‘ಲ್ಯಾಟರಲ್ ಎಂಟ್ರಿ’: ಜಾಹೀರಾತನ್ನು ರದ್ದುಗೊಳಿಸುವಂತೆ UPSCಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ‘ಲ್ಯಾಟರಲ್ ಎಂಟ್ರಿ ಜಾಹೀರಾತ’ನ್ನು ರದ್ದುಗೊಳಿಸುವಂತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ) ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದಿದ್ದಾರೆ. ಯುಪಿಎಸ್ಸಿ ಆಗಸ್ಟ್ 17 ರಂದು 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರಿ ಇಲಾಖೆಗಳಲ್ಲಿ ತಜ್ಞರ (ಖಾಸಗಿ ವಲಯದವರನ್ನು ಒಳಗೊಂಡಂತೆ) ನೇಮಕಾತಿ ಎಂದು ಉಲ್ಲೇಖಿಸಲಾಗಿದೆ. ಈ ನಿರ್ಧಾರವು ಒಬಿಸಿ, ಎಸ್ಸಿ ಮತ್ತು ಎಸ್ಟಿಗಳ ಮೀಸಲಾತಿ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯು “ಐತಿಹಾಸಿಕ ಅನ್ಯಾಯಗಳನ್ನು ಪರಿಹರಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ನಮ್ಮ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರವಾಗಿದೆ” ಎಂದು ಜಿತೇಂದ್ರ ಸಿಂಗ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಈ ಹುದ್ದೆಗಳನ್ನು ವಿಶೇಷ ಎಂದು ಪರಿಗಣಿಸಲಾಗಿದೆ ಮತ್ತು ಏಕ-ಕೇಡರ್ ಹುದ್ದೆಗಳಾಗಿ ಗೊತ್ತುಪಡಿಸಲಾಗಿದೆ. ಈ ನೇಮಕಾತಿಗಳಲ್ಲಿ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಪ್ರಧಾನ ಮಂತ್ರಿಗಳು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವಲ್ಲಿ ಗಮನಹರಿಸುವ ಸಂದರ್ಭದಲ್ಲಿ ಈ ಅಂಶವನ್ನು ಪರಿಶೀಲಿಸಬೇಕು ಮತ್ತು ಸುಧಾರಿಸಬೇಕಾಗಿದೆ. 17.8.2024 ರಂದು ನೀಡಲಾದ ಲ್ಯಾಟರಲ್ ಎಂಟ್ರಿ ನೇಮಕಾತಿಯ ಜಾಹೀರಾತನ್ನು ರದ್ದುಗೊಳಿಸುವಂತೆ ನಾನು ಕೇಂದ್ರ ಲೋಕಸೇವಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದು ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ. ಏನಿದು ಲ್ಯಾಟರಲ್ ಎಂಟ್ರಿ? ಐಎಎಸ್ನಂತಹ ಆಡಳಿತಾತ್ಮಕ ಹುದ್ದೆಗಳಿಗೆ ಯುಪಿಎಸ್ಸಿಯು ಸರ್ಕಾರ ಇಲಾಖೆಗಳಲ್ಲಿನ ಮಧ್ಯಮ ಹಾಗೂ ಹಿರಿಯ ಮಟ್ಟದ ಹುದ್ದೆಗಳಿಗಾಗಿ ತನ್ನ ಸಾಂಪ್ರದಾಯಿಕ ಸರ್ಕಾರಿ ಸೇವಾ ಕೇಡರ್ಗಳಾಚೆ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದು ಲ್ಯಾಟರಲ್ ಎಂಟ್ರಿ ಎನಿಸುತ್ತದೆ. ಇದನ್ನು ನೇರ ನೇಮಕಾತಿ ಅಥವಾ ಪಾರ್ಶ್ವಿಕ ನೇಮಕಾತಿ ಎಂದೂ ಕರೆಯಬಹುದು. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ, ಖಾಲಿ ಹುದ್ದೆಗಳ ಕುರಿತಾದ ಮೊದಲ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ವೃತ್ತಿಪರ ನಾಗರಿಕ ಸೇವಾ ಅಧಿಕಾರಿಗಳಿಗಾಗಿಯೇ ಮೀಸಲಾಗಿದ್ದ ಹಿರಿಯ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಾಂಪ್ರದಾಯಿಕ ವ್ಯವಸ್ಥೆಗೆ ತಿಲಾಂಜಲಿ ನೀಡಲಾಗಿತ್ತು. ಲ್ಯಾಟರಲ್ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಮೂರರಿಂದ ಐದು ವರ್ಷಗಳ ಅವಧಿಯ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಅವರ ಕಾರ್ಯವೈಖರಿ, ಸಾಧನೆಗಳು ಹಾಗೂ ಸರ್ಕಾರದ ಅಗತ್ಯಗಳಿಗೆ ಅನುಗುಣವಾಗಿ ಅವಧಿ ವಿಸ್ತರಣೆಗೆ ಅವರು ಅರ್ಹರಾಗಿರುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಅವರು, ಆಡಳಿತ ಮತ್ತು ನೀತಿ ಅನುಷ್ಠಾನದಲ್ಲಿನ ಸಂಕೀರ್ಣ ಸವಾಲುಗಳನ್ನು ಪರಿಹರಿಸಲು ಸಹಾಯವಾಗುವಂತೆ ತಮ್ಮ ಪರಿಣತಿಯನ್ನು ಉಪಯೋಗಿಸುತ್ತಾರೆ ಎನ್ನುವುದು ಸರ್ಕಾರದ ನಿರೀಕ್ಷೆ.