ಕಥೆ

ಆಕಾಶಕ್ಕೆ ಕೈ ಹಾಕುವ ಮುನ್ನ..! ಸರಳ ಕಥೆ ಅದ್ಭುತ ಸಂದೇಶ ಇದನ್ನೋದಿ

ದಿನಕ್ಕೊಂದು ಕಥೆ

ಬದುಕಿನಲ್ಲಿ ಬೇಟೆ

ಇದು ನನಗೆ ಅತ್ಯಂತ ಪ್ರಿಯವಾದ ಕಥೆ. ಇದರ ಅರ್ಥ ತಿಳಿದಷ್ಟೂ ವಿಸ್ತರಿಸುತ್ತ ಹೋಗುತ್ತದೆ. ವಿಸ್ತರಿಸು­ವುದು ನಮ್ಮ ಮಿತಿ.
ಹಿಂದೆ ಚೀನಾದಲ್ಲಿ ಒಬ್ಬ ತರುಣ ರಾಜನಾದ. ಅವನು ಆಡಳಿತಕ್ಕೆ ಬೇಕಾದ ಜ್ಞಾನವನ್ನು ಪಡೆಯುತ್ತಿದ್ದ. ಬೇಟೆಯಲ್ಲೂ ತಾನೂ ನಿಷ್ಣಾತನಾಗ­ಬೇಕೆಂಬುದು ಅವನ ಆಸೆ.

ಅದಕ್ಕೆಂದೇ ಪರಿಣತನಾದ ಬೇಟೆಗಾರನಿಂದ ತರಬೇತಿ ಪಡೆದ. ತಿಂಗಳುಗಳ ತರಬೇತಿಯ ನಂತರ ಬೇಟೆಗೆಂದು ಪರಿವಾರದೊಡನೆ ಕಾಡಿಗೆ ನಡೆದ. ಅವನಿಗೋಸ್ಕರ ಒಂದು ಪುಟ್ಟ ಬಯಲಿನಲ್ಲಿ ಮರದ ಅಟ್ಟಣಿಗೆ ಕಟ್ಟಿದ್ದರು. ಆತ ಅದರ ಮೇಲೆ ತನ್ನ ಬಿಲ್ಲು ಬಾಣಗಳೊಂದಿಗೆ ಸಜ್ಜಾಗಿ ನಿಂತ.

ಇವನ ಪರಿವಾರ­ದವರು ಸುತ್ತಲಿನ ಕಾಡಿನಲ್ಲಿ ಹರಡಿ ಗದ್ದಲವನ್ನೆಬ್ಬಿಸಿದರು. ಆಗ ಗಾಬರಿಯಾಗಿ ಬಯಲಿಗೆ ನುಗ್ಗಿದ ಪ್ರಾಣಿಗಳನ್ನು ರಾಜ ಹೊಡೆಯಲಿ ಎಂಬುದು ಯೋಜನೆ. ಇದರಂತೆ ಕೆಲವು ಕ್ಷಣಗಳ ನಂತರ ತಮಟೆ, ಕಹಳೆಗಳ ಶಬ್ದ ಮತ್ತು ಜನರ ಕೂಗುವಿಕೆ ಕೇಳಿಸಿತು.

ಮರುಕ್ಷಣವೇ ಒಂದು ಪುಟ್ಟ ಮೊಲ ಕುಪ್ಪಳಿಸುತ್ತ ಈತನ ಮುಂದೆಯೇ ನಿಂತಿತು. ಈತನನ್ನು ಕಂಡು ಗಾಬರಿ­ಯಾದ ಮೊಲ ಮರಗಟ್ಟಿ ನಿಂತೇ ಬಿಟ್ಟಿತು. ರಾಜ ಬಿಲ್ಲಿಗೆ ಬಾಣ ಹೂಡಿದ. ಹೀಗೆ ಎದುರಿಗೇ ನಿಂತ ಮೊಲವನ್ನು ಹೊಡೆಯುವುದು ಯಾರಿಗಾದರೂ ಸುಲಭ.

