ ಚಿಲ್ಲರೆ ಸಂಪಾದನೆಗಾಗಿ ಚಿಂದಿ ಆಯುವ, ಭಿಕ್ಷೆ ಬೇಡುವ, ತುತ್ತು ಕೂಳಿಗಾಗಿ ಹೋಟೆಲ್, ಧಾಬಾ, ಗ್ಯಾರೇಜ್, ಕಾರ್ಖಾನೆ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಭಿಕ್ಷೆ ಬೇಡುವ ಕೆಲಸ ಮಾಡುವ, ಬಾಲಕಾರ್ಮಿಕರಾಗಿ ದುಡಿಯುವ ಸಹಸ್ರಾರು ಮಕ್ಕಳು ಕಂಡುಬಡುತ್ತಾರೆ.

ಶೇ.63ರಷ್ಟು ಮಕ್ಕಳು ರಾತ್ರಿ ಹೊಟ್ಟೆಗೆ ಊಟವಿಲ್ಲದೆ ಮಲಗುತ್ತಾರೆ. ಶೇ.53ರಷ್ಟು ಮಕ್ಕಳು ತೀವ್ರ ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆಂದು ಯುನಿಸೆಫ್ ವರದಿ ನೀಡಿದೆ. ಅಲ್ಲದೇ 147 ದರ್ಶಲಕ್ಷ ಮಕ್ಕಳು ಸುರಕ್ಷಿತ ಮನೆಯ ಆಶ್ರಯವಿಲ್ಲದೆ ಬೀದಿಗಳಲ್ಲಿ, ಗುಡಿ-ಗುಂಡಾರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೀವಿಸುತ್ತಾರೆ. 85 ದಶಲಕ್ಷ ಮಕ್ಕಳು ರೋಗ ನಿರೋಧಕ ಕ್ರಮಗಳಿಗೆ ಒಳಗಾಗಿಲ್ಲ. 33 ದಶಲಕ್ಷ ಮಕ್ಕಳು ಶಾಲೆಯ ಮೆಟ್ಟಿಲನ್ನೇ ಕಂಡಿಲ್ಲ. 5ರಿಂದ 14ವರ್ಷದ ವಯೋಮಿತಿಯ ಸುಮಾರು 72 ದಶಲಕ್ಷ ಮಕ್ಕಳಿಗೆ ಮೂಲಶಿಕ್ಷಣದ ಸೌಲಭ್ಯಗಳು ದೊರೆತಿಲ್ಲ.

ಲಿಂಗತಾರತಮ್ಯದಿಂದ ಹೆಚ್ಚು-ಹೆಚ್ಚು ಮ್ಕಕಳು ಅಲಕ್ಷ್ಯಕ್ಕೊಳಗಾಗಿದ್ದಾರೆ. 6ವರ್ಷದೊಳಗಿನ 60 ದಶಲಕ್ಷ ಮಕ್ಕಳು ಬಡತನ ರೇಖೆಗಿಂತ ಕೆಳಗೆ ಹೋಗುತ್ತಿದ್ದಾರೆ. 2001ರ ಜನಗಣತಿಯ ಪ್ರಕಾರ ಅಂದಾಜಿನಂತೆ 20.2 ಮಿಲಿಯನ್ ಮ್ಕಕಳು ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ 35 ಲಕ್ಷಕ್ಕೂ ಹೆಚ್ಚು ಬಾಲಕಾರ್ಮಿಕರಿದ್ದಾರೆ.

ಇತ್ತೀಚೆಗೆ ಹೆಣ್ಣುಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆ, ಹೆಣ್ಣು ಮಕ್ಕಳ ಮಾರಾಟ ಮತ್ತು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ನಮ್ಮ ರಾಜ್ಯ ಹಾಗೂ ದೇಶದಲ್ಲಿ ಹೆಚ್ಚು ಕಂಡುಬರುತ್ತವೆ. ಮುಗ್ಧ ಮಕ್ಕಳ ಕೋಮಲ ದೇಹ ಮನಸ್ಸುಗಳ ಮೇಲೆ ನಡೆಯುವ ಭೀಕರ ಹಲ್ಲೆಗಳು ಇವಾಗಿವೆ. ಏನೂ ಅರಿಯದ, ಆಟ ಆಡಿಕೊಂಡಿರುವ ಪುಟ್ಟ ಕಂದಮ್ಮಗಳ ಮೇಲೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳ ಬಗ್ಗೆ ಪೋಲೀಸರಿಂದ ಹಿಡಿದು ವೈದ್ಯರು, ನ್ಯಾಯವಾದಿಗಳು, ಸಮಾಜಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರ ತನಕ ಯಾರೂ Pಕೂಡ ಸಮರ್ಪಕವಾಗಿ ಮಾತನಾಡುತ್ತಿಲ್ಲ.

