ಶಾರದಹಳ್ಳಿಃ ಧಾರಕಾರ ಮಳೆಗೆ 5 ಮನೆಗಳು ಕುಸಿತ
ಶಾರದಹಳ್ಳಿಃ ಧಾರಕಾರ ಮಳೆಗೆ 5 ಮನೆಗಳು ಕುಸಿತ
ಶಹಾಪುರಃ ಶುಕ್ರವಾರ ರಾತ್ರಿ ಸುರಿದ ಧಾರಕಾರ ಮಳೆಗೆ ತಾಲೂಕಿನ ಶಾರದಹಳ್ಳಿ ಗ್ರಾಮದ 5 ಮನೆಗಳು ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಲ್ಲದೆ ಭಾರಿ ಮಳೆಗೆ ಗ್ರಾಮದ ಬಹುತೇಕ ಕೃಷಿ ಭೂಮಿ ಮುಳುಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ನೂರಾರು ಎಕರೆ ಗದ್ದೆಗಳು ನೀರಲ್ಲಿ ಮುಳುಗಿವೆ. ಅಲ್ಲದೆ ಹತ್ತಿ, ತೊಗರೆ ಬೆಳೆ ಸೇರಿದಂತೆ ಜೋಳ ಇತರೆ ಬೆಳೆ ಹಾಕಿರುವ ಹೊಲಗಳಿಗೂ ನೀರು ನುಗ್ಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.
ಮತ್ತು ಶಿರವಾಳ, ಸಲಾದಪುರ ಸಏರಿದಂತೆ ಸಗರ ಗ್ರಾಮದಲ್ಲೂ ಭಾರಿ ಮಳೆಯಾಗಿದ್ದು, ಹೊಲ ಗದ್ದೆಗಳಲ್ಲಿರುವ ಬೆಳೆ ಎಲ್ಲವೂ ನೀರು ಪಾಲಾಗಿದೆ. ತಾಲೂಕು ಸೇರಿದಂತೆ ನಗರ ಪ್ರದೇಶದಲ್ಲೂ ಸಾಕಷ್ಟು ಅನಾಹುತ ಸಂಭವಿಸಿವೆ, ಕೆರೆ, ಕಟ್ಟೆಗಳು ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಅಪಾಯದ ಮಟ್ಟದಲ್ಲಿವೆ. ಗ್ರಾಮ ಸೇರಿದಂತೆ ನಗರ ಪ್ರದೇಶದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸಂಕಷ್ಟದಲ್ಲಿರುವ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮತ್ತು ಜಲಾವೃತಗೊಂಡ ಆಯಾ ಮನೆಗಳ ಕುಟುಂಬಸ್ಥರಿಗೆ ಜಿಲ್ಲಾಡಳಿತ ಸಹಾಯ ಹಸ್ತ ಚಾಚಬೇಕಿದೆ. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಕೂಡಲೇ ಕ್ರಮಕೈಗೊಳ್ಳಲು ಸೂಚಿಸಬೇಕೆಂದು ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಭೀಮಾಶಂಕರ ಕಟ್ಟಿಮನಿ ಹಳಿಸಗರ ಮನವಿ ಮಾಡಿದ್ದಾರೆ.