ಅಂಕಣಕಥೆ

ತಾಯಿ ಕಾಣೋ ತವಕ, ಬಂದೆರಗಿತ್ತೊಂದು ಅನಾಹುತ ದಡಸೇರಿದ್ಹೇಗೆ.?

ಬಿಜಾಪುರದ ದೊಡ್ಡಾಸ್ಪತ್ರೆಯಲಿ ಅಮ್ಮ ಇವತ್ತೋ ನಾಳೆನೋ ಅನ್ನೋ ಸ್ಥಿತಿಯಲ್ಲಿ ಹಾಸಿಗೆ ಹಿಡಿದು ಮಲಗಿದ್ದಳು. ಅಣ್ಣ ಹೇಳಿ ಕಳಿಸಿದ ಆಳಿನ ಮಾತು ಕೇಳಿ ಶಾರದಾ ಬಿಕ್ಕಿ ಬಿಕ್ಕಿ ಅಳುತ್ತಾ ಕುಳಿತಳು. ಶಾಮಣ್ಣೋರು ತಡಮಾಡದೇ ನಾಳೆ ಮುಂಜಾನೆ ಬಸ್‍ಗೆ ಹೋಗಿ ನಿಮ್‍ಮ್ಮನ್ ನೋಡ್ಕೊಂಡ ಬಾ ಅಂದರು. ಮಳೆಗಾಲ ಬೇರೆ, ಹೊಲದಾಗ ಭಾಳ ಕೆಲ್ಸ ಅದಾವ, ಆದಷ್ಟು ಲಗೂನ ವಾಪಸ್ ಬಾ. ಜೊತೆಗೆ ನಿನ್ನ ತಮ್ಮ ಮರಿ ಫುಡಾರಿ ಸೀತಾರಾಮುನು ಕರ್ಕೊಂಡ ಹೋಗು ಎಂದ ಶಾಮಣ್ಣೋರು ಮಲಗೋಕೆ ಹೊರಟರು. ಬೆಳ್ಳಂಬೆಳಿಗ್ಗೆ ಎದ್ದ ಶಾರದಾ ಲಗುಬಗೆಯಿಂದ ಬಿಜಾಪುರ ಹೊರಡಲಿಕ್ಕೆ ತಯಾರಿ ಮಾಡಿಕೊಂಡಳು. ರೊಟ್ಟಿ, ಚಪಾತಿ, ಉದುರಬ್ಯಾಳಿ ಪಲ್ಯ, ಕೆನೆ ಮೊಸರು, ಬಾನಾ, ಶೇಂಗಾ ಹಿಂಡಿ, ಪುಂಡಿಪಲ್ಯ, ಅಗಸಿ ಖಾರಾ, ತೋಟದಲ್ಲಿ ಬೆಳೆದಿದ್ದ ಮೆಂತೆಪಲ್ಯ, ಮೂಲಂಗಿ, ಗಜ್ಜರಿ, ಸೌತೆಕಾಯಿ ಎಲ್ಲಾ ಸೇರಿಸಿ ಬುತ್ತಿ ಕಟ್ಟಿಕೊಂಡಳು.
ಮನೇಲಿ ಇಬ್ರು ಮಕ್ಕಳನ್ ಬಿಟ್ಟು ಕೊನೆ ಮಗನನ್ನು ಕಂಕುಳಲ್ಲಿ ಇಟ್ಕೊಂಡು ತಮ್ಮನ ಜೊತೆ ಹೊರಟಳು. ಬಸ್‍ಸ್ಟ್ಯಾಂಡಿಗ ಬಂದಾಗ ಬಸ್ ಇನ್ನು ಬಂದಿರಲಿಲ್ಲ. ದರ್ಗಾ ಕಟ್ಟೆ ಹತ್ತಿರ ಬಸ್ ನಿಲ್ಲುತ್ತಿದ್ದರಿಂದ ಅದೇ ಬಸ್‍ಸ್ಟ್ಯಾಂಡ್ ಆಗಿತ್ತು. ಅರ್ಧಗಂಟೇಲಿ ಬಸ್ ಬಂತು. ಸರ್ಕಾರಿ ಬಸ್ಸು, ಕೆಟ್ಟ ರಸ್ತೆಯಲ್ಲಿ ಪ್ರಯಾಣ ಸಾಗಿತ್ತು.
ಊರಲ್ಲಿ ಹಾಲಿನ ಡೈರಿ ಇಟ್ಕೊಂಡು ಊರ ಪಂಚಾಯ್ತಿ ವ್ಯವಹಾರದಲ್ಲೂ ತಲೆ ಹಾಕ್ತಿದ್ದ ಸೀತಾರಾಮುಗೆ ಅದೇ ತಾನೆ ಹೊಸದಾಗಿ ಮದುವೆ ಆಗಿತ್ತು. ಹೆಂಡತಿ ತವರೂರು ಬಿಜಾಪುರ. ಹೀಗಾಗಿ ತವರು ಮನೆಗೆ ತಪ್ಪದೆ ಹೋಗಿ ಬನ್ನಿ ಅಂದಿದ್ದಳು. ಬೀಗರು ಕೊಡಿಸಿದ ಹೊಸ ಬಟ್ಟೆ ಹಾಕೊಂಡು ಟಿಪ್ ಟಾಪ್ ಆಗಿ ಹೊರಟಿದ್ದ.
ಸೀತಾರಾಮುಗೆ ಮಾತನಾಡುವ ಗೀಳು. ಈ ರೋಡ್ ರಿಪೇರಿ ಮಾಡಸ್ತೇನೆ ಅಂದು ಹೋದ ಸಲ ಎಲೆಕ್ಷನ್ ಟೈಮ್‍ನಾಗ ನಮ್ ಎಂ.ಎಲ್.ಎ. ಸಾಹೇಬ್ರು ಹೇಳಿದ್ರು. ಆದ್ರೆ ಗೆದ್ದ ಮ್ಯಾಗ ಆಸಾಮಿ ಪತ್ತೇನೆ ಇಲ್ಲ ಎಂದು ಪಕ್ಕದಲ್ಲಿದ್ದ ಸಹ ಪ್ರಯಾಣಿಕನನ್ನು ಮಾತಿಗೆಳೆದ. ಸಾಹೇಬ್ರುದು ನಂದು ಭಾರೀ ನಂಟು. ನಮ್ ಊರಿಗೆ ಬಂದ್ರೆ ನನ್ ಭೆಟ್ಟಿ ಆಗದೆ ಹೋಗೋದೆ ಇಲ್ಲ. ಈ ಸಾರಿ ಬರೋ ಪಂಚಾಯ್ತಿ ಎಲೆಕ್ಷನ್ನಾಗೆ ನನಗೆ ಟಿಕೆಟ್ ಕೊಟ್ಟು, ಅಧ್ಯಕ್ಷಗಿರಿ ನಂಗೆ ಕೊಡ್ತೇನೆ ಅಂದಿದಾರೆ ಅಂದ. ಎಲೆಕ್ಷನ್ ಆದ್ಮೇಲೆ ಒಂದಿನಾನೂ ನಿಮ್ ಊರ ಕಡೆ ತಲೆಹಾಕದವರು ನಿಂಗೆ ಅಧ್ಯಕ್ಷಗಿರಿ ಕೊಡ್ತಾರಾ ಅಂತ ಸಹಪ್ರಯಾಣಿಕ ಪ್ರಶ್ನಿಸಿದ. ಅವರು ಬರದಿದ್ದರೇನಂತ ನಾನಾ ಅವರ ಹತ್ರ ಹೋಗಿ ಕೇಳ್ತೇನೆ ಎಂದು ಸಮಜಾಯಷಿ ನೀಡಿದ. ಹೀಗೆ ಸ್ವಲ್ಪ ಹರಟೆ ಹೊಡೆಯೋದ್ರೊಳಗೆ ಬಾಗೇವಾಡಿ ಬಂತು.
ತಾಯಿನ ಕಾಣೋ ಹಂಬಲದಲ್ಲಿದ್ದ ಶಾರದಾಗೆ, ಅಕ್ಕ ಬಸ್ ಇನಾ ಸ್ವಲ್ಪ ಹೊತ್ ಇಲ್ಲೇ ನಿಂದ್ರತೈತಿ. ಲಗೂನ ನಾಷ್ಟಾ ಮಾಡ್ಕೊಂಡ ಬರೋಣ ಬಾ ಎಂದ. ಬಿಜಾಪುರದ ಹೋದಮ್ಯಾಗ ಮಾಡೂಣ ಇಲ್ಲಿ ಬ್ಯಾಡ ಎಂದಳು. ಚಿಂತಿ ಮಾಡ ಬ್ಯಾಡವಾ. ಅವ್ವಗ ಏನೂ ಆಗಿಲ್ಲ. ಮೈ ಹುಷಾರಿಲ್ಲ ಅಷ್ಟೆ. ಅಷ್ಟಕ್ ನೀ ಹಿಂಗ ಹೊಟ್ಟಿ ಸುಟಗೊಂಡ ಹೊಂಟ್ರ ಹೆಂಗ? ಸರಿ ನೀ ತಿನ್ನದಿದ್ರ ಬ್ಯಾಡ, ಗೋಪಿಗಿ ಏನಾದ್ರೂ ತಿನ್ನಾಕ ತರ್ತೀನಿ ಎಂದು ಬಸ್‍ನಿಂದ ಕೆಳಗಿಳಿದ.
