ಸಂವೇದನಾಶೀಲ ಬರಹಗಾರ ಡಾ.ಸಂತೋಷ ಕಂಬಾರ
ಸಂವೇದನಾಶೀಲ ಸೂಕ್ಷ್ಮ ಬರಹಗಾರ ಯುವ ಕವಿ ಸಂತೋಷ
-ರಾಘವೇಂದ್ರ ಹಾರಣಗೇರಾ.
“ಹೆಚ್ಚು ಬರೆದವನಲ್ಲ ನಿಚ್ಚ ಬರೆದವನಲ್ಲ ಮೆಚ್ಚಿಸಲು ಬರೆಯುವ ಅಭ್ಯಾಸವಿಲ್ಲ ಇಚ್ಚೆಗೆದೆಯೊಪ್ಪಿ ಬಗೆ ಬಿಚ್ಚಿದರೆ, ಕಣ್ಣೆಮಯ್ ಎಚ್ಚುವಂದದಿ ತೀಡಿ ತಿದ್ದಿ ಬರೆವೆ” ಕನ್ನಡದ ಪ್ರಮುಖ ಹಿರಿಯ ಸಾಹಿತಿ ಸೇಡಿಯಾಪು ಕೃಷ್ಣಭಟ್ಟರ ತುಂಬಾ ವಿನಯದ ವಾಸ್ತವದ ವಿಚಾರಗಳು ಸಗರನಾಡಿನ ಸೂಕ್ಷ್ಮ ಸಂವೇದನಾಶೀಲ ಬರಹಗಾರ, ಕವಿ, ಸಾಹಿತಿ, ಕನ್ನಡ ಅದ್ಯಾಪಕ ಡಾ.ಸಂತೋಷ ಕುಮಾರ . ಎಸ್. ಕಂಬಾರ ಅವರ ಬದುಕು ಮತ್ತು ಬರಹಗಳಿಗೆ ತುಂಬಾ ಅನ್ವಯಿಸುತ್ತದೆ.
ವಿನಯ, ಪ್ರಾಮಾಣಿಕತೆ ಹಾಗೂ ಪರಿಶ್ರಮದ ಮೂಲಕ ಬದಕು ರೂಪಿಸಿಕೊಂಡಿರುವ ಅವರು ಹೊಸತನಕ್ಕೆ ಬದುಕನ್ನು ತೆರೆದುಕೊಳ್ಳುವ ಮನಸ್ಸುಳ್ಳ ಹೊಸ ತಲೆಮಾರಿನ ಸೃಜನಶೀಲ ಸಾಹಿತಿ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೋಯಿ ಕಾಡಮಗೇರಾ ಗ್ರಾಮದ ಕೃಷಿಕ ಕಸುಬುದಾರ ಕುಟುಂಬದ ಸದಾನಂದಪ್ಪ ಮತ್ತು ಶ್ರೀಮತಿ ರತ್ನಮ ಎಸ್. ಕಂಬಾರ ದಂಪತಿಗಳ ಉದರದಲ್ಲಿ 11.06.1984 ರಂದು ಜನಿಸಿದ ಡಾ.ಸಂತೋಷ ಕುಮಾರ ಕಂಬಾರ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಶಹಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅದ್ಯಯನ ಮಾಡಿದರು.
ನಂತರ ಕಲ್ಬುರ್ಗಿಯ ಡಾ.ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಬೀದರ ಜಿಲ್ಲೆಯ ಔರಾದ ತಾಲೂಕಿನ ರೂರಲ್ ಬಿ. ಎಡ್ ಕಾಲೇಜಿನಲ್ಲಿ ಬಿ.ಎಡ್ ಪದವಿ ಅದ್ಯಯನ ಮಾಡಿದರು.