ಯಾರಿಗೂ ಈ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂಬ ಸ್ಪಷ್ಟ ಪರಿಕಲ್ಪನೆಗಳು ಇಲ್ಲ. ಮಕ್ಕಳ ಮೇಲೆ ನಡೆಯುವ ಅತ್ಯಾಚಾರಕ್ಕೆ ಜಾತಿ, ವರ್ಗ, ಧರ್ಮಗಳ ವಿಚಕ್ಷಣೆಯಿಲ್ಲ. ಪ್ರತಿಭಟಿಸಲಾಗದ, ಕಿರುಚಿಕೊಳ್ಳಲೂ ಆಗದ ಅತ್ಯಾಚಾರದ ನಂತರವೂ ತನಗೇನಾಯಿತು ಎಂಬುದನ್ನು ವಿವರಿಸಲಾಗದ ಹಸುಳೆಯನ್ನು ಸಮಯ ಸಾಧಿಸಿ ತಮ್ಮ ತೃಷೆ ತೀರಿಸಿಕೊಳ್ಳುವ ವಿಕೃತ ಕಾಮಿಗಳ ಕರಾಳ ಕೃತ್ಯಗಳು ದಿನೇದಿನೇ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಸಹಸ್ರಾರು ಮಕ್ಕಳು ಹೆತ್ತವರ ಪ್ರತಿಷ್ಠೆ ಎಲ್ಲವನ್ನೂ ಹೇರುವ ಆಸೆ, ಸಂಸಾರದ ನಿರ್ವಹಣೆಗಾಗಿ ಮಕ್ಕಳನ್ನು ಬಳಸಿಕೊಂಡು ಅವರ ಬಾಲ್ಯವನ್ನು ಕಸಿದುಕೊಳ್ಳುವ ಕೊಳ್ಳುಬಾಕ ಸಂಸ್ಕøತಿಯಲ್ಲಿ ಚಿಣ್ಣರು ಬಾಲ್ಯವಿಲ್ಲದ ಬದುಕನ್ನು ಸಾಗಿಸುತ್ತಿದ್ದಾರೆ. ದೇಶದ ಹಲವು ಮಹಾನಗರಗಳಲ್ಲಿ, ಪಟ್ಟಣಗಳಲ್ಲಿ ಪ್ರತಿನಿತ್ಯ ದಿಕ್ಕುದೆಸೆಯಿಲ್ಲದೆ ನಿರ್ಲಕ್ಷಿತರಾಗಿ, ಪೋಷಕರ ಪ್ರೀತಿ ವಿಶ್ವಾಸಗಳಿಂದ ವಂಚಿತರಾಗಿ ಅಮಾನವಿಯ ಬದುಕನ್ನು ಸಾಗಿಸುತ್ತಿವೆ ಎಂದು ಹೇಳಬಹುದು.

ಮಕ್ಕಳ ಪ್ರತಿಯೊಂದು ಹಕ್ಕುಗಳ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳ ಗಂಭೀರ ಸಮಸ್ಯೆ ಕುರಿತು ಸಮಾಜಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಕಾನೂನು ತಜ್ಞರು ಗಂಭೀರವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಮಕ್ಕಳ ಹಕ್ಕು ಎಂಬುದು ಕೇವಲ ಭಾಷಣಗಳ ಮತ್ತು ದಿನಾಚರಣೆಗಳನ್ನು ಮೀರಿ ಬೆಳೆಯಬೇಕು.

ಮಕ್ಕಳ ಹಕ್ಕುಗಳು ಉಪಯೋಗವಾಗಬೇಕಾದರೆ ಮಕ್ಕಳ ಬಗ್ಗೆ ಚರ್ಚೆ ತೀರ್ಮಾನವಾಗುವ ಎಲ್ಲಾ ಸಭೆಗಳಲ್ಲಿ, ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ, ರಾಷ್ಟ್ರದ ಮತ್ತು ಅಂತರಾಷ್ಟ್ರೀಯ ಮಟ್ಟದವರೆಗೆ ಮಕ್ಕಳು ಭಾಗವಹಿಸಬೇಕು. ಮಕ್ಕಳು ಕೇಳಿಸಿಕೊಳ್ಳಬೇಕು. ಪಂಚಾಯತ್ ಮಟ್ಟದಲ್ಲಿ ಯೋಜನೆ ಆಗುವಾಗ ಮಕ್ಕಳು ಇರಬೇಕು.

ಮಕ್ಕಳ ಸಮಸ್ಯೆ, ಹಕ್ಕುಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿ ಬಗ್ಗೆ ಪ್ರತಿಪಾದಿಸುವ ಸಂಘಟಿತ ಪ್ರಯತ್ನದ ಅಗತ್ಯವಿದೆ. ಮಕ್ಕಳಿಗೆ ಸಮಾನ ಹಕ್ಕುಗಳನ್ನು ದೊರಕಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಸಾರ್ವಜನಿಕರು, ಪೋಷಕರು, ಸರಕಾರೇತರ ಸಂಘ-ಸಂಸ್ಥೆಗಳು ಸರಕಾರದ ಜೊತೆಯಲ್ಲಿ ಕೈಗೂಡಿಸಿ ಶ್ರಮಿಸಬೇಕು. ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ನಾವು ಮಾಡುತ್ತಿರುವ ಕೆಲಸ, ಕ್ಷೇತ್ರಗಳಲ್ಲಿ ಮಕ್ಕಳ ಹಕ್ಕುಗಳನ್ನು ಅಳವಡಿಸಿ ಅದಕ್ಕೆ ಅರ್ಥ ತರಬೇಕು.

 

 

Related Articles

One Comment

Leave a Reply

Your email address will not be published. Required fields are marked *

Back to top button