ಬಸ್‍ಸ್ಟ್ಯಾಂಡ್‍ನಲ್ಲಿದ್ದ ಜನರಲ್ ಸ್ಟೋರ್‍ಗೆ ಹೋಗಿ ಒಂದು ದಿನಪತ್ರಿಕೆ ತೆಗೆದುಕೊಂಡು, ಗೋಪಿ ಸಲುವಾಗಿ ಪಾಪಿನ್ಸ್(ಪೇಪರ್ ಮಿಠಾಯಿ) , ಕರದ ಪಾಪಡಿ, ಬಿಸ್ಕಿಟ್ ತೆಗೆದುಕೊಂಡ. ಅಷ್ಟರಲ್ಲಿ ಕಂಡಕ್ಟರ್ ಯಾರ್ರೀ…….. ಬಿಜಾಪುರ ಹತ್ರಿ ಹತ್ರಿ ಎಂದ. ಲಗುಬಗೆಯಿಂದ ಸೀತಾರಾಮು ಬಸ್ ಹತ್ತಿದ. ಪಾಪಡಿ, ಪಾಪಿನ್ಸ, ಬಿಸ್ಕಿಟ್‍ನ ಅಕ್ಕನ ಕೈಗೆ ಕೊಟ್ಟು ಪೇಪರ್ ಓದ್ತಾ ಕೂತ. ಕರಿದ ತಿಂಡಿ ಯಾಕ ತಂದಿ. ಮೊದಲಾ ಹುಡುಗ ಕೆಮ್ಮಕತ್ತಾನ. ಪೇಪರ್ ಮಿಠಾಯಿ ಅಷ್ಟೆ ಇರ್ಲಿ ಎಂದಳು. ತಿನ್ಲಿ ಬಿಡವಾ, ಏನೂ ಆಗಂಗಿಲ್ಲ. ಅಳೆದೇರ ಘಟ್ಟಿ ಅದಾನ. ತಿನ್ಸು ಅಂದ. ಆಯ್ತು ಅಂತ ಶಾರದಾ ಒಂದೊಂದ ಪೇಪರ್ ಮಿಠಾಯಿ ಗೋಪಿಗೆ ತಿನ್ನಸ್ತಾ, ಬಸ್‍ನ ಕಿಡಕಿಗೆ ಒರಗಿ ತಾಯಿ ಬಗ್ಗೆನೆ ಚಿಂತಿ ಮಾಡ್ತಾ ಕೂತಳು.
ಅಷ್ಟರಲ್ಲಿ ಬಸವಣ್ಣನವರ ಗುಡಿ ಬಂತು. ಎರಡೂ ಕೈ ಮುಗಿದು, ಮಗನಿಗೂ ಕೈ ಮುಗಿಯಲು ಹೇಳಿದಳು. ಸೀತಾರಾಮುನೂ ಎರಡೂ ಕೈನ ತಲೆ ಮೇಲೆ ಇಟ್ಕೊಂಡು ಶರಣು ಶರಣಾರ್ಥಿ ಬಸವಣ್ಣ ಎಂದು ಕೈ ಮುಗಿದು ಕುಳಿತ.
ಪತ್ರಿಕೆಯಲ್ಲಿ ಬಿಜಾಪುರದ ಜಿಲ್ಲಾಧಿಕಾರಿಗಳು ನೀಡಿದ್ದ ಪತ್ರಿಕಾ ಹೇಳಿಕೆ ನೋಡಿ ಸೀತಾರಾಮು ದಿಗಿಲುಗೊಂಡ. ಈ ಸಲ ಮಳೆ ಜಾಸ್ತಿ ಆಗಿರುವುದರಿಂದ ಡೋಣಿ ನದಿ ನೀರಿನ ಹರಿವು ಜಾಸ್ತಿ ಆಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದರು.
ಏ……………. ಈ ಡೋಣಿ ನದಿ ಕಾಲಾಗ ಸಾಕಾಗಿ ಹೋಯ್ತು. ಪ್ರತಿ ವರ್ಷ ಮಳೆಗಾಲ ಬಂತಂದರ ಅಡ್ಡಾ ದಿಡ್ಡಿ ನೀರು ಬಂದು ಜನಕ್ ನೂರಾ ಎಂಟು ಸಮಸ್ಯೆ ತರ್ತಾದ. ಇದಕ್ಕೊಂದು ಬ್ರಿಜ್ ಕಟ್ರಿ ಅಂತ ಮಂದಿ ಎಷ್ಟು ಬಡ್ಕೊಂಡ್ರು ಸರ್ಕಾರ ಕೇಳವಲ್ದು. ಮತ್ ಈ ವರ್ಷ ಎಷ್ಟ್ ಸಮಸ್ಯೆ ಆಗ್ತಾದೋ ಆ ದೇವರೇ ಬಲ್ಲ ಎಂದು ಗೊಣಗಿದ. ಶಾರದಾ ಇವನ ಮಾತು ಕಿಂಚಿತ್ತೂ ಕೇಳದೆ ಬಸ್‍ನ ಕಿಟಕಿಗೊರಗಿದ್ದಳು. ಸರ್ಕಾರದ ಹತ್ರ ಟೈಮ್ ಇಲ್ರಿ ಎಂದ ಸಹಪ್ರಯಾಣಿಕ. ನಮ್ ಮುದ್ದೇಬಿಹಾಳದ ಎಂ.ಎಲ್.ಎ.ಸಾಹೇಬ್ರ ಹತ್ರ ಹೆಂಗೂ ಹೊಂಟೇನಲ. ಅದರ ಬಗ್ಗೆ ಮಾತಾಡ್ತೇನೆ. ಈ ನದಿಗಿ ಬ್ರಿಜ್ ಕಟ್ಟಿಸ್ಲಿಲ್ಲಾ ಅಂದ್ರ ಈ ಸಾರಿ ಜನ ನಿಮಗೆ ಓಟ ಹಾಕಂಗಿಲ್ಲ ಅಂತಾನೂ ಎಚ್ಚರಿಸಿ ಬರ್ತೀನಿ ಅಂದು ಮತ್ತೊಮ್ಮೆ ಎಂ.ಎಲ್.ಎ.ಸಾಹೇಬ್ರ ಪರವಾಗಿ ಸಮಜಾಯಿಷಿ ನೀಡಿದ.
ಅಷ್ಟರಲ್ಲಿ ಮನಗೂಳಿ ನ್ಯಾಷನಲ್ ಹೈವೆ ಬಂತು. ಸೊಂಯ್ ಸೊಂಯ್ ಅನ್ನುವ ಬೃಹತ್ ಲಾರಿ, ಬಸ್‍ಗಳ ಶಬ್ದಗಳಿಂದ ಶಾರದಾ ನಿದ್ದೆಯಿಂದದ್ದು ಕುಳಿತಳು. ತಗ್ಗು ದಿನ್ನೆಗಳ ರಸ್ತೆಯಿಂದ ನಿದ್ದೆ ಹಾಳಾಗಿದ್ದ ಮಗ ಗೋಪಿಗೆ ನ್ಯಾಷನಲ್ ಹೈವೆಯಿಂದಾಗಿ ಸಖತ್ ನಿದ್ದೆಗೆ ಜಾರಿದ. ಬಿಜಾಪುರ ಬಸ್‍ಸ್ಟ್ಯಾಂಡಿಗೆ ಬಂದಾಗ ಮುಂಜಾನೆ 11 ಗಂಟೆ ಆಗಿತ್ತು. ಅಕ್ಕ ಬೆಳಿಗ್ಗೆಯಿಂದ ಏನೂ ತಿಂದಿಲ್ಲ. ನಡಿ ನಾಷ್ಟಾ ಮಡ್ಕೊಂಡ ದವಾಖಾನಿಗಿ ಹೋಗಮ್ ಅಂದ. ಬಸ್ ಸ್ಟ್ಯಾಂಡಿನಲ್ಲಿರುವ ಉಡುಪಿ ಹೋಟೆಲ್‍ಗೆ ಹೋದರು. ಒಂದು ಶಿರಾ, 2 ಮಸಾಲೆ ದೋಸೆ ಆರ್ಡರ್ ಮಾಡಿದ. ಯಾವ ಹೊಟೆಲ್‍ಗೆ ಹೋದ್ರೂ ದೋಸೆ ತಿನ್ನೋದೆ ಸೀತಾರಾಮು ಖಯಾಲಿ. ಅವರ ಮನೇಲಿ ದೋಸೆ ಮಾಡೋದು ನಿಷಿದ್ಧವಾಗಿತ್ತು. ಕಾರಣ ದೋಸೆ ಮಾಡಿದ ದಿನವೇ ಅವರ ಮನೆಯ ಹಿರಿಯ ತಲೆಯೊಂದು ಢಂ ಎಂದಿದ್ದರು. ಅದಕ್ಕಾಗಿ ಅವರ ಮನೇಲಿ ದೋಸೆಯನ್ನು ನಿಷೇಧಿಸಲಾಗಿತ್ತು.
