ಸಂಕಷ್ಟದ ಸ್ಥಿತಿಯಲ್ಲಿ ನೆರವು ನೀಡಿ ಕರ್ತವ್ಯಪರತೆ ತೋರಿ- VASANT SURPURKAR
ಕ್ವಾರಂಟೈನ್ ಕೇಂದ್ರದಲ್ಲಿ ಹಣ್ಣು, ಹಾಲು ವಿತರಣೆ
ಶಹಾಪುರ: ನಗರದ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಸ್ಥಾಪಿಸಿದ ಕ್ವಾರಂಟೈನ್ ಕೇಂದ್ರದಲ್ಲಿ ಶುಕ್ರವಾರ ದಿ.ಬಾಪುಗೌಡ ದರ್ಶನಾಪುರ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಎರಡು ಕ್ವಿಂಟಾಲ್ ಬಾಳೆ ಹಣ್ಣು ಮತ್ತು 30 ಲೀಟರ್ ಹಾಲನ್ನು ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಯಿಂದ ಆಗಮಿಸಿ ಕ್ವಾರಂಟೈನ್ ಆಗಿರುವ ಜನತೆಗೆ ವಿತರಿಸಲಾಯಿತು.
ಸಂದರ್ಭದಲ್ಲಿ ಮಾತನಾಡಿದ ದಿ.ಬಾಪುಗೌಡ ದರ್ಶನಾಪುರ ಅಭಿಮಾನಿ ಬಳಗದ ಮುಖಂಡ ವಸಂತ ಸುರಪುರಕರ್, ಲಾಕ್ ಡೌನ್ ಒಂದಿಷ್ಟು ಸಡಿಲಿಕೆಗೊಳಿಸಿರುವ ಹಿನ್ನೆಲೆ ಸ್ವಗ್ರಾಮ ಬಿಟ್ಟು ಸಾಕಷ್ಟು ಜನರು ಕೆಲಸಕ್ಕೆಂದು ಹೋದವರು ಮತ್ತು ಕೆಲವರು ಶಿಕ್ಷಣಕ್ಕಾಗಿ ತೆರಳಿದ್ದ ಕೆಲ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮರಳಿ ತಮ್ಮ ತಮ್ಮ ಸ್ವಗ್ರಾಮಕ್ಕೆ ತೆರಳಲು ಬಂದಿದ್ದಾರೆ.
ಈ ಸಂದರ್ಭ ಅವರ ಆರೊಗ್ಯ ಪರಿಕ್ಷಿಸಿ ಮುಂಜಾಗೃತವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾದ ನಿಯಮವಿದೆ. ಅದರಂತೆ ತಾಲೂಕಿಗೆ ಆಗಮಿಸಿದವರನ್ನು ಇಲ್ಲಿನ ಮೊರಾರ್ಜಿ ವಸತಿ ಶಾಲೆ, ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯ, ಬಿಸಿಎಂ ವಸತಿನಿಯಲದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿ ಕಳೆದ ನಾಲಕು ದಿನಗಳಿಂದ ವಾಸವಾಗಿದ್ದಾರೆ. ಸರ್ಕಾರ ಇವರಿಗೆ ಊಟದ ವ್ಯವಸ್ಥೆ ಮಾಡಿದೆ. ಆದಾಗ್ಯು ಸಣ್ಣ ಸಣ್ಣ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂದಾಜು 1200 ಜನ ಕ್ವಾರಂಟೈನ್ ನಲ್ಲಿದ್ದಾರೆ.
ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ಕೈಲಾದ ಸಹಾಯ ಸಹಕಾರ ಮಾಡುವದು ನಮ್ಮೆಲ್ಲರ ಕರ್ತವ್ಯ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ 14 ದಿನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದರು.
ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಎಸ್.ಪಿ.ಪಾಟೀಲ್, ದೋರನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಠಲ ರಾಠೋಡ ಇದ್ದರು.