ಪ್ರಮುಖ ಸುದ್ದಿ

ಯಾದಗಿರಿಯಲ್ಲಿ ಜನಮನ ಸೆಳೆದ ಹೂಗಳ SLEEPING ಬುದ್ಧ, ಮೇಳ ನೋಡಿ ಪ್ರಶಂಸೆ ವ್ಯಕ್ತಪಡಿಸಿದ ಖರ್ಗೆ

ಗಮನಸೆಳೆದ ಫಲಪುಷ್ಟ ಪ್ರದರ್ಶನ, ಸಿರಿಧಾನ್ಯ ಮೇಳ

ಯಾದಗಿರಿ: ಹೂಗಳಿಂದ ಅರಳಿದ ಶಹಾಪುರದ ಬುದ್ಧ, ತರಕಾರಿಗಳಿಂದ ಕೆತ್ತನೆ ಮಾಡಿದ ಕಲಾಕೃತಿಗಳು, ಆರೋಗ್ಯ ವೃದ್ಧಿಸುವ ನಾನಾ ಬಗೆಯ ಸಾವಯವ ಸಿರಿಧಾನ್ಯಗಳು.. ಇವು ನೋಡುಗರ ಗಮನ ಸೆಳೆಯುತ್ತಿವೆ.

ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಯಾದಗಿರಿ ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯಗಳ ಮೇಳದಲ್ಲಿ ಹಲವು ಬಗೆಯ ಆಕೃತಿಗಳನ್ನು ನೋಡಿ ಮನತಣಿಸಿಕೊಳ್ಳಬಹುದು.

ಶಹಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮಲಗಿರುವ ಬುದ್ಧನ ಪ್ರತಿರೂಪವನ್ನು ವಿವಿಧ ಹೂವುಗಳಿಂದ ಅರಳಿಸಲಾಗಿದೆ. ಜರ್‍ಬೇರಾ, ಚಂಡು ಹೂ, ಪೇಟುನಿಯಾ, ಸಾಲ್ವಯ, ಜೀನಿಯ, ಡ್ರೀಮ್ ಲ್ಯಾಂಡ್, ಡಾಲಿಯಾ, ಡಯಾಂತಸ್, ಗಜೆನೀಯ, ಟೊರೆನಿಯಮ್, ಕ್ರೈಸ್ತಂತಮ್, ಕಾರ್ನೆಶನಮ್, ಪೆಂಟಾಸ್, ಗುಲಾಬಿ ಇನ್ನಿತರ ಪುಷ್ಪಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇನ್ನು ವಿವಿಧ ತರಕಾರಿಗಳಿಂದ ಕಲಾಕೃತಿಗಳ ಕೆತ್ತನೆ ಮಾಡಲಾಗಿದೆ. ವಿವಿಧ ಹಣ್ಣುಗಳಾದ ಅಂಜೂರು, ಕಿವಿ ಹಣ್ಣು, ಸ್ಟ್ರಾಬೇರಿ, ಪೈನಾಪಲ್, ಚೆರ್ರಿ, ಬಾಳೆ, ಪಪ್ಪಾಯ, ಲಿಂಬೆ, ಗಜ ನಿಂಬೆ, ದಾಳಿಂಬೆ, ಮೊಸಂಬಿಗಳು ನೋಡುಗರ ಬಾಯಲ್ಲಿ ನೀರೂರಿಸಲಿವೆ.

ನಮ್ಮ ಯಾದಗಿರಿ ಜಿಲ್ಲೆಯಲ್ಲಿ ರೈತರು ಬೆಳೆದ ವಿವಿಧ ತರಕಾರಿಗಳಾದ ಟೊಮ್ಯಾಟೋ, ಬದನೆ, ಬೆಂಡೆ, ಚವಳೆ, ಹೀರೆಕಾಯಿ, ಸೌತೇಕಾಯಿ ಇನ್ನಿತರ ತರಕಾರಿಗಳಿಗೂ ಈ ಮೇಳದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅಷ್ಟೆಯಲ್ಲ, ಸಸ್ಯ ಸಂತೆಯಲ್ಲಿ ವಿವಿಧ ಹಣ್ಣಿನ ಬೆಳೆ, ಪ್ಲಾಂಟೇಶನ್ ಹಾಗೂ ಇತರೆ ಗಿಡಗಳನ್ನು ಇಲಾಖಾ ದರಗಳಲ್ಲಿ ಮಾರಾಟಕ್ಕೆ ಕೂಡ ಲಭ್ಯ ಇವೆ.