ನಾಷ್ಟಾ ಮಾಡ್ಕೊಂಡ ಹೊರಗ ಬಂದಾಗ ಟಾಂಗಾ ಗಾಡಿ ರೆಡಿಯಾಗಿ ನಿಂತಿತ್ತು. ಅಕ್ಕ ಟಾಂಗಾದಾಗ ಯಾಕ ಹೋಗೋದು, ರಿಕ್ಷಾ ತರ್ತೀನಿ ಇರು ಅಂದ. ರಿಕ್ಷಾಕ ಭಾಳ ರೊಕ್ಕ ಕೇಳ್ತಾರ ಟಾಂಗಾಕ ಹೋಗಮ್ ಸುಮ್ನ ಬಾ ಅಂದಳು. ಸರಿ ಅಂತ ಟಾಂಗಾ ಹತ್ತಿದರು. ಕಾಸಿಂ ಸಾಬರ ಜಟಕಾ ಗಾಡಿ ಟಕ…………ಟಕ………..ಟಕ ಶಬ್ದ ಮಾಡುತ್ತಾ ಹೊರಟಿತು.
ದಾರೀಲಿ ಸಿದ್ದೇಶ್ವರ ಗುಡಿ ಬಂದ ತಕ್ಷಣ ಶಾರದಾ ಗುಡಿಗಿ ಹೋಗಿ ಆಮೇಲೆ ದವಾಖಾನಿಗಿ ಹೋಗೋಣ ಅಂದಳು. ಸರಿ ಅಂತ ಸೀತಾರಾಮು ಸಾಬ್ರೆ ಸ್ವಲ್ಪ ಗಾಡಿ ನಿಲ್ಲಿಸ್ರಿ. ಸ್ವಲ್ಪ ದೇವ್ರಿಗಿ ಭೆಟ್ಟಿ ಆಗಿ ಬರ್ತೀವಿ ಅಂದ. ಕಾಸಿಂ ಸಾಬನು ಗಾಡಿ ನಿಲ್ಸಿದ. ಭಾಳ ತಡ ಮ್ಯಾಡಬ್ಯಾಡ್ರಿ. ಜರಾ ಲಗೂನ ಬರ್ರಿ ಅಂದ. ಆಯ್ತು ಅಂತ ದೇವಸ್ಥಾನಕ್ಕೆ ಹೋದರು.
ಪ್ರವೇಶದ್ವಾರದಲ್ಲಿದ್ದ ಬೃಹತ್ ಗಂಟೆ ಬಾರಿಸಿ ಒಳ ಹೋಗುವಾಗ ಗೋಪಿನೂ ಗಂಟೆ ಬಾರಸ್ತೀನಿ ಅಂದ. ಸೀತಾರಾಮು ಹೆಗಲ ಮೇಲೆ ನಿಲ್ಲಿಸಿಕೊಂಡು ಗಂಟೆ ಹೊಡಿಸಿದನು. ನಂತರ ದೇವರ ದರ್ಶನ ಮಾಡಿದರು. ಮಂಗಳಾರತಿ ಮಾಡಿಸಿದರು. ಗರ್ಭಗುಡಿ ಪಕ್ಕದಲ್ಲಿ ಇಟ್ಟಿದ್ದ ದೊಡ್ಡ ವಿಭೂತಿಯನ್ನು ಹಣೆಗೆ ಬಳಿದುಕೊಂಡು ವಾಪಸ್‍ಬಂದು ಟಾಂಗಾ ಹತ್ತಿದರು.
ಮತ್ತೆ ಕಾಸಿಂ ಸಾಬರ ಟಾಂಗಾ ಟಕ…………ಟಕ………..ಟಕ ಎಂದು ಶಬ್ದ ಮಾಡುತ್ತಾ ಹೊರಟಿತು. ತಗ್ಗು ದಿನ್ನೆಗಳನ್ನು ನೋಡದೆ ಜೋರಾಗಿ ಓಡಿಸುತ್ತಿದ್ದಾಗ ಸೀತಾರಾಮು ಕೋಪ ನೆತ್ತಿಗೇರಿತು. ರೀ ಸಾಬ್ರೆ ಸ್ವಲ್ಪ ಸಾವಕಾಶ ಓಡಿಸ್ರಿ. ಹುಣಸಗಿಯಿಂದ ಬಿಜಾಪುರಕ ಬರೋತನಕ ಬಸ್‍ನ್ಯಾಗ ಹಿಂಗ ವದ್ಯಾಡ್ಕೊಂಡ ಬಂದೀವಿ. ನೀವು ಇಲ್ಲೀನೂ ಹಿಂಗ ಓಡಿಸಿದ್ರ ದವಾಖಾನ್ಯಾಗ ಇರೋ ಪೇಶಂಟ್ ನೋಡೋಕ ಹೋದೋರು ನಾವು ಅವರ ಬಾಜುನ ಮಕ್ಕೊಳಂಗ್ ಮಾಡ್ತೀರಿ. ಸ್ವಲ್ಪ ನಿಧಾನ ಓಡಿಸ್ರಿ. ಟಾಂಗಾವಾಲಾ ಕಾಸಿಂಸಾಬ್‍ನೂ ಸ್ವಲ್ಪ ನಿಧಾನ ಮಾಡಿದ. ನಮ್‍ಕುದುರೆ ಸ್ವಲ್ಪ ಫಾಸ್ಟ್ ಅದಾರಿ. ದಾರಿನೂ ಸುದ್ ಇಲ್ಲ. ಏನ್ ಮಾಡಬೇಕ್ರಿ. ಆಯ್ತು ಮಾರಾಯ ನೀ ಹೆಂಗಾರ ಹೋಗು ಎಂದು ಸುಮ್ನೆಕೂತ.
ಅಷ್ಟರಲ್ಲಿ ಬಿ.ಎಲ್.ಡಿ.ಇ.ಆಸ್ಪತ್ರೆ ಬಂತು. 12 ಗಂಟೆ ಆಗಿತ್ತು. ಸರಿಯಾಗಿ 6 ರೂ ಚಿಲ್ರೆ ಎಣಿಸಿ ಕೊಟ್ಟ. ರೀ ಸಾಹೇಬ್ರೆ 10 ರೂಪಾಯಿ ಕೊಡ್ರಿ, ಬಸ್‍ಸ್ಟ್ಯಾಂಡಿನಿಂದ ಬಂದಿನಿ ಅಂತ ಟಾಂಗಾವಾಲಾ ತಗಾದೆ ತೆಗೆದ. 10 ರೂಪಾಯಿ ಕೊಡಾಕ ನಾವೇನ್ ರಿಕ್ಷಾದಾಗ ಬಂದಿಲ್ಲ. ಟಾಂಗಾದಾಗ ಬಂದೀವಿ ಎಂದು ಮಾರುತ್ತರ ನೀಡಿದ. ರಿಕ್ಷಾದಾಗ ಬರ್ಬೇಕಿತ್ರಿ, ನಾನೇನು ಕೈ ಹಿಡಿದು ಕರ್ಕೊಂಡ್ ಬಂದು ಕೂಡಿಸಿದ್ನಾ? ಎಂದ ಟಾಂಗಾವಾಲಾ. ಇವರಿಬ್ಬರ ಕಿತ್ತಾಟ ನೋಡಿ ಶಾರದಾ, ಇರ್ಲಿ 10 ರೂಪಾಯಿನೇ ಕೊಟ್ಟು ಬಾ ಅಂದಳು. ಸರಿ ಅಂತ ತಲೆ ತೂಗಿಸಿ ಜೇಬಿನಿಂದ 4 ರೂಪಾಯಿ ಚಿಲ್ರೆ ತೆಗೆಯೋದ್ರೊಳಗೆ ಟಾಂಗಾ ಕುದುರೆ ಹಿಂದಿನ ಕಾಲು ಜಾಡಿಸಿತು. ಥೂ………. ನೀನು-ನಿನ್ ಕುದುರೆ, ನನ್ ಹೆಂಡ್ತಿ ಎಲ್ಲಾ ಒಂದೇ ಜಾತಿ. ಜಗಳಕ್ ಮೈಮ್ಯಾಗೆ ಬೀಳ್ತಿರಲ್ಲ. ತಗೊಂಡ ಹಾಳಾಗ ಹೋಗು ಅಂದ. 4 ರೂಪಾಯಿ ಕೊಟ್ಟು ಶಾರದಾ ಹಿಂದೆ ಹೊರಟ. ಕಹಾಂ ಸೇ ಆಯೇರೆ……. ನಿನ್ನ ಹೆಂಡ್ತಿ ಮ್ಯಾಲಿನ ಸಿಟ್ ನಮ್ ಮೇಲೆ ತೋರಿಸಿದ್ರೆ ಹೆಂಗ ಎಂದು ಟಾಂಗಾವಾಲ ಹೊರಟ.
ಹುಣಸಗಿಯಿಂದ ಬಂದಿರೋ ಪೇಷಂಟ್ ಯಾವ ವಾರ್ಡನ್ಯಾಗ ಅದಾರ್ರಿ ಅಂತ ಅನ್ನುವಷ್ಟರಲ್ಲಿ ರಾಮಣ್ಣನೇ ಬಂದ. ನಾನೂ ನಿಮಗೋಸ್ಕರನೇ ಕಾಯ್ಕೋತ ಕುಂತಿದ್ಯ. ಅಷ್ಟರಲ್ಲಿ ನೀವು ಬಂದ್ರಿ. ಛೊಲೋ ಆತ ನೀವು ಬಂದಿದ್ದು. ಬರ್ರಿ ಅಂತ ರಾಮಣ್ಣ ಗೋಪಿನ ಎತ್ಕೊಂಡು ಹೊರಟರು.