ಇನ್ನೇನು ಬಾಣ ಬಿಡಬೇಕೆನ್ನು­ವಷ್ಟರಲ್ಲಿ ಒಂದು ತೋಳ ಅಲ್ಲಿಗೆ ಓಡಿ ಬಂದಿತು. ರಾಜ ಎಂದುಕೊಂಡ, ಈ ಮೊಲವನ್ನು ಹೊಡೆಯುವುದು ಎಂಥ ಬೇಟೆ? ತೋಳವನ್ನು ಹೊಡೆದರೆ ಅದರ ಚರ್ಮಕ್ಕೆ ಬೇಕಾದಷ್ಟು ಬೆಲೆ ಇದೆ, ಅದನ್ನೇ ಹೊಡೆಯುತ್ತೇವೆ ಎಂದು ಗುರಿ ಬದಲಿಸಿದ.

ಅಷ್ಟರಲ್ಲಿ ಒಂದು ಕಪ್ಪು ಜಿಂಕೆ ಹಾರಿ ಬಂದಿತು. ಅದೇನು ಅದರ ರೂಪ, ಚೆಂದ! ದಟ್ಟ ಕಪ್ಪು ಮೈಮೇಲೆ ಬಂಗಾರದ ಚುಕ್ಕೆಗಳು! ಇಷ್ಟು ಅಂದದ ಜಿಂಕೆಯನ್ನು ಹೊಡೆಯಲೇ ಬೇಕು, ಅದರ ಚರ್ಮವನ್ನು ತನ್ನ ಸಿಂಹಾಸನದ ಮೇಲೆ ಹಾಕಿಕೊಳ್ಳಬೇಕೆಂದು ತೀರ್ಮಾ­ನಿಸಿ ಬಿಲ್ಲನ್ನು ಆ ದಿಕ್ಕಿಗೆ ಹೊರಳಿಸಿದ.

ಆಗ ತಲೆಯ ಮೇಲೆ ಶಿಳ್ಳೆ ಹೊಡೆದಂತೆ ಸದ್ದಾಯಿತು. ತಲೆ ಎತ್ತಿ ನೋಡಿದರೆ ಒಂದು ಭಾರಿ ಗರುಡ ಹಾರುತ್ತಿದೆ! ಹೊಡೆದರೆ ಗರುಡವನ್ನು ಹೊಡೆಯ­ಬೇಕು ಎಂದುಕೊಂಡ ರಾಜ. ಮೊದಲ ಬೇಟೆಯಲ್ಲೇ ಆಕಾಶದಲ್ಲಿ ಹಾರಾಡುವ ಗರುಡ­ವನ್ನು ಹೊಡೆದರೆ ತನ್ನ ಕೀರ್ತಿ ಹರಡುತ್ತದೆ, ತನ್ನ ಗುರಿಕಾರಿಕೆ ಮನೆ­ಮನೆಯ ಮಾತಾಗುತ್ತದೆ. ಹೀಗೆಂದುಕೊಂಡು ಬಾಣ ಬಿಡುವಷ್ಟರಲ್ಲಿ ಗರುಡ ಸರ್ರೆಂದು ಮೇಲೆ ಹಾರಿ ಹೋಯಿತು.

ಛೆ, ತಪ್ಪಿಸಿಕೊಂಡಿತಲ್ಲ ಎಂದು ಮರಳಿ ಜಿಂಕೆಯತ್ತ ನೋಡಿದರೆ ಅದೆಲ್ಲಿದೆ? ಹಾರಿ ಮಾಯವಾಗಿತ್ತು ಜಿಂಕೆ. ಆಯ್ತು, ತೋಳವನ್ನಾದರೂ ಹೊಡೆಯುತ್ತೇನೆ ಎಂದು ತಿರುಗಿದರೆ ತೋಳವೂ ಇಲ್ಲ! ಕೊನೆಗೆ ಉಳಿದಿದ್ದು ಮೊಲ ಮಾತ್ರ. ಅದೂ ಕೂಡ ಇವನಿಗೋಸ್ಕರ ಕಾಯ್ದುಕೊಂಡು ಕುಳಿತಿರುತ್ತದೆಯೇ? ಎಲ್ಲೋ ಮರೆಯಾಗಿತ್ತು.