2011 ರಲ್ಲಿ ಕಲ್ಬುರ್ಗಿಯ ಸರ್ಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಎಮ್.ಎ. ಸ್ನಾತಕೋತ್ತರ ಪದವಿ ಪಡೆದರು. 2012 ರಲ್ಲಿ ಯುಜಿಸಿ ನವದೆಹಲಿಯ ರಾಷ್ಟ್ರೀಯ ಅಹರ್ತಾ (NET) ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ವಚನ ಸಾಹಿತ್ಯದಲ್ಲಿ ಪಿ.ಜಿ.ಡಿಪ್ಲೊಮಾ ಮತ್ತು ಪಿ.ಜಿ.ಡಿಪ್ಲೊಮಾ ಇನ್ ಪಾಲಿ ಬೌದ್ಧ ಅದ್ಯಯನ ಸಂಸ್ಥೆಯಿಂದ ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಸಂಸ್ಥೆಯಲ್ಲಿ “ಕನ್ನಡ ದಲಿತ ಲೇಖಕಿಯರು” ಎಂಬ ವಿಷಯದ ಮೇಲೆ ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಅಧ್ಯಯನ ಕೈಗೊಂಡು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದ ಅವರು ಪ್ರಸ್ತುತವಾಗಿ ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅದ್ಯಯನ ಸಂಸ್ಥೆಯಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯೆ, ವಿನಯದ ಸರಳ, ಸೌಮ್ಯ ಸ್ವಭಾವದ ಡಾ. ಸಂತೋಷ ಕಂಬಾರ ಅವರು ಪ್ರೀತಿಯ ಅಂತಃಕರಣದ ವ್ಯಕ್ತಿ. ಸಾಹಿತ್ಯ, ಸಂಸ್ಕೃತಿ, ಜನಪರ ಕಾಳಜಿ ಹೊಂದಿರುವ ದಲಿತ ಸಂವೇದನೆಯ ಚಿಂತಕರು. ಗುರು-ಹಿರಿಯರಲ್ಲಿ ಗೌರವ, ಸ್ನೇಹದ ನಡೆ-ನುಡಿಯ ಜೊತೆಗೆ ಮಗುವಿನಂತಹ ಮನಸ್ಸು ಹೊಂದಿದವರು.
ಸಾಹಿತಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ.ಎಚ್.ಟಿ. ಪೋತೆ ಅವರು ಹೇಳುವಂತೆ ವಿದ್ಯಾರ್ಥಿ ದೆಸೆಯಿಂದ ಸಾಹಿತ್ಯ, ಸಂಸ್ಕೃತಿ ವಿಚಾರದಲ್ಲೂ ಅಪಾರ ಆಸಕ್ತಿ ಹೊಂದಿದ ಡಾ.ಸಂತೋಷ ಕುಮಾರ ಅನೇಕ ಪ್ರಜ್ಞೆಗಳನ್ನು ಬಲ್ಲಂತಹ ಯುವ ಲೇಖಕರಾಗಿದ್ದಾರೆ.
ನಾಡಿನ ಪ್ರಮುಖ ಚಿಂತಕ, ಸಾಹಿತಿಗಳಾದ ಪ್ರೊ. ಮಲ್ಲೇಶ್ವರಂ. ಜಿ. ವೆಂಕಟೇಶ ಅವರ ಅಭಿಪ್ರಾಯದಂತೆ ಡಾ.ಕಂಬಾರ ಅವರು ಕನ್ನಡ ಸಾಹಿತ್ಯದ ನಿಷ್ಠಾವಂತ ಓದುಗ, ಗಂಭೀರ ಅಭ್ಯಸಿಗರಾಗಿದ್ದಾರೆ. ವಿಸ್ತಾರವಾದ ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಾ.ಸಂತೋಷ ಕಂಬಾರ ಅವರು ” ಮೌನ ಮುರಿದಾಗ ” “ಗಾಂಧಿ ಮತ್ತು ವಿಕೇಂದ್ರೀಕರಣ” ‘ ದಲಿತ ಸಾಹಿತ್ಯ ಸಂಪುಟ-3’ ಕೃತಿಗಳನ್ನು ನಾಡಿನ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯ ಪಡೆದ ‘ ಮೌನ ಮುರಿದಾಗ’ ಕೃತಿಗೆ 2018 ನೇ ಸಾಲಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ನೂರಾರು ಲೇಖನಗಳು, ಕವಿತೆಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ, ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ.
ಹಲವಾರು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ, ಕಾರ್ಯಗಾರಗಳಲ್ಲಿ ಭಾಗವಹಿಸಿ ತಮ್ಮ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರ ಬರಹಗಳನ್ನು ಓದುತ್ತಿರುವಾಗ ಮಾನವೀಯ ಭಾವಸ್ಪಂದನ, ತಳಸಮುದಾಯಗಳ ಬದುಕು, ಬವಣೆಗಳ ಕಾಳಜಿ, ಮಹಿಳಾ ಮತ್ತು ದಲಿತ ಸಂವೇದನೆ, ಮನುಷ್ಯ ಸಂಬಂಧಗಳ ಗಾಢ ಸೆಳೆತ, ನಾಡು-ನುಡಿಯ ಸಾಂಸ್ಕೃತಿಕ ವಿವೇಚನೆ, ಸೃಜನಶೀಲ ಹುಡುಕಾಟ, ಮನುಷ್ಯನ ವರ್ತಮಾನದ ಬದುಕು, ತವಕ, ತಲ್ಲಣಗಳು, ಆತಂಕಗಳು ಕಂಡುಬರುತ್ತದೆ.
