ಯಡಿಯೂರಪ್ಪ ಸಂಪುಟದಲ್ಲಿ ಶಾಸಕ ರೇಣುಕಾಚಾರ್ಯಗಿಲ್ಲ ಸ್ಥಾನ!?
ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವನಾಗುವ ಆಸೆ ನನಗಿಲ್ಲ ಎಂದು ಮಾಜಿ ಸಚಿವ, ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಹುಮತ ಗೆಲ್ಲುವುದು, ಅತೃಪ್ತ ಶಾಸಕರಿಗೆ ಮಂತ್ರಿ ಭಾಗ್ಯ ಕಲ್ಪಿಸುವುದು, ಪಕ್ಷದ ಸಚಿವಾಕಾಂಕ್ಷಿಗಳನ್ನು ಸಮಾಧಾನ ಪಡಿಸುವುದು ಸೇರಿದಂತೆ ಅನೇಕ ಸವಾಲುಗಳು ಯಡಿಯೂರಪ್ಪ ಅವರ ಮುಂದಿವೆ. ಈ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ನಾನು ಸಚಿವಾಕಾಂಕ್ಷಿ ಅಲ್ಲ ಎಂದಿರುವ ಹಿಂದಿನ ಮರ್ಮ ರಹಸ್ಯವೇನಲ್ಲ.
ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರೇ ಸಚಿವ ಸ್ಥಾನಕ್ಕಾಗಿ ಹಾತೊರೆಯದಿದ್ದಾಗ ಮಾತ್ರ ಈಸಲದ ಯಡಿಯೂರಪ್ಪ ಸರ್ಕಾರ ಸವಾಲುಗಳನ್ನು ಮೆಟ್ಟಿನಿಲ್ಲಬಹುದು ಎಂಬ ಸತ್ಯವನ್ನು ಪಕ್ಷದ ನಾಯಕರು ಶಾಸಕರಿಗೆ ಮನದಟ್ಟು ಮಾಡುವಲ್ಲಿ ಸಫಲರಾಗಿದ್ದಾರೆಂಬುದರ ಸಂದೇಶವಿದು. ಅಂತೆಯೇ ಇತರೆ ಶಾಸಕರಿಗೂ ಸಹ ಸಮಾಧಾನದ ಸಂದೇಶ ರವಾನಿಸುವ ತಂತ್ರವೂ ಅಡಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಈಬಾರಿ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.