ಪ್ರಮುಖ ಸುದ್ದಿ

ಅಕ್ರಮ ಹತ್ತಿ ವ್ಯಾಪಾರ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಅಕ್ರಮ ಹತ್ತಿ ವ್ಯಾಪಾರಃ ನಾಲ್ಕು ಲಾರಿ ಹತ್ತಿ ವಶಕ್ಕೆ

ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ವಡಿಗೇರಾ ಗ್ರಾಮದಲ್ಲಿ ಎಪಿಎಂಸಿ ಪರವಾನಿಗೆಯಿಲ್ಲದೆ ಅಕ್ರಮವಾಗಿ ಹತ್ತಿ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ, ವಡಿಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಹತ್ತಿ ವಹಿವಾಟು ನಡೆಸುತ್ತಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹತ್ತಿ ತುಂಬಿದ್ದ ನಾಲ್ಕು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಭೀಮರಾಯ ತಿಳಿಸಿದ್ದಾರೆ.

ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿಮಿಲ್‍ಗಳಿದ್ದು, ಪ್ರತಿಯೊಬ್ಬ ರೈತರು ನಿಯಮಾನುಸಾರವಾಗಿ ಹತ್ತಿಯನ್ನು ಪರವಾನಿಗೆ ಪಡೆದುಕೊಂಡ ಮಿಲ್‍ಗಳಿಗೆ ಮಾರಾಟ ಮಾಡಬೇಕು. ಮಿಲ್‍ಗಳು ಪರವಾನಿಗೆ ಪಡೆದಿದ್ದು, ಯಾವುದೆ ಮೋಸ ವಂಚನೆ ಎಸಗಲು ಸಾಧ್ಯವಿಲ್ಲ. ಒಂದು ವೇಳೆ ರೈತರಿಗೆ ಮೋಸವೆಸಗಿದ್ದರೂ ಎಲ್ಲಿಗೂ ಪರಾರಿಯಾಗಲು ಅವರಿಂದ ಆಗದ ಮಾತು.

ಅಕ್ರಮವಾಗಿ ಹತ್ತಿ ಖರೀದಿದಾರರಿಗೆ ಹತ್ತಿ ಮಾರಾಟ ಮಾಡಿದ್ದಲ್ಲಿ, ತೂಕದಲ್ಲಿ ಮೋಸ ಸೇರಿದಂತೆ ಬಾಕಿ ದುಡ್ಡು ನೀಡದೆ ಪರಾರಿಯಾದ ಘಟನೆಗಳು ಸಾಕಷ್ಟು ಕಣ್ಮುಂದೆ ಇವೆ. ಅಲ್ಲದೆ ಅವರು ಯಾವುದೇ ರಸೀದಿ ಕೊಡುವುದಿಲ್ಲ ಎಂದು ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಿದ್ದರು. ಆದಾಗ್ಯು ಇಂತಹ ಘಟನೆಗಳು ನಡೆಯುತ್ತಿವೆ. ರೈತರು ಎಚ್ಚರವಹಿಸುವ ಅಗತ್ಯವಿದೆ.

ಪರವಾನಿಗೆ ಪಡೆದ ಹತ್ತಿ ಖರೀದಿದಾರರಿಗೆ ಮಾರಾಟ ಮಾಡಬೇಕು ಎಂದು ಸರ್ಕಾರದ ನಿರ್ದೇಶನವು ಇದ್ದರೂ ಎ.ಪಿ.ಎಂ.ಸಿ.ಯ ಪರವಾನಿಗೆ ಇಲ್ಲದೆ ಇರುವ ವ್ಯಾಪಾರಸ್ಥರ ಬಳಿ ರೈತರು ಹತ್ತಿ ವ್ಯಾಪಾರ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದ ರೈತರ ಶ್ರಮಕ್ಕೆ ಸೂಕ್ತ ಫಲ ಸಿಗುವುದಿಲ್ಲ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ.

ತಾಲೂಕಿನಲ್ಲಿ ರಸ್ತೆ ಬದಿ ಸಾಕಷ್ಟು ಸಂಖ್ಯೆಯಲ್ಲಿ ಅಕ್ರಮ ಹತ್ತಿ ಮಾರಾಟ ಕೇಂದ್ರಗಳು ಹುಟ್ಟಿಕೊಂಡಿದ್ದು, ರೈತರು ಎಚ್ಚರವಹಿಸಬೇಕಿದೆ ಎಂದು ತಿಳಿಸಿದರು.
ಅಲ್ಲದೆ ಇದುವರೆಗೆ 113 ಹತ್ತಿ ಲಾರಿಗಳನ್ನು ಜಪ್ತಿಮಾಡಿಕೊಂಡು 10 ಲಕ್ಷಕ್ಕಿಂತಲು ಹೆಚ್ಚಿನ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು. ನಿಗದಿಪಡಿಸಿದ ಹತ್ತಿ ಖರೀದಿ ಕೇಂದ್ರಗಳಲ್ಲಿ ಹತ್ತಿ ಮಾರಾಟ ಮಾಡುವಂತೆ ರೈತರಿಗೆ ಮನವಿ ಮಾಡಿದರು. ನಾಲ್ಕು ಲಾರಿಯಲ್ಲಿದ್ದ ಅಂದಾಜು ಹತ್ತಿ 225 ಕ್ವಿಂಟಲ್ ಆಗಿದ್ದು, ಇದರ ಮೌಲ್ಯ 12 ಲಕ್ಷ ರೂಪಾಯಿ ಅಂದಾಜಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಂಗನಾಥ ದೇಸಾಯಿ ವಿನಯವಾಣಿ ಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button