ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರಗಡೆ ಬನ್ನಿ- DC ಕೂರ್ಮಾರಾವ್
ಸಮುದಾಯಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ
ಯಾದಗಿರಿಃ ಕೊರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ. ಅವಶ್ಯಕ ವಸ್ತುಗಳ ಖರೀದಿಗೆ ಮಾತ್ರ ಯಾರಾದರೊಬ್ಬರು ಹೊರಗಡೆ ಬರಬೇಕು. ಅನವಶ್ಯಕವಾಗಿ ಓಡಾಟ ಮತ್ತು ಹೆಚ್ಚಾಗಿ ಜನ ಸೇರುವುದು ಮಾಡಬಾರದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೊರೊನಾ (ಕೋವಿಡ್ -19) ವೈರಸ್ ಮುಂಜಾಗ್ರತಾ ಕ್ರಮಗಳ ಕುರಿತು ಸಮುದಾಯಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 133, 144 (3)ರ ಪ್ರಕಾರ ಹಾಗೂ The Karnataka Epidemic Disease, COVID-19 Regulations, 2020 ರ ನಿಯಮ 12ರ ಮೇರೆಗೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕಿನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮಾರ್ಚ್ 31ರವರೆಗೆ ಸಾರ್ವಜನಿಕರು ಅನುಸರಣ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೊನಾ ವೈರಸ್ ಪ್ರಕರಣ ದಾಖಲಾಗಿರುವುದಿಲ್ಲ.
ಸರ್ಕಾರದ ಆದೇಶದಂತೆ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಮಾನ್ಯ ಪ್ರಧಾನಮಂತ್ರಿಗಳು ಮಾರ್ಚ್ 22ರಂದು ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಘೋಷಿಸಿರುವ ಜನತಾ ಕಫ್ರ್ಯೂಗೆ ಸಾರ್ವಜನಿಕರು ಸಹಕರಿಸಬೇಕು. ಹೆಚ್ಚು ಜನ ಸೇರುವ ಜಾತ್ರೆ, ಸಂತೆ ನಿಷೇಧಿಸಲಾಗಿದೆ. ಮದುವೆಯಂತಹ ವೈಯಕ್ತಿಕ ಸಭೆ-ಸಮಾರಂಭಗಳನ್ನು ಮುಂದೂಡಿ ಸಾಮಾಜಿಕ ಕಳಕಳಿ ಮೆರೆಯುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ- ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ಕೋಚಿಂಗ್ ಸೆಂಟರ್‍ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕೋಚಿಂಗ್ ಸೆಂಟರ್‍ಗಳು ನಡೆಸುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ದೂರು ನೀಡಿ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವದಂತಿಗಳಿಗೆ ಕಿವಿಗೊಡಬೇಡಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಹಾಗೂ ವಾಟ್ಸ್ಆ್ಯಪ್‍ಗಳಲ್ಲಿ ಬರುವ ವದಂತಿ ಸಂದೇಶಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಮುಂಜಾಗ್ರತಾ ಕ್ರಮಗಳ ಬಗ್ಗೆ ಡಂಗೂರ ಸಾರಲಾಗುತ್ತಿದೆ. ಅಲ್ಲದೇ, ಕಸ ಸಂಗ್ರಹಿಸುವ ವಾಹನಗಳ ಮೂಲಕ ಜಿಂಗಲ್ಸ್‍ಗಳನ್ನು ಕೇಳಿಸಲಾಗುತ್ತಿದೆ. ದಿನನಿತ್ಯ ಸಾರ್ವಜನಿಕ ಜೀವನಕ್ಕೆ ಬೇಕಾಗುವ ಅವಶ್ಯಕ ಸಾಮಗ್ರಿಗಳ ಅಂಗಡಿಗಳು ತೆರೆದಿರುತ್ತವೆ ಎಂದು ಅವರು ಹೇಳಿದರು.
ಯಾದಗಿರಿ ನಗರದ ರೈಲ್ವೆ ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಹೊಸ ಬಸ್ ನಿಲ್ದಾಣ ಹಾಗೂ ಯರಗೋಳ, ಗುರುಮಠಕಲ್ ಸಮೀಪದ ಇಟಗಾಲ್ ಕ್ರಾಸ್, ಮುಡಬೂಳ ಗ್ರಾಮಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೇ, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಡಂಗೂರ ಸಾರಲಾಗುತ್ತಿದೆ. ರೋಗಲಕ್ಷಣಗಳು ಕಂಡುಬಂದಲ್ಲಿ 24*7 ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473-253950 ಕರೆ ಮಾಡಲು ಅವರು ಮನವಿ ಮಾಡಿದರು.
ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ, ಅವರ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಹಸ್ತಲಾಘವ ಅಥವಾ ಮುಟ್ಟಿದಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳುವುದರಿಂದ ಕೊರೊನಾ ಹರಡುತ್ತದೆ. ಪ್ರತಿಯೊಬ್ಬರು ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟಬಾರದು. ಈ ಬಗ್ಗೆ ಸಮುದಾಯಗಳ ಮುಖಂಡರು ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್-7 ಮತ್ತು ಸಿಎಲ್-9) ಮದ್ಯದಂಗಡಿಗಳಲ್ಲಿ ಗ್ರಾಹಕರು ಗುಂಪಾಗಿ ಕುಳಿತುಕೊಳ್ಳುವುದರಿಂದ ಇವುಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ವೈನ್‍ಶಾಪ್‍ಗಳಲ್ಲಿ ಒಬ್ಬರೇ ಬಂದು ಮದ್ಯ ಖರೀದಿ ಮಾಡುವ ವ್ಯವಸ್ಥೆ ಇರುವುದರಿಂದ ಇನ್ನೂ ನಿಷೇಧ ಮಾಡಿರುವುದಿಲ್ಲ. ಸರ್ಕಾರದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖಂಡರೊಬ್ಬರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್‍ಪಿ ಯು.ಶರಣಪ್ಪ ಸೇರಿದಂತೆ ಸಮುದಾಯಗಳ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.