ಪ್ರತ್ಯೇಕ ಧರ್ಮ ಬದಲು ಸಮರ್ಪಕ ಸೌಲಭ್ಯ ಒದಗಿಸಿಃ ರಂಭಾಪುರಿ ಶ್ರೀ
ಪ್ರತ್ಯೇಕ ಧರ್ಮ ಬದಲು ಸಮರ್ಪಕ ಸೌಲಭ್ಯ ಒದಗಿಸಿ
ರಾಯಚೂರುಃ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ವ್ಯವಸ್ಥಿತ ವಾಗಿ ನಡೆಯುತ್ತಿದೆ. ಪ್ರತ್ಯೇಕ ಧರ್ಮ ಬದಲು ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ರಂಭಾಪುರಿ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಸಿದ್ದರಾಮಯ್ಯನವರಿಗೆ ನಿಜವಾದ ಕಳಕಳಿ ಇದ್ದರೆ ೨ಎ ಅಡಿ ವೀರಶೈವ ಲಿಂಗಾಯತ ಸಮಾಜವನ್ನು ಸೇರ್ಪಡಿಸಿ, ಅಲ್ಪ ಸಂಖ್ಯಾತರಿಗೆ ಸಿಗುವ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ನಾಳೆ ಶಿವಯೋಗಿ ಮಂದಿರದಲ್ಲಿ ನಡೆಯುವ ಸಮನ್ವಯ ಸಮಾವೇಶ ಯಾರ ವಿರುದ್ಧವೂ ಅಲ್ಲ ಯಾರ ಜೊತೆ ಸಂಘರ್ಷವು ಅಲ್ಲ, ಎಲ್ಲ ಮಠಾಧೀಶರಲ್ಲಿ ಸಮನ್ವಯ ಮೂಡಿಸುವ ಸಮಾವೇಶವಾಗಿದೆ ಎಂದು ಹೇಳಿದರು.
ಅಲ್ಲದೆ ಸಿದ್ಧಗಂಗಾ ಮತ್ತು ಸುತ್ತೂರು ಶ್ರೀಗಳು ಲಿಂಗಾಯತ ಧರ್ಮ ಸ್ಥಾಪನೆಗೆ ಬೆಂಬಲ ವ್ಯಕ್ತಡಿಸಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್.ಜಾಮದಾರ ಹೇಳಿಕೆ ನೀಡಿ ಸಮಾಜದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಂಚಪೀಠಗಳ ಪ್ರತಿನಿಧಿಗಳು ಸಿದ್ಧಗಂಗಾ ಹಾಗೂ ಸುತ್ತೂರು ಶ್ರೀಗಳನ್ನು ಭೇಟಿಯಾದಾಗ ತಾವು ಆ ರೀತಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ಧಗಂಗಾ ಶ್ರೀಗಳು ಈ ಹಿಂದೆ ವೀರಶೈವ ಲಿಂಗಾಯತ ಸಮಗ್ರತೆ ಕಾಪಾಡಿಕೊಂಡು ಬರಬೇಕು ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಜಾಮದಾರ, ಶ್ರೀಗಳ ಹೇಳಿಕೆಯನ್ನು ತಿರುಚಿ ಸಮಾಜದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.