ಮೇ ಮೊದಲ ವಾರದಲ್ಲಿ ಹತ್ತಿ ಖರೀದಿಗೆ ಸಮ್ಮತಿ – ಗುರು ಪಾಟೀಲ್ ಶಿರವಾಳ
ಶಹಾಪುರಃ ಕೊರೊನಾ ಹಾವಳಿಯಿಂದ ಇಡಿ ದೇಶ ಲಾಕ್ ಡೌನ್ ನಲ್ಲಿದ್ದು, ಹತ್ತಿ ಬೆಳೆಗಾರರು ಬೆಳೆದ ಹತ್ತಿಯನ್ನು ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿರುವ ಕುರಿತು ಕೇಂದ್ರದ ಗಮನ ಸೆಳೆಯಲಾಗಿದ್ದು, ಮೇ ಮೊದಲ ವಾರದಲ್ಲಿ ಹತ್ತಿ ಖರೀದಿಗೆ ಕೇಂದ್ರದ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ ಸಮ್ಮತಿ ಸೂಚಿಸಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರ ಲೋಕಸಭೆ ಸಂಸದ ರಾಜಾ ಅಮರೀಶ ನಾಯಕ ಅವರ ಸತತ ಪರಿಶ್ರಮದಿಂದ ಮತ್ತು ಯಾದಗಿರಿ ಜಿಲ್ಲಾಧಿಕಾರಿಗಳ ಕಾಳಜಿಯಿಂದಾಗಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ ಹತ್ತಿ ಖರೀದಿಗೆ ಸಮ್ಮತಿಸಿದೆ. ಕಾರಣ ಹತ್ತಿ ಬೆಳೆಗಾರರು ಮೇವರೆಗೂ ಕಾಯಬೇಕು. ಪ್ರಸ್ತುತ ಹತ್ತಿ ಬೆಲೆ ತೀರ ಕಡಿಮೆ ಬೆಲೆಗೆ ಕೆಲವು ಕಾಟನ್ ಮಿಲ್‍ಗಳು ಕೇಳುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸಬೇಕಾಗುತ್ತದೆ.
ಮೇವರೆಗೂ ರೈತರು ಕಾಯಬೇಕು. ನಂತರ ಸರ್ಕಾರವೇ ಸಮರ್ಪಕ ಬೆಲೆಗೆ ಖರೀದಿ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ಈ ಮೊದಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹತ್ತಿ ಖರೀದಿ ಕುರಿತು ಮನವರಿಕೆ ಮಾಡಲಾಗಿತ್ತು. ಹತ್ತಿ ಬೆಳೆಗಾರರು ಎದೆಗುಂದಬೇಡಿ ಸರ್ಕಾರವೇ ಹತ್ತಿ ಖರೀದಿ ಮಾಡಲಿದೆ ಎಂದು ತಿಳಿಸಿದರು. ಅಲ್ಲದೆ ಲಾಕ್ ಡೌನ್ ನಿಯಮಗಳನ್ನು ರೈತರು ಸೇರಿದಂತೆ ಎಲ್ಲರು ಪಾಲನೆ ಮಾಡಬೇಕು. ಮನೆ ಬಿಟ್ಟು ಹೊರಗಡೆ ಬರಬೇಡಿ. ಕೊರೊನಾ ಮಹಾಮಾರಿ ಈಗಾಗಲೇ ಸಾಕಷ್ಟು ಜನರ ಜೀವ ಹಿಂಡುತ್ತಿದೆ. ಮಕ್ಕಳು ವೃದ್ಧರ ಆರೋಗ್ಯ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ ಎಂದು ಸಲಹೆ ನೀಡಿದರು.
——————-