3ನೇ ಅಂತಸ್ತಿನ ಒ.ಪಿ.ಡಿ.ಯಲ್ಲಿದ್ದಳು ತಾಯಿ ರತ್ನಾಬಾಯಿ. ದೊಡ್ಡ ಕೋಣೆಗಳು. ಹತ್ತಾರು ಬೆಡ್‍ಗಳು, ಅದರ ಮೇಲೆ ಪೇಷಂಟ್‍ಗಳ ನರಳುವಿಕೆ. ಒಬ್ಬ ಪೇಷಂಟ್ ಪಕ್ಕದಲ್ಲಿ ಇಬ್ಬರು ಇಲ್ಲವೆ ಮೂರು ಜನ ಕೂತ್ಕೊಬಹುದು. ಮಲಗಿದ್ದ ರತ್ನಾಬಾಯಿಯನ್ನು ಸೊಸೆ ಜಯಕ್ಕ(ರಾಮಣ್ಣನ ಹೆಂಡತಿ) ಎಬ್ಬಿಸಿದಳು. ಮಗಳನ್ನು ನೋಡಿದ ಕೂಡಲೆ ರತ್ನಾಬಾಯಿಗೆ ಎಲ್ಲಿಲ್ಲದ ಖುಷಿ. ತಾನೆ ಎದ್ದು ಕುಳಿತುಕೊಳ್ಳಲು ಯತ್ನಿಸಿದಳು. ಬ್ಯಾಡವಾ ಏಳಬ್ಯಾಡ. ತ್ರಾಸ್ ಆಕ್ಕೈತಿ. ಆರಾಮ ಮಲ್ಕೊ. ಈಗ ಹೆಂಗ ಅದಿ ಅಂದಳು ಶಾರದಾ. ಆರಾಮ ಅದೀನವ. ಏನೂ ಆಗಿಲ್ಲ. ಏನೋ ಸಣ್ಣ ಗಡ್ಡಿ ಆಗಿತ್ತಂತ ಹೊಟ್ಯಾಗ.ಅದಾ ಇಷ್ಟ ದಿನ ತ್ರಾಸ ಮಾಡಿತ್ತು. ಈಗ ಆರಾಮ ಅದೀನಿ. ಹೌದು….. ತಮ್ಮ ಶಾಮಣ್ಣ ಬಂದಿಲ್ಲೇನವಾ ಎಂದು ರಾಗ ಎಳೆದಳು.
ಇಲ್ಲ ಬರಲಿಲ್ಲ. ತೋಟದಾಗÀ ಭಾಳ ಕೆಲ್ಸ ಅದಾವ. ಮಳಿ ಬ್ಯಾರೆ ಹತ್ಯಾದ ನೀನಾ ಹೋಗಿಬಾ ಅಂದ್ರು. ಅವ ಬರಂಗಿಲ್ಲವ ನಂಗೊತ್ತದ. ಹಠಮಾರಿ ಅದಾನವ. ಒಂದ ಮಾತ ಅಂದ್ರ ಸಾಕು ಸಾಯೋತಕ ಬಿಡೋ ಮಗಾನೆ ಅಲ್ಲ ಅವ. ಇಲ್ಲವಾ ತೋಟದಾಗÀ ಭಾಳ ಕೆಲ್ಸ ಅದಾವ ಅದ್ಕ ಬರ್ಲಿಲ್ಲ. ನೀ ಆರಾಮಿಲ್ಲ ಅಂತ ಕೇಳನ ಭಾಳ ಬ್ಯಾಸರ ಮಾಡ್ಕೊಂಡ್ರು. ನಂಗ ಕೆಲ್ಸ ಜಗ್ಗಿ ಅದಾವ, ತಮ್ಮನ್ ಕರ್ಕೊಂಡ್ ನೀನಾ ಹೋಗಿ ಬಾ ಅಂದ್ರು ಅಂತ ಶಾಮಣ್ಣೋರ ಪರವಾಗಿ ಶಾರದಾ ವಕಾಲತ್ತು ವಹಿಸಿದಳು.
ಆದ್ರೂ ಮಾವಗ ಇಷ್ಟ ಹಠ ಇರಬಾರದು ಬಿಡವ. ಏನೋ ಬಾಯ್ತಪ್ಪಿ ಆಡಿದ ಮಾತಿಗೆ ಹಿಂಗ ಹಠ ಮಾಡೂದಾ? ಎಂದು ಪ್ರಶ್ನಿಸಿದ ರಾಮಣ್ಣ. ಓ………ಎಣ್ಣ………..ಮತ್ ಮತ್ ಹಳೆ ಪುರಾಣ ಈಗ್ಯಾಕ? ಹೋಗ್ಲಿ ಬಿಡು. ಮಾವ ಬಂದಿಲ್ಲ ಅಂದ್ರೇನು? ಅಕ್ಕನ್ ಕಳಿಸ್ಯಾರಲ್ಲ ಅಷ್ಟಕ್ ಖುಷಿ ಪಡು ಎಂದು ನಡುವೆ ಬಾಯಿ ಹಾಕಿದ ಸೀತಾರಾಮು.
ಅಷ್ಟರಲ್ಲಿ ಡಾಕ್ಟರ್ ಬಂದ್ರು. ಇಷ್ಟ ಜನ ಕೂತು ಇಲ್ಲೇನ್ ಮಾಡಕತ್ತೀರಿ. ಪೇಷಂಟ್‍ಗ ತ್ರಾಸ್ ಆಕ್ಕೈತಿ ಅಂತ ಗೊತ್ತಿಲ್ಲೇನ ನಿಮಗ ಅಂತ ಗದರಿದರು. ಈಗ ಬಂದಿವ್ರಿ ನಾವು. ಇಲ್ಲೇನ ಗಲಾಟೆ ಮಾಡಕತ್ತಿಲ್ಲ, ಸುಮ್ನೆ ಮಾತಾಡಕತ್ತೀವಿ ಅಂದ ಸೀತಾರಾಮು. ಆಯ್ತು ಪೇಷಂಟ್ ಜೊತೆ ಭಾಳ ಮಂದಿ ಇರಬ್ಯಾಡ್ರಿ. ಭಾಳ ಮಾತಾಡ್‍ಬ್ಯಾಡ್ರಿ. ಆಕಿಗಿ ರೆಸ್ಟ್ ಬೇಕು ಎಂದು ಡಾಕ್ಟರ್ ಹೇಳಿ ಹೊರಟರು.
ನಿನ್ನ ಹೆಂಡ್ತಿ ಸಂಗೀತಾ ಬಂದಿಲ್ಲೇನಪ? ಎಂದು ಜಯಕ್ಕ ಸೀತಾರಾಮುಗ ಕೇಳಿದಳು. ಬಿಜಾಪುರಕ್ ಅಂದ್ರ ಏನವ ಕುಣಕೊಂತ ಬರ್ತಾಳ. ಅವಳ ತವರ ಮನಿಗಿ ಹೋಗಾಕ ಬರ್ತಾಳ, ಅದ್ಕ ಬ್ಯಾಡ ಅಂತ ಬಿಟ್ಟ ಬಂದೆ. ಮನ್ಯಾನ ದನಗಳು ಯಾರು ನೋಡ್ಕೊಬೇಕು ? ಅಕಿಗಿ ಮತ್ ಯವಾಗನ ನೆಗಡಿ ಕೆಮ್ಮ ಬಂದ್ರ ಕರ್ಕೊಂಡ ಬರ್ತೀನಿ ಎಂದ. ನೋಡಪ ತಮ್ಮ ಮದುವೆ ಆಗಿ ಈಗ ತಿಂಗಳ ಆಗ್ಯಾದ. ಆಕಿ ನಮ್ ಮನಿಗಿ ಎಡ್ಜೆಸ್ಟ್ ಆಗಬೇಕಂದ್ರ ಕಷ್ಟ ಆಕ್ಕೈತಿ. ಮೊದಲೆ ಸಿಟ್ಯಾಗ ಬೆಳೆದ ಹುಡುಗಿ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳಿಸ್ಯಾರ. ಎಡ್ಜೆಸ್ಟ್ ಮಾಡ್ಕೊಬೇಕಪ ಅಂತ ಶಾರದಾ ತಿಳಿ ಹೇಳಿದಳು.
ಆಯ್ತ ಆಯ್ತ ಹೊರಗ ಬರ್ರಿ, ಇಲ್ಲೆ ನಿಂತ್ರ ಡಾಕ್ಟರ್ ಬೈತಾರ ಅಂತ ರಾಮಣ್ಣ ಹೇಳಿದ. ರಾಮಣ್ಣ ಅವರ್ನ ಊಟಕ್ ಕರ್ಕೊಂಡ್ ಹೋಗಪ ಎಂದಳು ರತ್ನಾಬಾಯಿ. ಮತ್ತೆಲ್ಲಿಗೆ ಊಟಕ್ ಹೋಗ್ತೀರಿ. ಊರಿಂದ ಬುತ್ತಿ ತಂದೀನಿ ನೀವು ಊಟ ಮಾಡ್ರಿ.ನಾ ಆಗ್ಲೆ ನಾಸ್ಟಾ ಮಾಡಿನಿ. ನಾ 2 ಗಂಟೆ ಬಸ್ಸಿಗೆ ಮತ್ ಊರಿಗೆ ಹೋಗ್ತೀನಿ ಎಂದಳು ಶಾರದಾ. ಅರೆ ಇನ ಈಗರ ಬಂದೀದಿ. ಊಟಾನೂ ಮಾಡಲಾರದ ಹೋಗ್ತೇನವ. ಊಟ ಮಾಡು ಮೊದ್ಲು. ಇವತ್ ಇದ್ದು ನಾಳಿಗಿ ಮುಂಜಾನಿ ಬಸ್ಸಿಗಿ ಹೋಗ್ರಲ ಎಂದಳು ಜಯ.
