ಮಾನವೀಯತೆ ಇಲ್ಲದ ಸಮಾಜಕ್ಕೆ ಭವಿಷ್ಯವಿಲ್ಲ-ಪ್ರವಚನಗಾರ ಮಹ್ಮದ್
ಕುರಾನ್ ಬಗ್ಗೆ ಕನ್ನಡದಲ್ಲಿ ಪ್ರವಚನ ನೀಡಿದ ಮಹ್ಮದ್ ಕುಂಞ
ಯಾದಗಿರಿಃ ಸಮಾಜದಲ್ಲಿ ಸಾಕಷ್ಟು ಕೆಡಕುಗಳನ್ನು ಕಾಣುತ್ತೇವೆ. ಅವುಗಳು ಯಾವ ಕಾರಣಕ್ಕೆ ಜನ್ಮ ತಾಳುತ್ತವೆ. ಅವುಗಳಿಂದ ಸಮಾಜ ಹಾಳಾಗುತ್ತದೆ. ಅಂತಹ ಗುಣಗಳಿಂದ ದೂರವಿರುವುದು ಲೇಸು. ಮಾನವೀಯತೆ ಇಲ್ಲದ ಸಮಾಜಕ್ಕೆ ಭವಿಷ್ಯವಿಲ್ಲವೆಂದು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮಹ್ಮದ್ ಕುಂಞ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಶಹಾಪುರ ಘಟಕದ ವತಿಯಿಂದ ಆಯೋಜಿಸಿದ್ದ ಕೆಡಕು ಮುಕ್ತ ಸಮಾಜ ನಿರ್ಮಾಣ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಳಿತಿನ ಸಂಸ್ಥಾಪನೆ ಮತ್ತು ಕೆಡುಕಿನ ನಿರ್ಮೂಲನೆ ಕುರಾನ್ ತತ್ವದ ಮೂಲ ಆಶಯವಾಗಿದ್ದು, ಪ್ರಸ್ತುತ ಸಂದರ್ಭಗಳಲ್ಲಿ ಕೆಡುಕಿನ ಪ್ರಸಂಗಳು ಹೆಚ್ಚು ನುಸುಳಿಕೊಳ್ಳುತ್ತಿದ್ದು ಅದರ ವಿರುದ್ಧ ಧ್ವನಿ ಎತ್ತುವವರ ಸ್ವರವು ಕ್ಷೀಣವಾಗುತ್ತಿದೆ. ಸಜ್ಜನರೆನಿಸಿಕೊಂಡವರು ಕೆಡುಕು ಮಾಡುವುವವರನ್ನು ನೋಡಿಯು ನೋಡದಂತೆ ಇರುವುದು ಸಮಾಜ ಹಾಳುಗೆಡುಹುವದಕ್ಕೆ ಕಾರಣವಾಗುತ್ತಿದೆ. ಕೆಡುಕಿನ ಉಚ್ಛಾಟನೆಗಾಗಿ ನಾವೆಲ್ಲ ಒಗ್ಗಟ್ಟಾಗಿ ನಿಂತಲ್ಲಿ ಸಮಾಜವನ್ನು ಪಾವನಗೊಳಿಸಬಹುದು. ಉತ್ತಮ ಸಮುದಾಯಗಳಿಗೆ ಅಲ್ಲಾಹ ಪ್ರಶಂಸೆಯು ಪ್ರೇರಣೆಯಾಗುತ್ತದೆ ಎಂದರು.
ಧರ್ಮವೆಂದರೆ ಬೆಳಕುಃ ಸರ್ವ ಧರ್ಮದ ತಳಹದಿಯು ದೇವರನ್ನು ಬೆಳಕಿನ ಮೂಲಕ ಕಾಣುತ್ತಾರೆ. ಧರ್ಮವೆಂದರೆ ಬೆಳಕು. ಆದರೆ ಪ್ರಸ್ತುತ ಸಂದರ್ಭದಲ್ಲಿ ಬೆಳಕಿನ ಮಹತ್ವ ಅರಿಯದೆ ಬೆಳಕಿನಿಂದ ಕತ್ತಲನ್ನು ಸೃಷ್ಠಿಸುತ್ತಿರುವ ಪರಿಸ್ಥಿತಿ ಬಂದಿದೆ. ಅಧಿಕಾರ ಪಡೆಯಲು, ಅಧಿಕಾರ ತ್ಯೇಜಿಸಲು ಧರ್ಮ ಬಳಕೆಯಾಗುತ್ತಿದೆ.
