ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಜೊತೆ ವಾಲ್ಮೀಕಿ ದೇಗುಲ ನಿರ್ಮಿಸಲಿ
ವಾಲ್ಮೀಕಿ ಸಮುದಾಯ ಸಂಘಟಿತವಾಗಲಿ-ಹಣಮಂತ್ರಾಯ
yadgiri, ಶಹಾಪುರ: ವಾಲ್ಮೀಕಿ ಸಮುದಾಯದ ಜನರು ಸಂಘಟಿತಗೊಳ್ಳಬೇಕಿದೆ. ಸಮುದಾಯದ ಬೆಳವಣಿಗೆಗೆ ಯುವ ಸಮೂಹದ ಶ್ರಮ ಅಗತ್ಯವಿದೆ. ವಾಲ್ಮೀಕಿ ಸಮಾಜದ ಜನ ಒಗ್ಗಟ್ಟಾಗಿ ಸಮಾಜ ಕಟ್ಟಿದ್ದಲ್ಲಿ ಉನ್ನತ ಮಟ್ಟಕ್ಕೆ ತಲುಪಲಿದೆ. ಮುಂದಿನ ಪೀಳಿಗೆಗೆ ಇದು ಅನುಕೂಲವಾಗಲಿದೆ ಎಂದು ತಾಲೂಕು ಪಂಚಾಯತಿ ಅಧ್ಯಕ್ಷ ಹಣಮಂತ್ರಾಯ ದೊರೆ ತಿಳಿಸಿದರು.
ನಗರದ ವೈಷ್ಣವಿ ಸಭಾಂಗಣದಲ್ಲಿ ರವಿವಾರ ತಾಲೂಕು ವಾಲ್ಮೀಕಿ ನಾಯಕ ಸಂಘದ ಸದಸ್ಯರ ಸಭೆ ಹಾಗೂ ನೂತನ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸಮಾಜದ ಜನರು ಅನ್ಯ ಸಮಾಜದವರ ಜೊತೆಗೆ ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ಅನವಶ್ಯಕವಾಗಿ ಸಂಘರ್ಷಕ್ಕೆ ಇಳಿಯಬಾರದು. ಸಮುದಾಯ ಏಳ್ಗೆಗೆ ಶಿಕ್ಷಣ ಬಹುಮುಖ್ಯವಾಗಿದೆ. ಮೊದಲು ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಶೈಕ್ಷಣಿವಾಗಿ ಸಮುದಾಯ ಬೆಳೆಯಲು ನೋಡಿಕೊಳ್ಳಬೇಕು. ಆಗ ನಮ್ಮ ಸಮುದಾಯ ಬೆಳೆಯಲು ಸಾಧ್ಯವಿದೆ. ಶೈಕ್ಷಣಿಕ ಅಭಿವೃದ್ಧಿಗೆ ಸಮುದಾಯದ ಯುವಕರು, ಹಿರಿಯರು ಒತ್ತು ನೀಡಬೇಕು. ಅಲ್ಲದೆ ಸರ್ಕಾರಿ ಸೌಲಭ್ಯವನ್ನು ಸಮರ್ಪಕವಾಗಿ ಪಡೆದುಕೊಳ್ಳುವ ಮೂಲಕ ಸಮುದಾಯ ಪ್ರಗತಿಯತ್ತ ಹೆಜ್ಜೆ ಹಾಕಬೇಕು ಎಂದರು.
ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ಮಾತನಾಡಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮೀಸಲಾತಿ ಶೇ 7.5 ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನದಾಸ ಅವರು ಸಲ್ಲಿಸಿದ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಬೇಕು.
ಸಂವಿಧಾನ ಬದ್ದವಾಗಿ ಸಿಗುವ ಹಕ್ಕನ್ನು ಸಮುದಾಯ ಕೇಳುತ್ತಲಿದೆ. ಅಲ್ಲದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜೊತೆಯಲ್ಲಿ ವಾಲ್ಮೀಕಿ ದೇಗುಲವನ್ನು ನಿರ್ಮಿಸಬೇಕು ವಾಲ್ಮೀಕಿ ಇರದಿದ್ದರೆ ರಾಮಾಯಣ ಇರುತ್ತಿರಲಿಲ್ಲ ಎಂಬುವುದು ಯಾರು ಮರೆಯುವಂತಿಲ್ಲ ಎಂದರು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಹಣಮಂತರಾಯ ಟೋಕಾಪುರ, ರಾಜಾ ಪಿಡ್ಡನಾಯಕ ಸುರಪುರ, ನಾಗಪ್ಪ ಕಾಶಿರಾಜ, ಹನುಮೇಗೌಡ ಮರಕಲ್, ಗೌಡಪ್ಪಗೌಡ ಆಲ್ದಾಳ, ಶೇಖರ ದೊರೆ ಕಕ್ಕಸಗೇರಾ, ರಾಘವೇಂದ್ರ ಯಕ್ಷಿಂತಿ, ವಾಲ್ಮೀಕಿ ನೌಕರ ಸಂಘದ ಅಧ್ಯಕ್ಷ ಮಹಾಂತೇಶ ದೊರೆ, ದುರ್ಗಪ್ಪ, ಮೈಲಾರಪ್ಪ ಇದ್ದರು.
ವಾಲ್ಮೀಕಿ ಯುವ ಘಟಕದ ಪದಾಧಿಕಾರಿಗಳ ನೇಮಕ
ಶಹಾಪುರ: ವಾಲ್ಮೀಕಿ ಸಂಘದ ಯುವ ಘಟಕದ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ನೇಮಿಸಲಾಯಿತು.
ಅಶೋಕ ನಾಯಕ ಯಕ್ಷಿಂತಿ (ಗೌರವ ಅಧ್ಯಕ್ಷ), ಮಹಾದೇವ ದೇಸಾಯಿ ಶಾರದಹಳ್ಳಿ( ಅಧ್ಯಕ್ಷ), ಶಿವರಾಜ ಹವಾಲ್ದಾರ ಮುಡಬೂಳ, ಮರೆಪ್ಪ ಮಕಾಶಿ ಸಗರ (ಉಪಾಧ್ಯಕ್ಷ), ಎಚ್.ಬಿ.ನಾಯಕ (ಪ್ರಧಾನ ಕಾರ್ಯದರ್ಶಿ), ನಾಗರಾಜ ಮೇಲಗಲಿ ಇಬ್ರಾಹಿಂಪೂರ, (ಸಹ ಕಾರ್ಯದರ್ಶಿ) ರಾಜು ದೊರೆ ಸಾವೂರ (ಸಂಘಟನಾ ಕಾರ್ಯದರ್ಶ್ಶಿ), ನಾಗರಾಜ ದೊರೆ ಹೊಸಕೇರಾ (ಖಜಾಂಚಿ), ಅಂಬರೇಶ ನಾಯಕ ಇಟಗಿ (ಕಾನೂನು ಸಲಹೆಗಾರ) ನೇಮಿಸಲಾಗಿದೆ ಎಂದು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ತಿಳಿಸಿದ್ದಾರೆ.