ರಾಜನಿಗೆ ಅಸಾಧ್ಯ ಕೋಪ ಬಂತು. ಒಂದು ಪ್ರಾಣಿಯೂ ಅವನ ಗುರಿಗೆ ಸಿಕ್ಕಲಿಲ್ಲ. ರಾಜ ಪರಿವಾರದವರನ್ನೆಲ್ಲ ಕರೆದು ಚೆನ್ನಾಗಿ ಬೈದ. ಅವರ ನಿರ್ಲ­ಕ್ಷ್ಯ­­­ದಿಂದಲೇ ಬೇಟೆಯ ಅವಕಾಶ ತಪ್ಪಿ ಹೋಯಿತೆಂದು ದೂರಿದ. ತನ್ನ ಮೊದ­ಲನೆಯ ಬೇಟೆಯ ಕಾರ್ಯಕ್ರಮ ವಿಫಲವಾದದ್ದು ಇಂತಹ ಬೇಜವಾ­ಬ್ದಾರಿ ಜನರಿಂದ ಎಂದು ದೂಷಿಸಿದ. ಎಲ್ಲರೂ ಅರಮನೆಗೆ ಮರಳಿದರು.

ಮೇಲ್ನೋಟಕ್ಕೆ ಇದೊಂದು ತುಂಬ ಸರಳವಾದ ಕಥೆ. ನಾವೂ ರಾಜನ ಹಾಗೆಯೇ ಜೀವನದ ಪ್ರತಿಕ್ಷಣ ಅವಕಾಶಗಳ ಬೇಟೆಯಾಡುತ್ತೇವೆ, ಯಶಸ್ಸು ಸಿಗದಿದ್ದರೆ ಜೊತೆಯವರನ್ನು ನಿಂದಿಸುತ್ತೇವೆ. ಕಥೆಯಲ್ಲಿಯ ಕಾಡು ನಮ್ಮ ಪ್ರಾಪಂಚಿಕ ಜಗತ್ತು. ನಾವು ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ರಾಜ ಬೇಟೆಗೆ ಹೋದ ಹಾಗೆ. ರಾಜನ ಪರಿವಾರದಂತೆ ನಮ್ಮ ಮನೆಯವರು, ಜೊತೆಗೆ ಕೆಲಸ ಮಾಡು­ವವರು, ಸ್ನೇಹಿತರು ನಮ್ಮೊಡ­ನಿರು­ತ್ತಾರೆ, ಸಹಕಾರ ನೀಡುತ್ತಾರೆ. ರಾಜನಿಗೆ ಮೊದಲು ದೊರೆತಿದ್ದು ಮೊಲ. ಅದು ಅವನಿಗೆ ಅತ್ಯಂತ ಸುಲಭದ ತುತ್ತಾಗಿತ್ತು.

ನಮಗೂ ಕೆಲವು ಬಾರಿ ಸುಲಭವಾದ ಸಾಧಿಸಬಹು­ದಾದ ಗುರಿಗಳು ದೊರೆ­ಯುತ್ತವೆ. ರಾಜ ಅದನ್ನೇ ಗುರಿಯಾ­ಗಿಟ್ಟಿದ್ದರೆ ಬೇಟೆ ಸ್ವಲ್ಪ ಮಟ್ಟಿಗಾದರೂ ಯಶಸ್ಸಾಗುತ್ತಿತ್ತು.

