ಪ್ರಮುಖ ಸುದ್ದಿ

ನಿರ್ಮಿತ ಕೇಂದ್ರದ ಕಾಮಗಾರಿಗಳ ವಿಳಂಬಃ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಖರ್ಗೆ ಸೂಚನೆ

ಯಾದಗಿರಿಃ ಜಿಲ್ಲೆಯ ವಿವಿಧಡೆಯಲ್ಲಿ ನಿರ್ಮಿತ ಕೇಂದ್ರದಿಂದ ಕೈಗೊಂಡ ಕಾಮಗಾರಿಗಳು ಅಮೆಗತಿಯಲ್ಲಿ ಸಾಗುತಿದ್ದು, ವಿಳಂಬಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಸದ ಡಾ:ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದಿಂದ ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ನಡೆಯದೆ ಇರುವುದಕ್ಕೆ ಸಾರ್ವಜನಿಕರು ನಾವು ಉತ್ತರಿಸಬೇಕಾಗುತ್ತದೆ. ಗುರುಮಠಕಲ್‍ನಲ್ಲಿ ಶೌಚಾಲಯ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿಗಳ ಮುಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಹಣ ಖರ್ಚಾದರೂ ಯಾದಗಿರಿ ಜಿಲ್ಲೆಯ ಮೂರು ತಾಲೂಕಿನ ಜನತೆ ಬೆಂಗಳೂರು ನಗರಕ್ಕೆ ಗುಳೆ ಹೋಗುತ್ತಿರುವುದು ಮುಂದುವರೆದಿದೆ, ಇದು ನಮಗೆ ನಾಚಿಕೆ ತರುವ ಸಂಗತಿ ಎಂದು ಸಂಸದ ಡಾ:ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ವಿಷಾದ ವ್ಯಕ್ತಪಡಿಸಿ ಗುಳೆ ಹೋಗುವುದು ತಪ್ಪಿಸಲು ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದರು.

2017-18 ನೇ ಸಾಲಿನಲ್ಲಿ ಬಾಕಿ ಉಳಿದಿರುವ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು ಎಂದು ಕಲಬುರಗಿ ಲೋಕಸಭಾ ಸದಸ್ಯ ಹಾಗೂ ಯಾದಗಿರಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಡಾ:ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.

ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯ ವಿವಿಧ ಯೋಜನೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲಾದ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು, ಅಲ್ಲದೆ ಹೊಸದಾಗಿ ಕಾಮಗಾರಿಗಳ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿಯಲ್ಲಿ 279 ನೀರು ಶುದ್ಧೀಕರಣ ಘಟಕಗಳ ಮಂಜೂರಾಗಿವೆ, ಅವುಗಳಲ್ಲಿ 242 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬಾಕಿ ಉಳಿದ 18 ಕಾಮಗಾರಿಗಳು ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಇನ್ನುಳಿದ 18 ಶುದ್ಧೀಕರಣ ಘಟಕಗಳಿಗೆ ನೀರಿನ ಸಮಸ್ಯೆ ಇದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

2017-18 ನೇ ಸಾಲಿನಲ್ಲಿ ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಲ್ಲಿ 1600 ಅಭ್ಯರ್ಥಿಗಳಿಗೆ ವಿವಿಧ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಈ ಪ್ರಕಾರ ಒಟ್ಟು 1026 ಅಭ್ಯರ್ಥಿಗಳನ್ನು ತರಬೇತಿಗೆ ನೋಂದಾಯಿಸಲಾಗಿದ್ದು, ಇಲ್ಲಿಯವರೆಗೂ ತರಬೇತಿಯೂ ನೀಡಿಲ್ಲ ಯಾಕೆ? ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಕೂಡಲೇ ತರಬೇತಿ ನೀಡಿ ಗುರಿ ಸಾಧಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಗ್ರಾಮೀಣ ಸ್ವಚ್ಛ ಭಾರತ ಮಿಷನ್‍ಡಿಯಲ್ಲಿ ಜಿಲ್ಲೆಯಲ್ಲಿ 96280 ಶೌಚಾಲಯ ನಿರ್ಮಾಣದ ಗುರಿ ಇದ್ದು, ಈ ಪೈಕಿ 66554 ಅರ್ಜಿಗಳ ಸಲ್ಲಿಸಿದ್ದು 65858 ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 18020 ಶೌಚಾಲಯಗಳ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆ ಇದೆ ಎಂದು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಜೆಸ್ಕಾಂ ಎಂಜನೀಯರ್ ಅವರು, 110 ಕೆವಿ. ಸಬ್ ಸ್ಟೇಷನ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಈಗಾಗಲೇ ಕೈಗಾರಿಕಾ ಪ್ರದೇಶದಲ್ಲಿ 450 ಉದ್ಯೋಗಗಳು ಸೃಷ್ಟಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ದೊರತರೆ ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಂಸದ ಡಾ:ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕುರಿತಂತೆ ಸಂಸದ ಖರ್ಗೆ ಅವರು ಮಾಹಿತಿ ಕೇಳಲಾಗಿ, ಫೆಬ್ರುವರಿ ಅಂತ್ಯದೊಳಗೆ ಕೆಲ ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು. ವಾಡಿಯ ಚಿತ್ತಾಪುರ ಕ್ರಾಸ್‍ದಿಂದ ಯಾದಗಿರಿಗೆ 315 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುತ್ತಿದ್ದು, ಬರುವ ಫೆಬ್ರುವರಿ ತಿಂಗಳ ಅಂತ್ಯದಲ್ಲಿ ಮುಗಿಸುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಯಾದಗಿರಿಯಿಂದ ಸೈದಾಪುರ, ಸೈದಾಪುರದಿಂದ ನಾರಾಯಣಪೇಟ ವರೆಗೆ ಹೆದ್ದಾರಿಯೂ ಸಹ ಫೆಬ್ರುವರಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಇದೇ ವೇಳೆ ಯರಗೋಳ ಸೇರಿದಂತೆ ಐದು ಕೆರೆಗಳಿಗೆ 61 ಕೋಟಿ ರೂ.ವೆಚ್ಚದಲ್ಲಿ ನೀರು ತುಂಬುವ ಯೋಜನೆಯ ಕಾಮಗಾರಿಯೂ ಭರದಿಂದ ಸಾಗಿದೆ ಎಂದು ತಿಳಿಸಿದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು 440 ಕೋಟಿ ವೆಚ್ಚದ 55 ಕೆರೆಗಳಿಗೆ ಟೆಂಡರ್ ಕರೆಯಬೇಕಾಗಿದೆ ಎಂದು ಅವರು ತಿಳಿಸಿದರು.
660 ಕೋಟಿ ವೆಚ್ಚದ ಸನ್ನತಿ ನೀರಾವರಿ ಯೋಜನೆಯ ಕಾಮಗಾರಿಗಳು ನಡೆದಿದ್ದು, ಈ ಪೈಕೆ 330 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗುರುಮಠಕಲ್ ಶಾಸಕರಾದ ಶ್ರೀ ಬಾಬುರಾವ್ ಚಿಂಚನಸೂರು, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ, ರಾಯಚೂರು ಸಂಸದರಾದ ಶ್ರೀ ಬಿ.ವಿ.ನಾಯಕ, ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಡಾ:ಅವಿನಾಶ ಮೆನನ್ ರಾಜೇಂದ್ರನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button