ಎಷ್ಟೋ ಧರ್ಮವನ್ನು ಹೈಜಾಕ್ ಮಾಡುತ್ತಿದ್ದಾರೆ. ಯಾವುದೇ ಧರ್ಮ ಗ್ರಂಥಗಳಿರಲಿ ಅದರ ವಿಚಾರಗಳು ಯಾರನ್ನು ಸೋಲಿಸುವುದಕ್ಕಾಗಲಿ, ಸೋಲುವದಕ್ಕಾಗಲಿ ಅಲ್ಲ, ಪ್ರತಿಯೊಂದು ಇರುವುದು ತಿಳಿದುಕೊಳ್ಳಲಿಕ್ಕಾಗಿ ಎಂಬುವುದನ್ನು ಮರೆಯಬಾರದು.
ವಿಭಜನೆಯ ಸಿದ್ಧಾಂತದ ಮೇಲೆ ಜಗತ್ತು ಆಳುತ್ತಿದ್ದು ಜಗತ್ತಿನಲ್ಲಿ ಯಾರು ಅನ್ಯರಲ್ಲ. ದೇವನಿದ್ದಾನೆ. ಮರಣ ಶಾಶ್ವತ. ಮಾಡಿದ ಉಪಕಾರ ಹೇಳಬೇಡಿ, ತೊಂದರೆ ಮಾಡಿದವರನ್ನು ಮರೆತುಬಿಡಿ. ಈ ನಾಲ್ಕು ವಿಷಯದ ಬಗ್ಗೆ ಗಮನವಿಟ್ಟು ಮುನ್ನಡೆದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದ ಅವರು, ಇಂದಿನ ವೈಷಮ್ಯ ಪೂರ್ಣ ಕೋಮು ಕಲುಷಿತ ವಾತಾವರಣ ತಿಳಿಗೊಳಿಸಲು ಸಮಾನ ಮನಸ್ಸಿನ ಸಜ್ಜನರ ತಂಡ ಸಜ್ಜಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಸವಮಾರ್ಗ ಪ್ರತಿಷ್ಠಾನದ ವಿಶ್ವರಾಧ್ಯ ಸತ್ಯಂಪೇಟೆ, ದಲಿತ ಮುಖಂಡ ನೀಲಕಂಠ ಬಡಿಗೇರ, ಧರ್ಮಗುರುಗಳಾದ ಫಕಿರೇಶ್ವರಮಠದ ಗುರುಪಾದ ಮಹಾಸ್ವಾಮಿ, ಗೋಗಿಯ ಸೈಯ್ಯದ್ ಚಂದಾಹುಸೇನಿ ಬಿರಾದಾ ಎ ಸಜ್ಜಾದ ನಶೀನ್ ಮಾತನಾಡಿದರು. ಭಾವೈಕ್ಯತೆಯ ಸಂಗಮಕ್ಕೆ ಪ್ರತಿಯೊಂದು ಸಮಾಜದ ವಿಕಾಸಕ್ಕೆ ಇಂಥ ಪ್ರವಚನ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ವೇದಿಕೆ ಮೇಲೆ ಸ್ಥಳೀಯ ಶಾಸಕ ಗುರುಪಾಟೀಲ ಶಿರವಾಳ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಚಂದ್ರಶೇಖರ ಆರಬೋಳ, ಶರಣಪ್ಪ ಸಲಾದಪುರ, ಬಸವರಾಜ ಹಿರೇಮಠ, ಡಾ.ಚಂದ್ರಶೇಖರ ಸುಬೇದಾರ, ಡಾ.ಬಸವರಾಜ ಇಜೇರಿ, ಸಲೀಂ ಸಂಗ್ರಾಮ, ಸೈಯ್ಯದ್ ಮುಸ್ತಫಾ ದರ್ಬಾನ್, ಸಣ್ಣ ನಿಂಗಣ್ಣ ನಾಯ್ಕೋಡಿ, ಫಾದರ ಫ್ರಿಡ್ರೆಕ್ ಡಿಸೋಜಾ, ಮಹಾದೇವಪ್ಪ ಸಾಲಿಮನಿ, ಬಸನಗೌಡ ಮಾಲಿಪಾಟೀಲ, ಲಿಂಗಣ್ಣ ಪಡಶಟ್ಟಿ ಸಗರ, ಶೇಖ ಮುಸ್ತಫಾ, ರತ್ನಾಕರ ಶಟ್ಟಿ, ಬಸವರಾಜ ವಿಭೂತಿಹಳ್ಳಿ, ಸೈಯ್ಯದ್ ಖಾಲಿದ್, ಸಾಲೋಮನ್ ಆಲ್‍ಫ್ರೈಡ್, ಯುಸೂಫ್ ಅತಾವುರ್ ಸಿದ್ಧಕಿ, ಲಾಲಹ್ಮದ ಖುರೇಶಿ, ಖಾಜಾ ಮೈನೋದ್ದೀನ್, ಮುನೀರ ಭಾಗವಾನ್ ಸೇರಿದಂತೆ ಹಿಂದೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.