ಇಲ್ಲ ಜಯಾ ನಿಮ್ ಕಾಕಾ ಊರಾಗ ಒಬ್ರ ಅದಾರ. 2 ಸಣ್ಣ ಹುಡುಗರ ಏನ್ ಮಾಡ್ತಾರ. ಮಳೆಗಾಲ ಬೇರೆ. ನಾ ಹೊಕ್ಕಿನಿ ಅಂತ ಕುಳಿತಳು. ಆಯ್ತವಾ ಊಟ ಆದ್ರೂ ಮಾಡಿ ಹೋಗು ಅಂದ ರಾಮಣ್ಣ. ಏ ಸೀತಾರಾಮು ನೀ ಏನ್ ಇರ್ತಿದ್ಯಾ ಇಲ್ಲ ಅಕ್ಕನ್ ಕರ್ಕೊಂಡ್ ಹೋಗ್ತಿದ್ಯಾ? ನೀ ಹೋಗಲ್ಲಂದ್ರ ನಾನೆ ಹೋಗಿ ಊರಿಗಿ ಬಿಟ್ ಬರ್ತೀನಿ ಅಂದ ರಾಮಣ್ಣ. ಹೊಸದಾಗಿ ಮದುವೆ ಆಗಿದ್ದ ರಾಮು, ಏಯ್ ನಾನೆ ಹೋಗ್ತಿನಪ ಊರಾಗ ನಂಗೂ ಕೆಲ್ಸ ಭಾಳ ಅದಾವ ! ಇಲ್ಲಿದ್ ಏನ್ ಮಾಡ್ಲಿ. ನೀ ಅದಿ ಅಲಾ. ನಾನಾ ಹೊಕ್ಕಿನಿ ಅಂದ ಸೀತಾರಾಮು. ಆಯ್ತು ಲಗೂನ ಊಟ ಹಚ್ರಿ.
ಏನಪ ರಾಮು ತಂಗಿ ಕರ್ಕೊಂಡ ಸಿನಿಮಾಕ್ ಹೋಗಿದ್ಯಂತಲಾ, ಯಾವುದದು ಸಿನಿಮಾ? ನಿಮ್ಮಣ್ಣ ಇದ್ದಾವ ಒಂದಿನಾನೂ ಕರ್ಕೊಂಡ ಹೋಗ್ಲಿಲ್ಲ. ನೀನಾರ ಸಂಗೀತಾಗ ಸಿನಿಮಾ ತೋರ್ಸಿ ಬಿಡು. ಇಲ್ಲವಾ ವೈನಿ ನಾ ಹೋಗವ ಅಲ್ಲ. ಅಕಿನೆ ಕಿರಿಕಿರಿ ಮಾಡಿದ್ಲು. ಹೆಣ್ ನೋಡಾಕ ಹೋದ ದಿನ ಅಕಿ ತಾಳಿಕೋಟಿದಾಗ ನಂಜುಂಡಿ ಕಲ್ಯಾಣ ಸಿನಿಮಾ ನೋಡಾಕ್ ಅಕಿನ ಗೆಳತಿಯರ ಜೊತೆ ರೆಡಿ ಆಗಿದ್ಲಂತ. ನಾ ಅಕಿನ ನೋಡಾಕ ಬರ್ತೀನಿ ಅಂದಿದ್ದಕ್ಕ ಸಿನಿಮಾ ನೋಡದ ಬಿಟ್ಟಿದ್ಲು. ನಿನ್ ಸಲೆಂದ ಸಿನಿಮಾ ನೋಡದ ಬಿಟ್ಯಾ ಅಂತ ದಿನಾ ಮೂತಿ ತಿವಿತಿದ್ಲು. ಅದಕ್ ಕರ್ಕೊಂಡ ಹೋದ್ಯಾ. ಅಕಿ ಬಿಜಾಪುರದಾಗ ಸಿನಿಮಾ ತೋರ್ಸಂದ್ಳು. ನಾನಾ ಹುಣಸಗಿ ಟಾಕೀಸ್‍ನಾಗೂ ಅದೇ ನಂಜುಂಡಿ ಕಲ್ಯಾಣ ಸಿನಿಮಾ ಅದಾ ಅಲ್ಲೆ ಹೋಗಮ್ ನಡಿ ಅಂತ್ಹೇಳಿ ಕರ್ಕೊಂಡ ಹೋಗಿದ್ಯಾ.
ಏಯ್ ತಮ್ಮ ಮೊದಲು ಊಟ ಮಾಡು ಆಮೇಲೆ ಸಿನಿಮಾ ಬಗ್ಗೆ ಮಾತಾಡು ಊರಿಗಿ ಲಗೂನ ಹೋಗಮ್. ಮೊದಲೇ ಡೋಣಿ ನದಿ ತುಂಬಿ ಬರ್ತಾದಂತ ಹೇಳಿದಿ. ಹೌದವಾ ನಾನೂ ಪೇಪರ್ದಾಗ ಓದಿನಿ. ಇವತ್ ಇದ್ದು ನಾಳಿ ಮುಂಜಾನಿನ ಬಿಜಾಪುರ-ಮಂತ್ರಾಲಯ ಬಸ್ಸಿಗಿ ಹೋಗಿ ಬಿಡಿ ಅಂದ ರಾಮಣ್ಣ. ಇಲ್ಲಪ ನಾವ್ ಇವತ್ತ ಹೋಗ್ತೀವಿ. ಮಾವ ಬಂದು ಹುಣಸಗಿ ಬಸ್‍ಸ್ಟ್ಯಾಂಡ್ ದಾಗ ಕುಂತ ಬಿಟ್ಟಿರ್ತಾನ. ಊರಿಗಿ ಹೋಗ್ಲಿಲ್ಲ ಅಂದ್ರ ಗಾಬರಿ ಆಗ್ತಾನ. ನಾವ್ ಬಿಜಾಪುರ- ಶಕ್ತಿನಗರ ಬಸ್ಸಿಗೆ ಹೋಗ್ತೀವಿ ಅಂದ ಸೀತಾರಾಮು.
ಊಟ ಮಾಡಿ ಮತ್ತೊಮ್ಮೆ ಅವ್ವಗ ಭೆಟ್ಟಿ ಆಗಿ ನಿನ್ನ ತಮ್ಮನ್ ರವಿವಾರ ಕಳಿಸಿಕೊಡ್ತೀನಿ ನೀ ಚಿಂತಿ ಮಾಡಬ್ಯಾಡವಾ ಅಣ್ಣ ಇರ್ತಾನ ಲಗೂನ ಡಿಸ್ಚಾರ್ಜ್ ಮಾಡ್ಕೊಂಡ ಬರ್ರಿ. ನಾವೀಗ ಹೊರಡ್ತೀವಿ ಅಂತ ಶಾರದಾ ಪ್ರಯಾಣಕ್ಕೆ ಸಿದ್ಧಳಾದಳು. ಬಸ್ ಸ್ಟ್ಯಾಂಡಿಗಿ ಬರೋ ಹೊತ್ತಿಗಿ 3 ಗಂಟೆ ಆಗಿತ್ತು. ಬಸ್ ಬೇರೆ ಬಂದು ನಿಂತಿತ್ತು. ಸೀತಾರಾಮು ಸ್ವೀಟ್ ಹೌಸ್‍ದಾಗ ಹೋಗಿ ಹೆಂಡತಿ ಸಲುವಾಗಿ ಮೈಸೂರು ಪಾಕ್-ಖಾರಾ ತಗೊಂಡ ಬಂದ . ಇನ್ನೇನು ಬಸ್ ಬಿಡಾವ ಇದ್ದ ಅಷ್ಟರಾಗ ನಾವೂ ಅವಸರ ಮಾಡಿ ಹತ್ತಿದ್ವಿ.
ನೋಡ್ರಿ ಡೋಣಿ ನದಿ ನೀರು ಸಂಜಿ ಅನದ್ರಾಗ ಬರ್ತಾವಂತ. ಹೋದ್ರ ಡೈರೆಕ್ಟ್ ತಾಳಿಕೋಟಿಗಿ ಹೋಗ್ತೀವಿ. ಇಲ್ಲಾಂದ್ರ ವಾಯಾ ಮಿಣಜಗಿಯಿಂದ ಮುದ್ದೇಬಿಹಾಳ ಹೋಗಿ ನಾರಾಯಣಪುರದಿಂದ-ಲಿಂಗಸ್ಗೂರು-ಶಕ್ತಿನಗರ ಹೋಗ್ತೀವಿ ಅಂತ ಕಂಡಕ್ಟರ್ ಕೂಗಿ ಹೇಳಿದ. ಶಾರದಾ ದಿಗಿಲುಗೊಂಡು ರಾಮು ನಾವು ಸುಮ್ ಸಿಂದಗಿ-ಕೆಂಭಾವಿ- ಹುಣಸಗಿಗೆ ಹೋಗಮ್ ಸುಮ್ಮನ ಕಿರಿಕಿರಿ ಬ್ಯಾಡಪ. ಇಳದ ಬಿಡಮ್ ನಡಿ ಅಂದಳು. ಏಯ್ ಇದೆಲ್ಲ ಎಷ್ಟರ ನೀರವ, ಎಲ್ಲಾರೂ ಹೊಂಟಾರಲ ನಾವೂ ಅವರ ಜೊತಿಗೆ ಹೋಗಮ್. ಸಿಂದಗಿ ಹೋಗಿಂದ ಆ ಕಡಿ ಬಸ್ ಲಗೂನ ಸಿಗಬೇಕಲ ಸುಮ್ಮನ ಡೈರೆಕ್ಟ್ ಬಸ್ ಅದಾ ನಡಿ ಹೋಗಮ್ ಅಂಜಬ್ಯಾಡ ಎಲ್ಲಾರಂಗ ನಾವು ಧೈರ್ಯ ಮಾಡಿ ಗುಡ್ಡದ ಪರಮಾನಂದನ ಮ್ಯಾಲಿ ಭಾರ ಹಾಕಿ ಹೊಂಟಿವಿ.