ಪ್ರಗತಿಪರ ದೃಷ್ಟಿವುಳ್ಳ ಚಿಂತಕ, ವಿವೇಕವಂತರು, ಲೇಖಕರಾದ ಡಾ. ಸಂತೋಷ ಕುಮಾರ ಅವರು ಸಗರನಾಡಿನ ಹೊಸ ತಲೆಮಾರಿನ ಬರಹಗಾರರಾಗಿ, ಅಧ್ಯಾಪಕರಾಗಿ, ಸಹೃದಯಿಯಾಗಿ, ಹಿರಿಯ ಮಿತ್ರನಾಗಿ ನನಗೆ ತುಂಬಾ ಹತ್ತಿರವಾದವರು.
ಪ್ರೀತಿಯ ಗುರುಗಳಾದ ಪ್ರೊ. ಆನಂದಕುಮಾರ ಸಾಸನೂರ ಅವರಿಂದ ಪರಿಚಯವಾದ ಸ್ನೇಹ. ಸಮಾನ ಆಸಕ್ತಿ, ಅಭಿರುಚಿಗಳಿಂದ, ಪ್ರಗತಿಪರ ಆಲೋಚನೆಗಳಿಂದ ಕೂಡಿ ಅವರೊಂದಿಗಿನ ಸ್ನೇಹ ಸಂಬಂಧ ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ.
ಸಾಹಿತ್ಯದ ಕಾವ್ಯ, ಲೇಖನ, ವಿಮರ್ಶೆ, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಡಾ. ಸಂತೋಷ ಕುಮಾರ ಕಂಬಾರ ಅವರ ಬರಹಗಳು ಸರಳವಾಗಿ, ಸಹಜವಾಗಿ ಓದಿಸಿಕೊಂಡು ಹೋಗುತ್ತವೆ. ನಾಡಿನ ಸಾಹಿತಿ, ಲೇಖಕರಾಗಿ ಬೆಳೆಯುತ್ತಿರುವುದಕ್ಕೆ ಅವರ ವೈವಿಧ್ಯಮಯ ಬರಹಗಳು ಸಾಕ್ಷಿ ಕೊಡುತ್ತವೆ. ಓದುವ ಶ್ರಮಕ್ಕೆ ಶಿಸ್ತನ್ನು ಒದಗಿಸುತ್ತವೆ, ಸೂಕ್ಷ್ಮ ಭಾವನೆಗಳಿಗೆ ಜೀವ ತುಂಬುತ್ತವೆ.
“ಬರವಣಿಗೆಯಲ್ಲಿ ಗಂಭೀರವಾಗಿ ತೊಡಗುವ ಎಲ್ಲರೂ ತಮ್ಮ ಕಾಲದ ಹಲಬಗೆಯ ಲೇಖಕರ ಚಿಂತನೆಗಳು ಹಾಗೂ ಕೃತಿಗಳ ಜೊತೆಗೆ ಹತ್ತಾರು ಥರದ ಮಾತುಕತೆಗಳನ್ನು ನಡೆಸುತ್ತಲೇ ಇರಬೇಕಾಗುತ್ತದೆ. ಅವೆಲ್ಲದರ ಫಲದಿಂದಲೂ ಹೊಸ ಬರವಣಿಗೆ ರೂಪುಗೊಳ್ಳುತ್ತಿರುತ್ತದೆ” ಡಾ. ನಟರಾಜ ಹುಳಿಯಾರ್ ಅವರ ಚಿಂತನೆಯ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳ ಮೌಲಿಕ ಕೃತಿಗಳ ಗಂಭೀರ ಓದು ಮತ್ತು ಬರಹಗಳಲ್ಲಿ ತೊಡಗಿಸಿಕೊಂಡಿರುವ ಡಾ. ಸಂತೋಷ ಕುಮಾರ ಎಸ್. ಕಂಬಾರ ಅವರಿಂದ ಮೌಲಿಕ ಕೃತಿಗಳು ಅನಾವರಣಗೊಳ್ಳಲಿ. ಸಾಹಿತ್ಯ ಲೋಕಕ್ಕೆ ವಿಶಿಷ್ಠವಾದ ಕೊಡುಗೆ ನೀಡಲಿ ಎಂದು ಆಶಿಸೋಣ.
-ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.