ಬುದ್ಧ ಮಲಗಿದ ದೃಶ್ಯ ಪ್ರದೇಶಾಭಿವೃದ್ಧಿಗೆ ಆಗ್ರಹ
ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಕಬಳಿಕೆ ತನಿಖೆಗೆ ಆಗ್ರಹ
ಶಹಾಪುರಃ ನಗರದ ಬೆಟ್ಟದ ಮೇಲಿರುವ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯ ತಾಣದ ಅಭಿವೃದ್ಧಿ ಕಾರ್ಯದಲ್ಲಿ ಪ್ರವಾಸೋಧ್ಯಮ ಇಲಾಖೆ ಗೋಲಮಾಲ್ ನಡೆಸಿದ್ದು, ಕೂಡಲೇ ಸೂಕ್ತ ತನಿಖೆಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ನಾಗರಿಕ ಹೋರಾಟ ಒಕ್ಕೂಟ ಸಮಿತಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಗುರು ಕಾಮಾ, ನಗರದ ಬೆಟ್ಟದಲ್ಲಿ ಕಾಣುವ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ತಾಣ ಅಭಿವೃದ್ಧಿಗೆ ಹಿಂದಿನ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಿ ಅಂದಾಜು 5 ಕೋಟಿ ಅನುದಾನ ಬೇಡಿಕೆ ಸಲ್ಲಿಸಿತ್ತು. ಬೇಡಿಕೆಯಂತೆ ಅಂದಿನ ಸರ್ಕಾರ 5 ಕೋಟಿ ಅನುದಾನ ಬಿಡುಗಡೆಗೊಳಿಸಲು ಅನುಮೋದನೆ ನೀಡಿತ್ತು ಎನ್ನಲಾಗಿದೆ. ಅದರಲ್ಲಿ 4.30 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆಗೊಂಡ ಹಣದಲ್ಲಿ ನಗರದ ಮಾವಿನ ಕೆರೆ ಅಭಿವೃದ್ಧಿ ಮಾಡುತ್ತೇವೆ ಎಂದು ಕೇವಲ ಕೆರೆ ಬದು ನಿರ್ಮಾಣ ಮಾಡಿ ಒಂದಿಷ್ಟು ವಾಕಿಂಗ್ ಫೂಟ್ ನಿರ್ಮಿಸಿ ಎರಡು ಬದಿ ಸಸಿಗಳನ್ನು ನೆಟ್ಟು, ನಂತರ ಅದು ಸಹ ಸಮರ್ಪಕ ನಿರ್ವಹಣೆ ಮಾಡದೆ ಸಂಪೂರ್ಣ ಹಾಳುಗೆಡುವಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಮುಖ್ಯವಾಗಿ ಬಿಡುಗಡೆಗೊಂಡ ಹಣ ಪೂರ್ಣ ಪ್ರಮಾಣ ಖರ್ಚು ಮಾಡದೇ ಕೇವಲ ಅದರಲ್ಲಿ 30 ಲಕ್ಷ ರೂ. ಮಾತ್ರ ಕೆರೆ ಬದು ನಿರ್ಮಾಣ, ಸಸಿಗಳನ್ನು ನಿರ್ಮಿಸಲು ಖರ್ಚು ಮಾಡಿದ್ದಾರೆ. ಇನ್ನುಳಿದ 4 ಕೋಟಿ ಹಣ ಎಲ್ಲಿಗೇ ಹೋಯಿತು ಎಂಬುದರ ಮಾಹಿತಿ ಪ್ರವಾಸೋಧ್ಯಮ ಇಲಾಖೆ ನೀಡಬೇಕಿದೆ. ಕ್ರಿಯಾಯೋಜನೆಯಂತೆ ಯಾವುದೆ ಕಾಮಗಾರಿ ಸ್ಥಳದಲ್ಲಿ ನಡೆದಿರುವದಿಲ್ಲ.
ಅಲ್ಪಸ್ವಲ್ಪ ಕಾಮಗಾರಿ ಮಾಡಿಕೈತೊಳೆದುಕೊಂಡಿರುವದು ಕಣ್ಣಿಗೆ ಕಾಣುತ್ತಿದೆ. ಹೀಗಾಗಿ ಬುದ್ಧ ಮಲಗಿದ ದೃಶ್ಯ ಅಭಿವೃದ್ಧಿಗೆ ಬಂದ ಹಣದ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನಾಗರಿಕರಿಗೆ ನೀಡಬೇಕು. ಕೂಡಲೇ ಅಭಿವೃದ್ಧಿ ಕಾಮಗಾರಿಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಜಗನಾಥರಡ್ಡಿ, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವದು. ಈ ಕುರಿತು ಕ್ರಮಕೈಗೊಳ್ಳಲು ಮಾಹಿತಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಯ್ಯದ್ ಬಾಬಾ ಪಟೇಲ್, ಸಯ್ಯದ್ ಶಮಸುದ್ದೀನ್ ಖಾದ್ರಿ, ಭೀಮರಾಯ ಹೊಸಮನಿ, ಶಿವರಾಜ ಜಂಗಳಿ, ಜಾವೀದ್ ಖಾನಾಪುರ, ಪವನ ಶಿರವಾಳ, ರಾಜು ಬಾಣತಿಹಾಳ, ರಾಜು ಮಡ್ನಾಳ, ಸ್ನೇಹ ಏಕಬೋಟೆ, ಮೌನೇಶ ನಾಟೇಕಾರ, ನಾಗಣ್ಣ ಬಡಿಗೇರ, ಶರಣು ಪಾಟೀಲ್, ಶಿವಪುತ್ರ ಜವಳಿ, ಇಫ್ತಿಯಾರ್, ಬಾಲರಾಜ ಖಾನಾಪುರ, ವಿಜಯ ಚಿಗರಿ, ಮರೆಪ್ಪ ದಿಗ್ಗಿ ಸೇರಿದಂತೆ ಇತರರಿದ್ದರು.