ಬಸ್‍ನ್ಯಾಗ ಎಲ್ಲಾರ ಬಾಯಾಗೂ ಡೋಣಿ ನದಿದ ಮಾತು. ಅವ್ವಗ ಆರಾಮ್ಯಾಗದ ಅಂತ ಸಮಾಧಾನ ಆಗೋದ್ರೊಳಗ ಈ ಡೋಣಿದೊಂದು ಚಿಂತಿ ಹತ್ತಿತಲಪ. ನೀರು ಭಾಳ ಬಂದ್ರ ಹೆಂಗ ಮಾಡಬೇಕು. ನಾರಾಯಣಪುರತಕ ಹೋದ್ರ ಅಲ್ಲಿಂದ ಹುಣಸಗಿಗಿ ಬಸ್ ಸಿಗಬೇಕಲ ? ನಾರಾಯಣಪುರ ಮುಟ್ಟದ್ರಾಗ ಸಂಜಿ ಆಗತಾದ, ಮುಂದ ಹೆಂಗ ಮಾಡಬೇಕು ಅಂತ ತಳಮಳದಲ್ಲೇ ಇದ್ದಳು ಶಾರದಾ.
“ನಿಜವ ನುಡಿಯಲೆ ನನ್ನಾಣೆ ನಲ್ಲೆ , ಪ್ರೀತಿಯ ರಂಗೂ ತುಂಬಿದೆ” ಎಂದು ಸಂಗೀತಾಳ ಗುಂಗಿನಲ್ಲೇ ಹಾಡನ್ನು ಗುನುಗಿಸುತ್ತಿದ್ದ ಸೀತಾರಾಮುಗೆ ಧುತ್ತನೆ ಬಸ್ ಬ್ರೇಕ್ ಹಾಕಿದಾಗಲೆ ಅರಿವಾಗಿದ್ದು. ಯಾಕಪ ಡ್ರೈವರ್ ಸಾಬ್ ಇಷ್ಟ ಅರ್ಜೆಂಟ್ ಬ್ರೇಕ್ ಹಾಕಿದಿ.? ಏನಾಗ್ಯಾದ ಅಂತ ಕೆಳಗ ಇಳದ ನೋಡಿದ್ರ ಸಾ….ಲಕ ಗಾಡಿಗಳು ನಿಂತಾವ. ಬಸ್, ಲಾರಿ, ರಿಕ್ಷಾ……. ಡೋಣಿ ನದಿ ನೀರು ಭಾಳ ಬಂದು ದಾರಿ ಬಂದ್ ಆಗ್ಯಾದ ಮುಂದಕ ಹೋಗಾಕ ಆಗಲ್ಲ ಅಂತ ಕಂಡಕ್ಟರ್ ಉಸುರಿದಾಗ ಶಾರದಾ ಎದೆ ಧಸಕ್ಕಂದಿತು. ಇವತ್ ನಾವ್ ಊರು ಮುಟ್ಟಂಗಿಲ್ಲ. ನಾ ಮೊದ್ಲೆ ಬಡಕೊಂಡ್ಯಾ ಸಿಂದಗಿ ಮ್ಯಾಗ ಹೋಗಮ್ ಈ ಕಡಿ ಹೋಗದ ಬ್ಯಾಡ ಅಂತ. ಹೇಳಿದ್ ಕೇಳಲಿಲ್ಲಪ ನೀನು. ಈಗ ನೋಡ ನಡಬರಕ ಬಂದ ಸಿಗಿಬಿದ್ದೀವಿ. ಎಲ್ಲರೂ ಹೊಂಟಾರಂತ ನಾನೂ ಹೋಗಮ್ ಅಂದ್ಯ. ನನಗೇನ ಗೊತ್ತ ಹಿಂಗ ಆಗತಾದಂತ. ದೇವರ ಮ್ಯಾಗ ಭಾರ ಹಾಕಿ ಬಂದಿವಿ. ಒಟ್ಟ ಊರು ಮುಟ್ಟತೀವಿ ಚಿಂತಿ ಮಾಡಬ್ಯಾಡವ.
ಏಯ್…. ಇದೇಟರ ನೀರ್ ಅದಾ. ಹತ್ರಿ ಹತ್ರಿ ಹೋಗಮ್ ಅಂತ ಡ್ರೈವರ್ ಕೂಗಿದ. ಏಯ್ ತಮ್ಮ ಹೋಗದ ಬ್ಯಾಡಪ ನೀರ ಭಾಳ ಅದಾವ. ನಡಬರಕ ಹೋಗಿ ಸಿಗಿಬೀಳದ ಬ್ಯಾಡ ಸುಮ್ಮನ ಇರು. ನೀರು ಇಳದ ಮ್ಯಾಗ ಹೋಗಮ್ ಅಂತ ಕೆಲವರು ಹೇಳಿದರೆ ಇನ ಕೆಲವರು ಇದೇಟರ ನೀರು ಅಂತ ಇಲ್ಲೇ ಕುಂದ್ರತೀರಿ.? ನಡೀರಿ ನಡೀರಿ ಅಂತ ಡ್ರೈವರ್‍ಗ ಹುರಿದುಂಬಿಸಿದರು. ಡ್ರೈವರ್‍ಗೂ ಒಂದಷ್ಟು ಬಲ ಬಂದಂತಾಗಿ ಗೇರ್ ಹಾಕಿ ಕ್ಲಚ್ ಬಿಟ್ಟೇ ಬಿಟ್ಟ. ಎಲ್ಲರೂ ಜೋರಾಗಿ ಸಿದ್ರಾಮೇಶ್ವರ ಮಹಾರಾಜ್ ಕಿ ಜೈ, ಖಾಸ್ಗತೇಶ್ವರ ಮಹಾರಾಜ್ ಕಿ ಜೈ, ಮೈಲಾಪುರ ಮಲ್ಲಯ್ಯ ಕಿ ಜೈ ಎಂದು ಜೋರಾಗಿ ಕೂಗುತ್ತ ಡ್ರೈವರ್‍ಗೆ ಹುರಿದುಂಬಿಸುತ್ತಿದ್ದರು. ಡ್ರೈವರ್‍ನೂ ಧೃತಿಗೆಡದೆ ಓಡಿಸಿದ್ದರಿಂದ ಹಳ್ಳ ದಾಟಿ ದಿಬ್ಬಿ ಮ್ಯಾಗ ಹೋಗಿ ಧಸಕ್ಕಂತ ಬ್ರೇಕ್ ಹಾಕಿಬಿಟ್ಟ. ಮತ್ಯಾಕ ದಿಬ್ಬಿಗಿ ತಂದು ನಿಂದ್ರಿಸಿದ್ಯಪ ಓಡಸು ಅಂತ ಪ್ರಯಾಣಿಕರು ಹೇಳತಿದ್ದಂಗೆ ಡ್ರೈವರ್ ಮುಂದೆ ಕೈ ಮಾಡಿ ತೋರಿಸಿದ. ನಾವು ಇಷ್ಟೊತ್ತು ಬಂದಿದ್ದು ನದಿ ಅಲ್ಲ.! ನದಿ ಪಕ್ಕದಲ್ಲಿ ಹರಿದು ಬಂದಿದ್ದ ಹಿನ್ನೀರು ದಾಟಿ ಬಂದೀವಷ್ಟೇ ಅಂತ ಕೈ ತೋರಿಸಿದ. ಇನ್ ಮುಂದ ಹೋಗಾಕ ಆಗದಿಲ್ಲ. ನಾವು ನಡಬರಕ ಸಿಗಿ ಬಿದ್ವಿ. ನೀರು ಇಳ್ಯಾತನ ಇಲ್ಲೇ ಇರಬೇಕು. ನದಿ ಎದುರಿಗೆ ತಾಳಿಕೋಟೆಯ ಜನ ಕೈ ಮಾಡಿ ನದಿ ದಾಟಬ್ಯಾಡ್ರಿ ನೀರು ಭಾಳ ಅದಾವ ಅಂತ ಕೈ ಮಾಡಿ ನೀರು ಇಳದ ಮ್ಯಾಗ ಬರ್ರಿ ಅಂತ ಕೈ ಸನ್ನೆ ಮಾಡುತ್ತಿದ್ದರು.
