ಪ್ರಮುಖ ಸುದ್ದಿಬಸವಭಕ್ತಿ

ಹೂಗಾರ ಸಮುದಾಯ ಶೈಕ್ಷಣಿಕವಾಗಿ ಪ್ರಬಲವಾಗಲಿ-ಕಾಳಹಸ್ತೇಂದ್ರ ಶ್ರೀ

ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ

ಯಾದಗಿರಿ, ಶಹಾಪುರಃ ಹೂಗಾರ ಸಮುದಾಯ ತೀರ ಹಿಂದುಳಿದಿದ್ದು, ಸಮಾಜದ ಏಳ್ಗೆಗೆ ಸಮುದಾಯದ ಮುಖಂಡರು ಮತ್ತು ಯುವಕರು ಸಂಘಟನಾತ್ಮಕವಾಗಿ ಶ್ರಮಿಸಬೇಕಿದೆ. ಸಮುದಾಯ ಜನರನ್ನು ಮುಖ್ಯವಾಹಿನಿಗೆ ಬರಲು ಮೊದಲು ಶೈಕ್ಷಣಿಕವಾಗಿ ಪ್ರಬಲರಾಗಬೇಕೆಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಹೂಗಾರ ಮಹಾಸಭಾದಿಂದ ನಡೆದ ಎರಡನೇ ವರ್ಷದ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೂಗಾರ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರ ಹಿಂದುಳಿದಿದ್ದು, ಸಂಘಟನಾತ್ಮಕವಾಗಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಅಲ್ಲದೆ ಶರಣ ಹೂಗಾರ ಮಾದಯ್ಯನವರು ಬಸವಾದಿ ಶರಣರಲ್ಲಿ ಪ್ರಥಮರಾಗಿದ್ದು, ಅನುಭವ ಮಂಟಪದಲ್ಲಿ ಮಾದಯ್ಯನವರಿಗೆ ವಿಶೇಷ ಸ್ಥಾನಮಾನವಿತ್ತು.

ಅಂತಹ ಶರಣರ ಸಮುದಾಯದಿಂದ ಬಂದ ನೀವುಗಳು, ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗಬೇಕು. ಮೊದಲು ಶೈಕ್ಷಣಿಕವಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಾಣ ಮಾಡಿಕೊಳ್ಳಿ. ಯಾವುದೇ ಸಮಾಜ ಪ್ರಬಲವಾಗಿ ಬೆಳೆಯಬೇಕಾದಲ್ಲಿ ಶಿಕ್ಷಣ ಬಹು ಮುಖ್ಯ ಆ ನಿಟ್ಟಿನಲ್ಲಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಹಣ ಅಂತಸ್ತು ಗಳಿಸುವದಕ್ಕಿಂತ ಮೊದಲು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯ ಹಾಗೂ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ ಮಾತನಾಡಿ, ಹೂಗಾರ ಸಮುದಾಯದ ಜನ ಸಭ್ಯರು, ತಾವಾಯತು ತಮ್ಮ ಕೆಲಸವಾಯಿತು ಎನ್ನುವವರು. ಮುಗ್ಧ ಸ್ವಭಾವದಿಂದ ಹೂ ಮಾರಾಟವೇ ನಮಗೆ ಉಪಜೀವನ ಎಂದು ಕುಳಿತುಕೊಳ್ಳದೆ.

ಬಸವಾದಿ ಶರಣರಂತೆ ಎಲ್ಲಾ ಸಮುದಾಯದ ಜನರ ಜೊತೆ ಒಡನಾಟವಿಟ್ಟುಕೊಂಡು ಸಮಾಜದ ಹಾಗು ಹೋಗುಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಕಾರ್ಯ ನಡೆಯಬೇಕಿದೆ. ಇತರೆ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಅಧ್ಯಕ್ಷ ಭೀಮಣ್ಣ ಹೋತಪೇಠ, ಯುವ ಮುಖಂಡರಾದ ಶಿವಪ್ರಸಾದ ಹೂಗಾರ, ಶಿವಶರಣಪ್ಪ ಹೂಗಾರ, ಶಾಂತು ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಯುವಕರು ಭಾಗವಹಿಸಿದ್ದರು.

ಮುಂಚಿತವಾಗಿ ಚರಬಸವೇಶ್ವರ ಕಲ್ಯಾಣ ಮಂಟಪದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಶರಣ ಮಾದಯ್ಯನವರ ಭಾವಚಿತ್ರ ಅದ್ದೂರಿ ಮೆರವಣಿಗೆ ಜರುಗಿತು.

Related Articles

Leave a Reply

Your email address will not be published. Required fields are marked *

Back to top button