ವಕೀಲ ವೃತ್ತಿ ಪಾವಿತ್ರತೆಗೆ ಧಕ್ಕೆ ಬಾರದಂತೆ ನಡೆಯಿರಿ- ನ್ಯಾ.ಭಾಮಿನಿ
ಶಹಾಪುರದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ
yadgiri, ಶಹಾಪುರ: ಹಿರಿಯ ವಕೀಲರ ಆದರ್ಶ ಮೌಲ್ಯಗಳನ್ನು ಯುವ ವಕೀಲರು ಗೌರವಿಸುವುದರ ಜೊತೆಗೆ ಸೂಕ್ತ ಮಾರ್ಗದರ್ಶನದಲ್ಲಿ ನಡೆಯಬೇಕು. ವಕೀಲ ವೃತ್ತಿಯು ಪವಿತ್ರವಾಗಿದ್ದು, ಅದರ ಪಾವಿತ್ರತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶೆ ಭಾಮಿನಿ ತಿಳಿಸಿದರು.
ಇಲ್ಲಿನ ವಕೀಲರ ಸಂಘ ಶುಕ್ರವಾರ ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 50 ವರ್ಷ ವಕೀಲ ವೃತ್ತಿ ಸೇವೆಯನ್ನು ಪೂರೈಯಿಸಿದ ಹಿರಿಯ ನ್ಯಾಯವಾದಿಗಳಾದ ಭಾಸ್ಕರರಾವ್ ಮುಡಬೂಳ ಹಾಗೂ ಶ್ರೀನಿವಾಸರಾವ ಕುಲಕರ್ಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯುವ ವಕೀಲರು ವೃತ್ತಿ ಬಗ್ಗೆ ಅಪಾರ ಗೌರವ ಹೊಂದಿರಬೇಕು. ಹಿರಿಯ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಗ್ರಾಹಕರಿಗೆ ಸೂಕ್ತ ನ್ಯಾಯ ಒದಗಿಸುವ ಕೊಡುವಲ್ಲಿ ನಿರ್ಲಕ್ಷವಹಿಸದೆ ನಿರಂತರವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ವಕೀಲರಾದ ನಿಂಗಣ್ಣ ಚಿಂಚೋಡಿ ಮಾತನಾಡಿ, ಸಾರ್ಥಕ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗೌರವಿಸುವುದು ಮಾನವಂತರ ಸಮಾಜವಾಗಿದೆ. ವಕೀಲರು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಕೀಲ ವೃತ್ತಿಗೆ ನಿವೃತ್ತಿ ಇಲ್ಲ. ಅದೊಂದು ಸೇವೆಯಾಗಿದೆ. ಹಿರಿಯ ವಕೀಲರ ಪಾಂಡಿತ್ಯವನ್ನು ನೆರಳಿನ ಆಸರೆಯಂತೆ ಪಡೆದುಕೊಳ್ಳಬೇಕು ಎಂದರು.
ಗೌರವ ಸನ್ಮಾನ ಸ್ವೀಕರಿಸಿದ ಹಿರಿಯ ವಕೀಲರಾದ ಭಾಸ್ಕರರಾವ ಹಾಗೂ ಶ್ರೀನಿವಾಸರಾವ ಕುಲಕರ್ಣಿ ಮಾತನಾಡಿ, ವಕೀಲರು ಎಂದಿಗೂ ನಿರಾಶೆಯಾಗಬಾರದು. ವೈಯಕ್ತಿಯ ಜೀವನವನ್ನು ಬದಿಗಿಟ್ಟು ಇದೊಂದು ವೃತ್ತದಂತೆ ಕೆಲಸ ನಿರ್ವಹಿಸಬೇಕು. ನಿರಂತರ ಅಧ್ಯಯನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾವತ್ತು ವಕೀಲರು ನ್ಯಾಯಾಲಯದ ಕೋರ್ಟ್ ಕಲಾಪದಲ್ಲಿ ಸುಳ್ಳು ಹೇಳಬಾರದು. ನಿಜಾಂಶವನ್ನು ತಿಳಿಸಿ. ವೃತ್ತಿ ಘನತೆಯನ್ನು ಕಾಪಾಡಿಕೊಂಡು ಹೋಗಬೇಕು. ವಯಸ್ಸು ಹೆಚ್ಚಾದಂತೆ ಮನಸ್ಸು ಮಾಗಬೇಕು. ಒತ್ತಡದ ನಡುವೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪುರೆ ಕಾರ್ಯದರ್ಶಿ ಸಂದೀಪ ದೇಸಾಯಿ, ಯಾದಗಿರಿ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ನಾಡಕರ್, ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯಾರಾಣಿ, ವಿನಾಯಕ ಕೋಡ್ಲಾ ಹಾಗೂ ಹಿರಿಯ ವಕೀಲರಾದ ಎಸ್.ಶೇಖರ, ಚಂದ್ರಶೇಖರ ದೇಸಾಯಿ, ಆರ್.ಚೆನ್ನಬಸ್ಸು ವನದುರ್ಗ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಆರ್.ಎಂ.ಹೊನ್ನಾರಡ್ಡಿ, ಶಾಂತಗೌಡ ಪಾಟೀಲ್ ಹಾಲಬಾವಿ, ನಿಂಗಣ್ಣ ಸಗರ, ವಿಶ್ವನಾಥರಡ್ಡಿ ಸಾಹು, ಎಸ್.ಗೋಪಾಲ, ಯೂಸೂಫ್ ಸಿದ್ದಕಿ, ಟಿ.ನಾಗೇಂದ್ರ, ಮಲ್ಕಪ್ಪ ಪಾಟೀಲ್, ಮಲ್ಲಿಕಾರ್ಜುನ ಹಿರೇಮಠ, ಮಲ್ಲಪ್ಪ ಪೂಜಾರಿ, ರಮೇಶ ಸೇಡಂಕರ್, ವಿಶ್ವನಾಥರಡ್ಡಿ ಕೊಡಮನಹಳ್ಳಿ, ಹೇಮರಡ್ಡಿ ಕೊಂಗಂಡಿ, ಗುರುರಾಜ ದೇಶಪಾಂಡೆ, ಸಂತೋಷ ಸತ್ಯಂಪೇಟೆ, ಸಂತೋಷ ದೇಶಮುಖ, ಬಿ.ಎಂ.ರಾಂಪುರೆ, ಸತ್ಯಮ್ಮ ಹೊಸ್ಮನಿ, ಜಯಲಕ್ಷ್ಮಿ ಬಸರಡ್ಡಿ, ಆಯಿಷ್ ಪರ್ವಿನ್ ಜಮಖಂಡಿ, ಬಲ್ಕಿಷ್ ಫಾತಿಮಾ ಇದ್ದರು.