ಮುಂದ ಹೋಗಕಂತೂ ಆಗಲ್ಲ ವಾಪಸ್ ಹಿಂದಕ ಹೋಗಮ್ ಅಂದ್ರ ಹಿಂದ ದಾಟಗೊಂಡ ಬಂದಿದ್ದ ಹಿನ್ನೀರು ಕೂಡ ಜಾಸ್ತಿ ಬರಾಕ್ ಚಾಲೂ ಆಯ್ತು. ಹಿಂದಕೂ ಹೋಗಂಗಿಲ್ಲ ಮುಂದಕೂ ಹೋಗಂಗಿಲ್ಲ. ರಾತ್ರಿ ಇಲ್ಲೆ ಕಳಿಬೇಕಾಗತಾದ ಅಂದಾಗಲೇ ಸೀತಾರಾಮುಗೂ ದಿಗಿಲು ಬಡದಂಗ ಆಯ್ತು. ಕೂಸಿನ ಕರ್ಕೊಂಡ ಹೆಣ್ಮಗಳನ್ ಕರ್ಕೊಂಡ ಬಂದಿನಿ. ಇವತ್ ಊರು ಮುಟ್ಟಿಲ್ಲ ಅಂದ್ರ ಮಾವ ಉಗ್ಯಾದಂತೂ ಗ್ಯಾರಂಟಿ. ಹೆಂಗರ ಆಗಲಿ ನಾನರ ಏನ ಬೇಕಂತ ಮಾಡಿನೇನ ಮಾವ ತಿಳಕೋತಾನ ತಗೊ ಅಂತ ತನಗೆ ತಾನೇ ಸಮಾಧಾನ ಮಾಡಿಕೊಂಡ. ಸಂಜಿ 6 ಗಂಟೆ ಹೊತ್ತು ಕುಡಿಲಾಕ ನೀರಿಲ್ಲ. ತಿನ್ನಾಕ ಏನೂ ಇಲ್ಲ. ಕೂಸಿಗಿ ಏನ್ ತಿನಸಬೇಕಪ? ಗೋಪಿ ಹೊಟ್ಟಿ ಹಸ್ತಾದ ಅಂತ ಕುಂತಾನ ಅಂತ ಶಾರದಾ ಚಿಂತಿ ಮಾಡ್ಕೊಂತ ಕುಂತಳು. ಅಷ್ಟರಲ್ಲಿ ಪ್ರಯಾಣಿಕನೊಬ್ಬ ತಾನು ವ್ಯಾಪಾರಕ್ಕೆಂದು ತಂದಿದ್ದ ಮಂಡಾಳ(ಚುರುಮುರಿ) ಚೀಲ ತಗದು “ಸೇರಿಗೊಂದು ರೂಪಾಯಿ” “ಸೇರಿಗೊಂದು ರೂಪಾಯಿ” ಅಂತ ಮಾರಲಾಕ ಶುರು ಹಚಗೊಂಡ. ಹೊಟ್ಟಿ ಹಸಗೊಂಡ ಕುಂತಾದ ಕೂಸು. ಹೆಂಗರ ಇರಲಿ ಅಂತ ಒಂದು ಸೇರ ಒಣ ಮಂಡಾಳ ತಗೊಂಡ್ಳು. ಉಳಿದ ಪ್ರಯಾಣಿಕರೂ ಒಂದೊಂದು ಸೇರ ಮಂಡಾಳ ತಗೊಂಡ ತಿನಕೋತ ಕುಂತ್ರು. ಅಷ್ಟರಾಗ ಗೋಪಿಗಿ ಸಂಡಾಸ್ ಬಂತಂತ ಅವರವ್ವಗ ಕೈ ಮಾಡಿ ತೋರಿಸಿದ. ಆಯ್ತ ನಡಿಪ ಕೆಳಗ ಹೋಗಮ್ ಅಂತ ಬಸ್ ನಿಂದ ಇಳದು ಕೆಳಗ ಕರಕೊಂಡ ಬಂದು, ಎಲ್ಲಾ ಮುಗಸ್ಕೊಂಡ ಅದೇ ನೀರಾಗ ಕುಂಡಿ ತೊಳದಳು. ಬಸ್ಸಿನ ಕೆಳಗ ಏಡಿ, ಚೇಳು ಓಡ್ಯಾಡಕತ್ತಿದ್ದವು. ಅಯ್ಯಾ…… ಇನ್ ನಿಂದ್ರದ ಬ್ಯಾಡ ನಡಿಪ ಅಂತ ಬಸ್‍ನ್ಯಾಗ ಹೋಗಿ ಕುಂತಳು. ಒಣಮಂಡಾಳ ಎಷ್ಟ್ ತಿನ್ನಂಗದಾರ? ಹೊಟ್ಟಿ ಹಿಡದ ಹೋಗ್ತಾದ. ಬೇಕಿದ್ದಷ್ಟು ತಗೊಂಡು ತಿನಕೋತ ಕುಂತ್ರು. ಬಸ್ ಏರಿಗೆ ನಿಂತಿದ್ದರಿಂದ ನಮಗೆ ಯಾವ ಅಪಾಯವೂ ಇರಲಿಲ್ಲ. ಆದರೆ ರಾತ್ರಿ ಪೂರಾ ಬಸ್ ಬಿಟ್ಟು ಕೆಳಗೆ ಇಳಿಯೋ ಹಾಗಿರಲಿಲ್ಲ. ಏಡಿ, ಚೇಳುಗಳು ಬಸ್ಸಿನಡಿಯಲ್ಲೇ ಸುಳಿದಾಡುತ್ತಿದ್ದವು.
ಕತ್ತಲಾಗುತ್ತ ಬಂತು. ಇನಾ ನೀರು ಕಡಿಮೆ ಆಗವಲ್ದ. ಬಸ್‍ನ ಲೈಟ್‍ನಲ್ಲೆ ಕುಂತವರೆಲ್ಲ ಅಲ್ಲಲ್ಲೆ ತೂಕಡಿಸಕತ್ತಿದ್ರು. ಮಂಡಾಳ ಮಾರ್ತಿದ್ದ ವ್ಯಾಪಾರಿಗೂ ಹೊಟ್ಟಿ ಹಸದಿತ್ತು. ಎಷ್ಟ್ ಮಂಡಾಳ ತಿನ್ನಂಗದಾನ? ಪ್ರಯಾಣಿಕರೆಲ್ಲರಿಗೂ ಹೊಟ್ಟೆ ಹಸದಿತ್ತು. ಎಲ್ರೂ ಮಂಡಾಳ ತಗೋರಿ. ರೊಕ್ಕಾ ಕೊಡಾಕ ಹೋಗಬ್ಯಾಡ್ರಿ. ಸಾಯೋ ಪರಿಸ್ಥಿತಿಲಿ ರೊಕ್ಕ ತಗೊಂಡ ಏನ್ ಮಾಡ್ಲಿ? ಹೆಣ್ಮಕ್ಕಳು, ಕೂಸು ಅದಾವ ತಿನ್ರಿ ಅಂದ. ಯಾರೂ ಮಂಡಾಳ ಮುಟ್ಟಲಿಲ್ಲ. ಊರ ಮುಟ್ಟಿದ್ರ ಸಾಕಪ ಅಂತ ಅವರವರ ಮನೆ ದೇವರನ್ ಬೇಡ್ಕೋತಿದ್ರು.
ನದಿಯ ಮಧ್ಯದಲ್ಲಿ ಕಂದೀಲೊಂದು ತೇಲಿ ಬರುತ್ತಿತ್ತು.!! ಎಲ್ಲರೂ ಕೆಳಗ ಇಳದು ಇದು ಎಲ್ಲಿಂದ ಬರಾಕತ್ತಾದ ಕಂದೀಲು. ಹೆಂಗ ತೇಲ್ತಾದ ಅಂತ ಒಬ್ರಿಗೊಬ್ಬರು ಮಾತಾಡಕತ್ತಿದ್ರು. ಸ್ವಲ್ಪ ಹತ್ರಕ್ ಬಂದಂತೆ ತೇಲುತ್ತ ನಾಲ್ಕಾರು ಜನ ಬರುತ್ತಿದ್ದದ್ದು ಕಂಡಿತು. ಒಂದು ಟ್ರ್ಯಾಕ್ಟರ್‍ನ ದೊಡ್ಡ ಟೈರ್‍ನ ಸಹಾಯದಿಂದ ಬಸ್ ಇರುವ ಕಡೆ ಈಜಿಕೊಂಡು ಬರುತ್ತಿದ್ದರು. ಯಾರಿವರು? ಇಲ್ಲಿಗೇಕೆ ಬರುತ್ತಿದ್ದಾರೆ? ಬಹುಶ: ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರಬಹುದೇ? ಹಾಗಿದ್ದರೆ ಕಂದೀಲನ್ನು ಏಕೆ ಹಿಡಿದು ಬರುತ್ತಿದ್ದರು ಎಂದು ಪ್ರಯಾಣಿಕರಲ್ಲಿ ಪ್ರಶ್ನೆಗಳೇಳುತ್ತಿದ್ದವು. ಅಷ್ಟರಲ್ಲಿ ಈಜುತ್ತ ಈಜುತ್ತ ನಾವಿದ್ದಲ್ಲಿಗೆ ಟೈರ್ ಹಿಡಿದುಕೊಂಡು 4 ಜನ ಬಂದರು. ನೀವ್ಯಾರು? ಇಷ್ಟೊತ್ತಲ್ಲಿ ನೀವ್ಯಾಕೆ ಬಂದಿದ್ದೀರಿ? ಇಂಥಾ ನೀರಾಗ ಬರಂಥದ್ದು ಏನಿತ್ತು? ಏನಾರ ಹೆಚ್ಚು ಕಡಿಮೆ ಆಗಿದ್ರ ಏನ್ ಕಥಿ? ಅಂತ ಪ್ರಯಾಣಿಕರೆಲ್ಲ ಪ್ರಶ್ನೆಗಳ ಸುರಿಮಳೆಗೈದರು.