ಮೇಳಕ್ಕೆ ಹೋದ್ರೆ ಹನಿ ನೀರಾವರಿ, ಪಾಲಿಹೌಸ್, ಶೆಡ್ ನಟ್ ಹಾಗೂ ಆಧುನಿಕ ಯಂತ್ರೋಪಕರಣ ಪರಿಚಯವೂ ನಿಮಗೆ ಆಗಲಿದೆ. ಸಾವಯವ ಸಿರಿಧಾನ್ಯಗಳು ಕೂಡ ಮೇಳದ ಹೈಲೆಟ್. ಸಕ್ಕರೆ ಕಾಯಿಲೆ, ಮಧುಮೇಹ ಮುಂತಾದ ರೋಗಗಳಿಗೆ ರಾಮಬಾಣ ಹಾಗೂ ಗಟ್ಟಿ ಪದಾರ್ಥಗಳಾದ ರಾಗಿ, ನವಣೆ, ಸಜ್ಜೆ, ಹಾರಕ ಮುಂತಾದ ಸಿರಿಧಾನ್ಯಗಳ ಬಗ್ಗೆಯೂ ನಿಮಗೆ ಮಾಹಿತಿ ದೊರೆಯಲಿದೆ. ಇವೆಲ್ಲಾ ಔಷಧಿ ಮತ್ತು ರಸಗೊಬ್ಬರ ಬಳಸದೆ ಎರೆಹುಳು ಮತ್ತು ಕೊಟ್ಟಿಗೆ ಗೊಬ್ಬರಗಳ ಬಳಸಿ ಬೆಳೆದಿರುವ ಸಾವಯವ ಪದಾರ್ಥಗಳಾಗಿದ್ದು, ಇವುಗಳಿಂದ ಆರೋಗ್ಯ ವೃದ್ಧಿಸಲಿದೆ. ಈ ಮೇಳ ಶನಿವಾರ ಕೂಡ ನಡೆಯಲಿದ್ದು, ಯಾದಗಿರಿ ನಾಗರಿಕರು ಸದುಪಯೋಗ ಪಡೆಯಬಹುದು.

ಫಲಪುಷ್ಪ, ಸಿರಿಧಾನ್ಯ ಮೇಳ ವೀಕ್ಷಿಸಿದ ಖರ್ಗೆ

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್À ಎಂ. ಖರ್ಗೆ ಅವರು ಫಲಪುಷ್ಪ ಪ್ರದರ್ಶನ ಮತ್ತು ಸಿರಿಧ್ಯಾನ ಮೇಳವನ್ನು ಉದ್ಘಾಟಿಸಿ ನಂತರ ಒಂದು ಸುತ್ತು ಸಂಚರಿಸಿ ಎಲ್ಲವನ್ನು ವೀಕ್ಷಿಸಿ ಸಮರ್ಪಕ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಮೇಳವನ್ನು ಅಚುಕಟ್ಟಾಗಿ ಆಯೋಜಿಸಿದ್ದು ಎಲ್ಲರ ಗಮನಸೆಳೆಯುತ್ತಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಸಾವಯವ ಉತ್ಪನಗಳ ಪ್ರಾಂತೀಯ ಒಕ್ಕೂಟ (ಕಲಬುರಗಿ, ಬೀದರ, ಯಾದಗಿರಿ) 5 ರಿಂದ 6 ಲಕ್ಷ ರೂ. ವ್ಯವಾಹರ ನಡೆಸಿದೆ. ಜತೆಗೆ ವಿವಿಧ ಕಂಪನಿಗಳೊಂದಿಗೆ 10 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ, ಜಿಲ್ಲಾ ಪಂಚಾಯತ ಸದಸ್ಯ ಬಸನಗೌಡ ಯಡಿಯಾಪುರ, ಶಿವಲಿಂಗಪ್ಪ ಪುಟಗಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button