ಕುಡಿಯುವ ನೀರಿಗಾಗಿ ನಗರಸಭೆಗೆ ಮುತ್ತಿಗೆ
ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ, ಅಧಿಕಾರಿಗಳಿಗೆ ತರಾಟೆ
ಯಾದಗಿರಿ, ಶಹಾಪುರಃ ಕಳೆದ ಹತ್ತಾರು ತಿಂಗಳಿಂದಲೂ ನಗರದ ಚಾಮುಂಡೇಶ್ವರಿ ನಗರದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಮುಂದುವರೆದಿದ್ದರೂ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬಡಾವಣೆ ನಿವಾಸಿಗರು ಬುಧವಾರ ನಗರಸಭೆ ಪೌರಾಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಲವಾರು ಬಾರಿ, ಪ್ರತಿಭಟನೆ, ಖಾಲಿ ಕೊಡ ಪ್ರದರ್ಶನ ಸೇರಿದಂತೆ ಮನವಿ ಪತ್ರ ಸಲ್ಲಿಸಿದರೂ ನಗರಸಭೆ ಕ್ಯಾರೆ ಅನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗರು, ನಗರಸಭೆ ಕಚೇರಿ ಪರವೇಶಿಸಲು ಯತ್ನಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಿಸಿದ ಘಟನೆಯೂ ಜರುಗಿತು.
ಇಲ್ಲಿವರೆಗೂ ನಗರಸಭೆ ಅಧಿಕಾರಿಗಳಾಗಲಿ ನಗರಸಭೆ ಸದಸ್ಯರಾಗಲಿ ಬಡಾವಣೆಗೆ ಭೇಟಿ ನೀಡದೆ ಸಮಸ್ಯೆ ಪರಿಹಾರಕ್ಕೆ ಯತ್ನಿಸದೆ ನಿರ್ಲಕ್ಷವಹಿಸಿದ್ದಾರೆ ಎಂದು ಆರೋಪಿಸಿದರು.
ಕೇವಲ ಪ್ರತಿಷ್ಠಿತ ವ್ಯಕ್ತಿಗಳ ಮನೆ ಮುಂದೆ ಸ್ವಚ್ಛತೆ ಮಾಡುವ ಇಲ್ಲಿನ ಅಧಿಕಾರಿಗಳು, ಬಡವರ ಮನೆ ಮುಂದೆ ಚರಂಡಿ, ನೀರು ಸಂಗ್ರಹಗೊಂಡು ಸೊಳ್ಳೆಕಾಟವಾಗಿ ಹಂದಿಗಳ ತಾಣವಾದರೂ ಯಾರೊಬ್ಬರೂ ಅತ್ತ ಗನಮ ಹರಿಸಲ್ಲ. ಶ್ರೀಮಂತರ ಮನೆ ಮುಂದೆ ಕಸ ಬಿದ್ದರೆ ಅವರು ಹೇಳಿದ ತಕ್ಷಣ ಸ್ವಚ್ಛ ಮಾಡುತ್ತಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ನೀರಿಗಾಗಿ ನಿತ್ಯ ಪರದಾಟ ನಡೆದಿದ್ದರೂ ಯಾವೊಬ್ಬ ಸಮಸ್ಯೆ ಸ್ಪಂಧನೆ ನೀಡುತ್ತಿಲ್ಲ. ಚುನಾವಣೆಯಲ್ಲಿ ಈ ಬಾರಿ ಪಾಠ ಕಲಿಸಲಿದ್ದೇವೆ, ಮತ ಕೇಳಲು ಗಣ್ಯರು ಬಡಾಣೆಗೆ ಆಗಮಿಸಲಿ ಆಗ ಮಾತನಾಡುತ್ತೇವೆ ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಬಡಾವಣೆಯಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ನಿರ್ಮಾಣವಾದರೂ ಇಂದಿಗೂ ಹನಿ ನೀರು ಬರುತ್ತಿಲ್ಲ ಎಂದು ದೂರಿದರು. ಬಡಾವಣೆಯ ಮೇಲ್ಭಾಗದ ಬೆಟ್ಟದ ಮೇಲಿರುವ ನೀರಿನ ಟ್ಯಾಂಕ್ ಇಡಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದೆ. ಆದರೆ ಅದರ ಕೆಳಗಿರುವ ಬಡಾವಣೆ ಜನರಿಗೆ ನೀರಿಲ್ಲ ಇದೆಂಥ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸಂಗಮೇಶ ಜಿಡಗಾ, ನಾಗರಿಕರ ಜೊತೆ ಚರ್ಚಿಸಿ, ನಗರಸಭೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ನಾಗರಿಕರ ಬೇಡಿಕೆಯಂತೆ ಮೂರು ದಿನಗಳಲ್ಲಿ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿ, ಕೂಡಲೇ ನೀರು ಒದಗಿಸುವ ಭರವಸೆ ನೀಡಿದರು.
ಮೂರು ದಿನಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಪ್ರತಿಭಟನಾ ನಿರತರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ದೇವಿಂದ್ರಪ್ಪ ನಾಶಿ, ಮಹ್ಮದ್ ಹುಸೇನಿ, ಸಾಹೇಬಣ್ಣ ನಾಶಿ, ಲಾಲನಸಾಬ್, ಮಹ್ಮದ್ ಅಲಿ, ದೇವು ಕೊನೇರ, ಸೀನಪ್ಪ ನಾಶಿ, ಅಮೃತ ಮಕ್ತಾಪುರ ನಾಗಮ್ಮ ಪೂಜಾರಿ, ಸೈನಾಜಬೇಗಂ, ಮುನಿರಾ ಬೇಗಂ, ದೇವಕ್ಕೆಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.