ನಾವು ಮಿಣಜಗಿದವರು. ನೀವು ನಡಬರಕ ಸಿಗಿ ಬಿದ್ದಿದ್ದು ನೋಡಿ ನಿಮ್ ಸಲುವಾಗಿನೆ ನಾವು ಬಂದೀವಿ. ಹೆಣ್ಮಕ್ಕಳು ಅದಾರ ಕೂಸುಗಳು ಅದಾವ ಅದಕ್ಕೆ ಊಟ ತಂದೀವಿ ಅಂದಾಗ ಅಲ್ರಪ ನಾವು ಒಂದ ದಿನ ಉಪವಾಸ ಇದ್ದಿದ್ದರ ಏನಾಗ್ತಿತ್ತು? ನೀವು ಇಷ್ಟು ಹೈರಾಣ ಆಗಿ ಯಾಕ ಬರಾಕ ಹೋಗಿದ್ರಪ? ಅಪರಾತ್ರಿ ಇಷ್ಟ್ ಸೆಳವಿನ್ಯಾಗ ನಮ್ ಸಲುವಾಗಿ ನಿಮ್ಮ ಜೀವದ ಆಸೆ ಬಿಟ್ ಯಾಕ ಬಂದ್ರಿ? ಏನಾರ ಹೆಚ್ಚು ಕಡಿಮಿ ಆಗಿದ್ರ ನಿಮ್ ಸಂಸಾರಕ್ ಯಾರ ದಿಕ್ಕು ಅಂತ ಪ್ರಯಾಣಿಕರೊಬ್ಬರು ಪ್ರಶ್ನಿಸುತ್ತಲೇ ಇದ್ದರು.
ನೋಡ್ರಿ ನಮಗ ಈ ಡೋಣಿ ನದಿ ಹೊಸದ ಅಲ್ಲ. ಮಳೆ ಬಂದಾಗೆಲ್ಲ ನೆರೆ ಬಂದು ಜನ ಹೈರಾಣಾಗಿದ್ದ ನಾವು ನೋಡ್ಕೋತ ಬಂದೀವಿ. ಮೊದಲೆಲ್ಲ ಬಸ್ , ಲಾರಿಗಳು, ಊರ ಹತ್ರ ದಂಡಿಗಿ ನಿಂತ ಬಿಡ್ತಿದ್ವು. ನೀವು ನದಿ ದಾಟಕ ಹೋಗಿ ನಡಬರಕ ಸಿಗಿ ಬಿದ್ದೀರಿ. ಹಿಂದುಗಡೆನೂ ನೀರು ಅದಾವ, ಮುಂದಗಡೆನೂ ನೀರು ಅದಾವ. ಅದ್ರಾಗ ನೀರು ಹೆಣ್ಮಕ್ಳು, ಮಕ್ಳು ಮರಿ ಅದಾವಂತ ಸುದ್ದಿ ಬಂತು. ನಮ್ ಊರಾಗ ಕುಬುಸದ ಕಾರಣ ಇತ್ತು. ಕರಿಗಡಬ, ಚಪಾತಿ, ಅನ್ನ ಭಾಳ ಉಳದಿತ್ತು. ಮಳಿ ಬಂದಿದ್ದಕ್ ಕಾರಣದ ಮನಿಗಿ ಜನ ಕಡಿಮಿ ಬಂದಿತ್ತು. ಹಿಂಗಾಗಿ ಊರಾನ ಮಂದಿ ನಮ್ಮ ಕಳಿಸ್ಯಾರ್ರಿ. ನಮಗ ಈಜು ಬರ್ತಾದ, ಒಬ್ರಿಗೊಬ್ರು ಹಗ್ಗ ಕಟಗೊಂಡಿವಿ. ಟೈರ್ ಹಿಡದಿದ್ರಿಂದ ಏನೂ ಅಂಜಿಕಿ ಇರಲಿಲ್ಲ. ಎಲ್ಲಾ ಊಟ ಮಾಡ್ರಿ ಅಂತ ಟೈರ್ ಒಳಗೆ ಪ್ಲ್ಯಾಸ್ಟಿಕ್‍ನಲ್ಲಿ ತುಂಬಿಕೊಂಡು ತಂದಿದ್ದ ಕರಿಗಡಬು, ಚಪಾತಿ, ಖಡಕ್ ರೊಟ್ಟಿ, ಗಟ್ಟಿಬ್ಯಾಳಿ, ಅಗಸಿ ಖಾರ ತೆಗೆದು ಎಲ್ರಿಗೂ ಊಟಕ್ ಕೊಟ್ರು. ಎಲ್ಲರೂ ಊಟ ಮಾಡಿದ್ರು. ರಾತ್ರಿ 3 ಗಂಟೆ ಹೊತ್ತಿಗೆ ಹಿನ್ನೀರು ಖಾಲಿ ಆಗಕತ್ತಿತು. ವಾಪಸ್ ಬಸ್ ತಿರುಗಿಸಿ ಮಿಣಜಗಿ ಹೋಗಿ ಅಲ್ಲಿನ ಜನ ರಾತ್ರಿನೂ ಎದ್ದು ಕುಂತಿದ್ರು. ಎಲ್ಲರಿಗೂ ಕೈ ಮುಗದು ನಮಸ್ಕಾರ ಮಾಡಿ ಮುದ್ದೇಬಿಹಾಳ ಹೋದ್ರು. ಅಲ್ಲಿ ಶಾರದಾಳ ಸೋದರಮಾವನ ಮನೆಯಿತ್ತು. ಸೀತಾರಾಮುನ ಚಿಕ್ಕಮಾವನ ಮನೆ ಅದು. ಬೆಳಿಗ್ಗೆ 4ಗಂಟೆ ಹೊತ್ತಿಗೆ ಮನೆಗೆ ಹೋಗಿ ಬಾಗಿಲು ತೆಗೆದ ಮಾವ ಏನಿದು ಇಷ್ಟೊತ್ತನಲ್ಲಿ ಎಲ್ಲಿಗಿ ಹೋಗಿದ್ರಿ, ಮಳಿ-ಮಾಡ ದಿನದಾಗ ಯಾವ ಕಡೆ ಹೊಂಟಿದ್ರಿ ಅಂತ ನಿಂತಲ್ಲೇ ಪ್ರಶ್ನೆ ಹಾಕೊಕ ಶುರು ಮಾಡಿದ.
ಯೋ……ಮಾವ ನಮಗ ಮಿಕ್ಯಾದ ಪುರಾಣ ಕೇಳಬ್ಯಾಡ. ಬೆಳಕ ಹರದ ಮ್ಯಾಗ ಹೇಳ್ತೀವಿ. ಮೊದಲು ನೆಲ ತೋರಸು ಒಂದಿಷ್ಟು ನಿದ್ದಿ ಮಾಡ್ತೀವಿ ಅಂದ ಸೀತಾರಾಮು. ಆಯ್ತು ಮೊದಲು ಮಕ್ಕೊಳ್ರಿ ಮುಂಜಾನಿ ಮಾತಾಡಮ್ ಅಂತ ಹಾಸಿಗಿ ಕೊಡೊಕ್ ಬಂದಾ. ಬ್ಯಾಡ ಮಾವ ನೆಲ ಸಿಕ್ರ ಸಾಕ್ಯಾಗ್ಯಾದ ಬಿಟ್ ಬಿಡು ನಮ್ಮನ್ ಅಂತ ಧೊಪ್ಪನೆ ನೆಲಕ್ ಬಿದ್ರು. ಬೆಳಿಗ್ಗೆ ಎದ್ದು ಪುರಾಣ ಕೇಳಿ ಹಣಿ ಹಣಿ ಬಡಕೊಂಡ ಮಾವ. ಅಲ್ಲವಾ ತಾಳಿಕೋಟಿ ಹೋಗ ಬದ್ಲಿ ಸೀದಾ ಮುದ್ದೇಬಿಹಾಳ ಬಂದು ಮುಂಜಾನೆ ನಾರಾಯಣಪುರದಿಂದ ಹುಣಸಗಿಗೆ ಹೋಗದ ಬಿಟ್ ನಡಬರಕ ಸಿಗಿಬಿದ್ ನೀವು ಹೈರಾಣ ಆಗಿ ಆ ಕೂಸಿನ್‍ನು ಹೈರಾಣ ಮಾಡಿರಿ. ಆಯ್ತು ನಾಷ್ಟಾ ಮಾಡ್ರಿ ಹೈದ್ರಾಬಾದ್ ಬಸ್ ಅದಾ ನಾರಾಯಣಪುರ ಮ್ಯಾಗ ಹುಣಸಗಿ ಹೋಗ್ತಾನ ಹೋಗಿಬಿಡ್ರಿ ಅಂತ ಅಂದು ತಾನೇ ಬಸ್ ಸ್ಟ್ಯಾಂಡ್‍ತನ ಬಂದು ಬಸ್ ಹತ್ತಿಸಿ ಹೋದ. ನಾವು ಮುಂಜಾನೆ 8.30 ಕ್ ಹುಣಸಗಿ ಬಂದಾಗ ಹೋದ ಜೀವ ಬಂದಂಗಾಗಿತ್ತು.


-ಪಾಟೀಲ ಬಸನಗೌಡ. ಹುಣಸಗಿ
 9900771427

Related Articles

Leave a Reply

Your email address will not be published. Required fields are marked *

Back to top button