ಕೃಷ್ಣಾ ಪ್ರವಾಹ ಇಳಿ ಮುಖ- ಕೊಚ್ಚಿ ಹೋದ ರಸ್ತೆ, ಹಾಳಾದ ಬೆಳೆ
ಕೃಷ್ಣಾ ಪ್ರವಾಹದಿ ಹರಿದು ಬಂದಿದೆ ಅಪಾರ ಮರಳು
ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಹೆದ್ದಾರಿ
ಶಹಾಪುರಃ ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಕಳೆದ ಹದಿನೈದು ದಿನದಿಂದ ಸಂಪೂರ್ಣ ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿತ್ತು. ಆದರೆ ಮೂರು ದಿನಗಳಿಂದ ಪ್ರವಾಹ ಇಳಿಕೆಯಾಗಿದ್ದು, ಸಧ್ಯ ಸೇತುವೆ ಮೇಲ್ತುದಿ ಗೋಚರವಾಗುತ್ತಿದೆ. ಆದರೆ ಸೇತುವೆ ಯಿಂದ ಕೊಳ್ಳೂರ ಗ್ರಾಮಕ್ಕೆ ಬರುವ ರಾಜ್ಯ ಹೆದ್ದಾರಿ ಸುಮಾರು ಒಂದು ಕೀ.ಮೀ.ವರೆಗೆ ಸಂಪೂರ್ಣ ಕಿತ್ತುಕೊಂಡು ಹೋಗಿದೆ.
ಅಲ್ಲದೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ಮರಳು ಸಂಗ್ರಹಗೊಂಡಿದ್ದು, ನದಿ ಪಾತ್ರದ ಹೊಲ ಗದ್ದೆಗಳು ಸಹ ಮರಳಿನಿಂದ ತುಂಬಿಕೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮತ್ತು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಅತೀವ ತೇವಾಂಶದಿಂದ ಕೊಳೆತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನೀರಲ್ಲಿ ಮುಳುಗಿದ್ದ ಹೆದ್ದಾರಿ ಮಾತ್ರ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ವಾಹನ ಸಂಚಾರ ಸಾಧ್ಯವಿಲ್ಲ. ಜಿಲ್ಲಾಡಳಿತ ಈಗಲೇ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರವಾಹದಲ್ಲಿ ನೂರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದ್ದು, ಕೂಡಲೇ ಅವರಿಗೆ ಬದುಕು ಕಟ್ಟಿಕೊಡಲು ಜಿಲ್ಲಾಡಳಿತ ನೆರವಿಗೆ ಬರಬೇಕು. ಹೊಲ, ಗದ್ದೆಗಳಲ್ಲಿ ನಾಶವಾದ ಬೆಳೆಗಳಿಗೆ ಸೂಕ್ತ ಮತ್ತು ಶೀಘ್ರದಲ್ಲಿ ಪರಿಹಾರ ನೀಡಬೇಕು. ಮತ್ತು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದ, ಗಂಜಿ ಕೇಂದ್ರದಲ್ಲಿ ವಾಸವಿದ್ದವರಿಗೆ, ಸೂಕ್ತ ಮನೆಯ ವ್ಯವಸ್ಥೆ ಕಲ್ಪಿಸಲು ಧನ ಸಹಾಯದ ಅಗತ್ಯವಿದೆ. ಜಿಲ್ಲಾಡಳಿತ ಕೂಡಲೇ ನೆರೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕೆಂದು ಕೊಳ್ಳೂರ ಗ್ರಾಮದ ಯುವ ಮುಖಂಡ ಶಿವರಡ್ಡಿ ಕೊಳ್ಳೂರ ಆಗ್ರಹಿಸಿದ್ದಾರೆ.
ನೀರಲ್ಲಿ ಮುಳುಗಿ ಅಪಾರ ಬೆಳೆ ನಷ್ಟ
ಪ್ರವಾಹದಿಂದಾಗಿ ಸಾವಿರಾರು ಎಕರೆ ಬೆಳೆ ನೀರಲ್ಲಿ ಮುಳುಗಿ ಹಾಳಾಗಿರುವದನ್ನು ಕಂಡು ರೈತಾಪಿ ಜನರು ಮನ ಮಿಡಿಯುತ್ತಿದೆ. ಸಧ್ಯ ಪ್ರವಾಹ ಇಳಿ ಮುಖವಾಗಿರುವದರಿಂದ ರೈತರು ಬೆಳೆ ಹಾಳಾಗಿರುವದನ್ನು ಕಂಡು ಕಣ್ಣೀರಿಡುವಂತಾಗಿದೆ.
ಹತ್ತಿ, ಭತ್ತ, ತೊಗರಿ, ಹೆಸರು ಸೇರಿದಂತೆ ಸೇಂಗಾ ಬೆಳೆಗಳು ಸಂಪೂರ್ಣ ಕೊಳೆತು ನಿಂತಿವೆ. ಹೀಗಾಗಿ ರೈತರಿಗೆ ಇದು ದೊಡ್ಡ ಆಘಾತವನ್ನು ತರಿಸಿದಂತಾಗಿದೆ. ಕಾರಣ ಜಿಲ್ಲಾಡಳಿತ ಕೂಡಲೇ ಸಮರ್ಪಕ ಬೆಳೆ ನಾಶ ವರದಿ ತಯಾರಿಸಿ, ರೈತರಿಗೆ ಸೂಕ್ತ ಪರಿಹಾರ ನೀಡುವ ಅಗತ್ಯವಿದೆ.