ಆದರೆ, ತೋಳ ಬಂದೊಡನೆ ಅವನ ಮನಸ್ಸು ಬದಲಾ­ಯಿತು. ಈಗ ಬರೀ ಬೇಟೆಗಿಂತ ತೋಳದ ಚರ್ಮದ ಬೆಲೆ ಗಮನಕ್ಕೆ ಬಂತು. ನಾವೂ ಹಾಗೆಯೇ ಹಣದಾಸೆ ತೂರಿಬಂದಾಗ ಮನಸ್ಸು ವಿಚಲಿತವಾಗಿ ಆ ಕಡೆಗೆ ಹರಿಯುತ್ತದೆ. ನಂತರ ಬಂದದ್ದು ಸುಂದರವಾದ ಜಿಂಕೆ. ಅದರ ಬಾಹ್ಯ ಸೌಂದರ್ಯ ಹಣದಾಸೆಯನ್ನು ಮರೆಸಿತು. ಸೌಂದರ್ಯದ ಸೆಳೆತ ದಿಕ್ಕು ತಿರುಗಿಸಿತು. ಕೊನೆಗೆ ಬಂದದ್ದು ಗರುಡ. ಈಗ ರಾಜನ ಮನಸ್ಸನ್ನು ತಿರುಗಿಸಿದ್ದು, ಹಣವಲ್ಲ, ಸೌಂದರ್ಯವಲ್ಲ, ಖ್ಯಾತಿಯ, ಮನ್ನಣೆಯ ದಾಹ.

ಅವನಿಗೀಗ ಜನರ ಮನ್ನಣೆ, ಮೆಚ್ಚುಗೆ ಮುಖ್ಯವೆನ್ನಿಸಿತು. ಮನುಷ್ಯನ ಒಳಗೆ ಅಭದ್ರತೆ ಹೆಚ್ಚಿದಷ್ಟೂ ಹೊರಗಿನ ಮನ್ನಣೆಗೆ ಬಾಯಿ ಬಿಡು­ತ್ತಾನೆ. ಇದೊಂದು ರೋಗ. ರಾಜ ಎಲ್ಲವನ್ನೂ ಪಡೆಯಲು ಹೋಗಿ ಎಲ್ಲವನ್ನೂ ಕಳೆದುಕೊಂಡ.
ನಮಗೆ ಈ ಕಥೆಯ ಸಂದೇಶ ದೊಡ್ಡದು.

ನಾವು ಹಣ, ಸೌಂದರ್ಯ ಮತ್ತು ಮನ್ನಣೆ­ ಬೆನ್ನಟ್ಟುತ್ತ ಹೋದರೆ ಯಾವುದೂ ದಕ್ಕದೇ ಮರಳಿ ಬರುತ್ತೇವೆ. ಆಗ ಜೊತೆಗೆ ಇದ್ದವರನ್ನು, ಸಮಾಜವನ್ನು, ಸರಕಾರವನ್ನು ದೂಷಿಸುತ್ತೇವೆ. ಹಾಗಾ­ದರೆ ಜೀವನದಲ್ಲಿ ಯಾವುದಕ್ಕೂ ಪ್ರಯತ್ನಿಸ­ಲೇಬಾರದೇ? ಹಾಗಲ್ಲ, ಮೊದಲು ಸಣ್ಣ ಗುರಿಗಳನ್ನು ಸಾಧಿಸಿ ನಂತರ ದೊಡ್ಡ ಗುರಿಯೆಡೆಗೆ ಪ್ರಯತ್ನಿ­ಸೋಣ. ಆಕಾಶಕ್ಕೆ ಕೈ ಹಾಕುವ ಮುನ್ನ ಅಟ್ಟ ಹತ್ತೋಣ. ಎರಡನೆಯದಾಗಿ ಒಂದು ಬಾರಿ ಒಂದಕ್ಕೇ ಗುರಿ ಇರಲಿ.

ಕ್ಷಣಕ್ಷಣಕ್ಕೂ ಬದಲಾಗುವ ಗುರಿ ಯಾವುದನ್ನೂ ಹೊಡೆಯಲಾರದು. ಅನ್ನ, ಚಿನ್ನ, ಸೌಂದರ್ಯದ ಮೋಹ, ಮನ್ನಣೆಯ ದಾಹ ಈ ಹಂತಗಳನ್ನು ಗುರುತಿಸುತ್ತ, ನಮ್ಮ ಶಕ್ತಿಯ ಮಿತಿಗಳನ್ನರಿತು ಬೇಟೆಯಾಡಿದರೆ ನಮ್ಮ ಬದುಕಿನಲ್ಲಿಯ ಬೇಟೆ ಯಶಸ್ವಿ ಆಗುವು­ದರೊಂದಿಗೆ ಸಂತೋಷದಾಯಕವೂ ಆಗುತ್ತದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button