ಬರಿ ಮಾತಿನಿಂದ ದೇಶದ ಪ್ರಗತಿ ಅಸಾಧ್ಯ -ಸತೀಶ ಜಾರಕಿಹೊಳೆ
ಶಹಾಪುರ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಯಾದಗಿರಿ, ಶಹಾಪುರಃ ದೇಶದಲ್ಲಿ ಬಡವರ ದುರ್ಬಲರ ಜೀವನಾಡಿಯಾಗಿ ಕೆಲಸ ಮಾಡುವದಾಗಿ ಹೇಳಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನಪರ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೊಳಿಸದೆ ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳೆ ಆರೋಪಿಸಿದರು.
ನಗರದ ವೈಷ್ಣವಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‍ನ ಧೀಮಂತ ನಾಯಕಿ ದಿ.ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ಮನಮೋಹನಸಿಂಗ್, ಪಿ.ವಿ.ನರಸಿಂಹರಾವ್ ಅವರು ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.
ಹಿಂದೆ ಕಾಂಗ್ರೆಸ್ ನಾಯಕರು ಜಾರಿಗೊಳಿಸಿದ ಯೋಜನೆಗಳು ಇಂದಿಗೂ ಅಜರಾಮರವಾಗಿ ಉಳಿದಿವೆ. ಜನರ ಬದುಕಿಗೆ ಆಸರೆಯಾಗಿ ನಿಂತಿವೆ. ಆದರೆ ಐದು ವರ್ಷದಲ್ಲಿ ಮೋದಿಯವರು ಬರಿ ಸುಳ್ಳು ಭರವಸೆಗಳನ್ನು ಕೊಟ್ಟು, ನೀಡಿದ ಯಾವೊಂದು ಭರವಸೆ ಈಡೇರಿಸದೆ ಭಾವನಾತ್ಮಕ ಮಾತುಗಳ ಮೂಲಕ ಅಪ್ಪಟ ದೇಶಭಕ್ತರೆಂಬಂತೆ ತೋರಿಕೊಳ್ಳುತಿದ್ದು, ಆ ಮೂಲಕ ಜನರ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ನೋಟ್ ಬ್ಯಾನ್, ಜಿಎಸ್‍ಟಿ ಯಂತಹ ಜನ ಸಾಮಾನ್ಯರಿಗೆ ಹೊರೆಯಾದ ನೀತಿ ನಿಯಮಗಳನ್ನು ಜಾರಿಗೆ ತಂದು ದೇಶವನ್ನು ನಿದ್ದೆಗೆಡಿಸಿದ್ದಾರೆ ಎಂದು ಆಕ್ರೋಶ ವಯಕ್ತಪಡಿಸಿದರು.
ನೋಟ್ ಬ್ಯಾನ್ ಮಾಡಿ ಗ್ರಾಮೀಣ ಭಾಗದ ಜನರು ನೋಟಿಗಾಗಿ ಪರದಾಡಿದ್ದಲ್ಲದೆ ಜೀವ ಕಳೆದುಕೊಳ್ಳಲು ಪ್ರಧಾನಿ ಮೋದಿಯವರು ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವದಾಗಿ ಹೇಳಿದ್ದ ಅವರು, ನಯಾಪೈಸಾನು ಹಾಕಲಿಲ್ಲ. ಹುಸಿ ಭರವಸೆಗಳ ಸರಮಾಲೆಯನ್ನು ಹೊತ್ತು ತಂದು ಮತಯಾಚನೆ ಮಾಡಲಿದ್ದಾರೆ.
ಮತದಾರರು ಈ ಬಾರಿ ಹುಸಿ ಭರವಸೆಗಳಿಗೆ ಮಾರು ಹೋಗಬೇಡಿ. ಬರಿ ಮಾತುಗಳಿಂದ ದೇಶದ ಪ್ರಗತಿ ಅಸಾಧ್ಯ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಅಲ್ಲಿಂದಲೂ ಇಂದಿಗೂ ದೇಶದ ಪ್ರಗತಿಗೆ ಶಕ್ತಿ ಮೀರಿ ಶ್ರಮಿಸಿದೆ. ಬಡವರ ದೀನ ದಲಿತರ ಉದ್ಧಾರಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿ ತಂದಿದೆ.
ಹೀಗಾಗಿ ದೇಶ ಉಳಿಯಬೇಕಾದಲ್ಲಿ ನಾಗರಿಕರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕೇಂದ್ರದಲ್ಲಿ ಆಡಳಿತ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೆ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರುವಾಗ ಅನುಷ್ಠನಾಗೊಳಿಸಿದ ಯೋಜನೆಗಳನ್ನು ಈಗಲೂ ಸಮ್ಮಿಶ್ರ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ. ರಾಜ್ಯದ ಜನ ಸಿದ್ಧರಾಮಯ್ಯನವರನ್ನು ಮರೆಯುವದಿಲ್ಲ. ಅಂತಹ ಯೋಜನೆಗಳು ಅವರು ರಾಜ್ಯಕ್ಕೆ ಅರ್ಪಣೆ ಮಾಡಿದ್ದಾರೆ ಎಂದರು.
ಮಾಜಿ ಮಂತ್ರಿ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ರಾಜ್ಯ ಸರ್ಕಾರದ ಪ್ರಗತಿ ಸಾಧನೆಗಳು ಸಿದ್ರಾಮಯ್ಯನವರ ಜನಪರ ಯೋಜನೆಗಳೇ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಿವೆ.
ಬೂತಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಬೇಕು. ಕಾರ್ಯಕರ್ತರು ಚುನಾವಣೆಯಲ್ಲಿ ಗೆಲುವು ಸಾಧಿಸುವವರೆಗೂ ವಿರಮಿಸದೆ ಶ್ರಮಿಸಬೇಕು. ರಾಯಚೂರ ಲೋಕಸಭೆ ಅಭ್ಯರ್ಥಿ ಬಿ.ವಿ.ನಾಯಕ ಅವರಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಸೇವೆ ಸಲ್ಲಿಸಲು ಅವರಿಗೆ ಅವಕಾಶ ಕಲ್ಪಿಸಬೇಕು ಎಂದರು.
ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಶೇಖ ಮುಸ್ತಾಫ ಸೇರಿದಂತೆ ತಾಪಂ ಅಧ್ಯಕ್ಷ ಬಸವಂತರಡ್ಡಿ ಸಾಹು, ಹಣಮೇಗೌಡ ಮರಕಲ್, ಬಸನಗೌಡ ಮರ್ಕಲ್, ಶರಣಗೌಡ ಗುಂಡಗುರ್ತಿ, ಸಿದ್ದಲಿಂಗಣ್ಣ ಆನೇಗುಂದಿ, ಮಲ್ಲಿಕಾರ್ಜುನ ಪೂಜಾರಿ, ಹಣಮಂತ್ರಾಯ ದೊರಿ, ಬಸವರಾಜ ಹಿರೇಮಠ, ಹೊನ್ನಪ್ಪಗೌಡ ಪಾಟೀಲ್, ಶಿವಮಹಾಂತ ಚಂದಾಪುರ, ಮಲ್ಲಪ್ಪ ಕಟ್ಟಿಮನಿ ಇತರರಿದ್ದರು.