ಧರ್ಮದ ಮೇಲೆ ರಾಜಕೀಯದ ಕರಾಳ ಛಾಯೆಃ ರಂಭಾಪುರಿಶ್ರೀ ವಿಷಾಧ
ಪಂಚಪೀಠಗಳು ನೀಡಿದ ಕೊಡುಗೆ ಅಪಾರಃ ರಂಭಾಪುರಿಶ್ರೀ
ಗದಗಃ ವೀರಶೈವ ಲಿಂಗಾಯತ ಒಂದೇ ಇವೆರಡು ಸಮಾಜದ ಎರಡು ಕಣ್ಣುಗಳು. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಸರ್ಕಾರ ಮಾಡಿರುವ ಸಮಿತಿಯನ್ನು ತಕ್ಷಣ ವಿಸರ್ಜಿಸಬೇಕು ಎಂದು ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದರು.
ನಗರದಲ್ಲಿ ಜರುಗಿದ ವೀರಶೈವ ಲಿಂಗಾಯತ ಜನಜಾಗೃತಿ ಧರ್ಮ ಸಮಾವೇಶದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪಂಚಪೀಠಾಧೀಶರು ಹಾಗೂ ವಿವಿಧ ಮಠಾಧೀಶರು ಒಕ್ಕೊರಲಿನಿಂದ ವೀರಶೈವ-ಲಿಂಗಾಯತ ಎರಡು ಒಂದೇ ಎಂದು ಬಹಿರಂಗವಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಸರ್ಕಾರ ಲಿಂಗಾಯತರ ಮನವಿ ಮೇರೆಗೆ ಮಾತ್ರ ಧರ್ಮ ಒಡೆದು ಅಲ್ಪಸಂಖ್ಯಾತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಪ್ರೋತ್ಸಾಹ ಹೊರಟಿರುವುದು ಸರಿಯಲ್ಲ.
ಕೂಡಲೇ ಅಲ್ಪಸಂಖ್ಯಾತ ಆಯೋಗದಿಂದ ನೇಮಿಸಲ್ಪಟ್ಟ ಸಮಿತಿಯನ್ನು ರದ್ದು ಪಡಿಸಬೇಕು ಆಗ್ರಹಿಸಿದರು. ಆದರೆ ವೀರಶೈವ-ಲಿಂಗಾಯತ ಸಮಾಜಕ್ಕೆ 2(ಎ) ಮಾನ್ಯತೆ ನೀಡುವ ಮೂಲಕ ಶೇ.15 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡಲಿ. ಧರ್ಮ ಜಾತಿಗಳನ್ನು ಒಡೆದು ಆಳುವ ನೀತಿ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
1975-76ರಲ್ಲಿ ಗದಗ ನಗರದಲ್ಲಿ ಜರುಗಿದ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವದ ನಂತರ ಇಂದು ಇಲ್ಲಿ ಜರುಗಿದ ವೀರಶೈವ ಸ್ವಾಭಿಮಾನಿಗಳ ಸಮಾವೇಶ ಐತಿಹಾಸಿಕ ದಾಖಲೆಯಾಗಿದೆ. ಇದು ಸಂಕಷ್ಟಗಳ ಕಾಲ. ಇಂದು ಧರ್ಮ ಒಂಟಿಗಾಲ ಮೇಲೆ ನಿಂತಿದೆ. ವೀರಶೈವ ಧರ್ಮದ ಪಂಚಪೀಠಗಳು ನೀಡಿದ ಕೊಡುಗೆ ಸಾಮಾನ್ಯವಾದುದಲ್ಲ.
ವೀರಶೈವ ಧರ್ಮವನ್ನು ಒಪ್ಪಿ ಅಪ್ಪಿ ಬಸವಾದಿ ಶಿವಶರಣರು ಈ ಧರ್ಮವನ್ನು ಬೆಳೆಸಿದ್ದನ್ನು ಮರೆಯುವಂತಿಲ್ಲ. ಇಂದು ರಾಜಕೀಯದ ಕರಾಳ ಛಾಯೆ ಧರ್ಮದ ಮೇಲೆ ಬೀಳುತ್ತಿರುವುದು ಎಲ್ಲರಿಗೂ ನೋವನ್ನುಂಟು ಮಾಡಿದೆ. ಮೊದಲ ರಾಜ್ಯದ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಲಿ. ಉತ್ತರ ಕರ್ನಾಟಕದ ರೈತರು ಕಳಸಾ ಬಂಡೂರಿ ಹೋರಾಟ ಯಶಸ್ವಿಯಾಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹೋರಾಟಕ್ಕೆ ಸ್ಪಂದಿಸಬೇಕು ಎಂದರು.