ತಾಂಡಾ ಶಾಲೆಗೆ ಅಧಿಕಾರಿಗಳ ಭೇಟಿ ಪರಿಶೀಲನೆ
ಥಾನುನಾಯಕ ತಾಂಡಾ ಶಾಲೆಗೆ ಭೇಟಿ, ಪರಿಶೀಲನೆ
ಯಾದಗಿರಿಃ ಯಾದಗಿರಿ ಜಿಲ್ಲೆ ಗಡಿ ಭಾಗದ ಥಾನುನಾಯಕ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಡಾ.ಹಣಮಂತ್ರಾಯ ಸಿ.ಕರಡ್ಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಚಂದ್ರಶೇಖರ ಅಲ್ಲಿಪೂರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ ಜಿ.ಪಾಟೀಲ್, ಮಾಳಪ್ಪ ಎಸ್.ವಂಟೂರು, ಗೀತಾ ಜಿ.ಎಚ್ ಅವರು ಶಾಲೆಗೆ ಭೇಟಿ ನೀಡಿ, ಮಕ್ಕಳ ಸಮಸ್ಯೆಗಳನ್ನು ಆಲಿಸಿದರು.
ಶಾಲೆಯಲ್ಲಿ ಒಟ್ಟು 35 ಮಕ್ಕಳ ದಾಖಲಾತಿ ಇದೆ. ಇವರಲ್ಲಿ ಪ್ರತಿದಿನ ಸುಮಾರು 18 ಮಕ್ಕಳು ಹಾಜರಾಗುತ್ತಾರೆ. ಜಿಲ್ಲೆಯ ಗಡಿ ಗ್ರಾಮದ ಶಾಲೆಯಾಗಿರುವುದರಿಂದ ಯಾವ ಅಧಿಕಾರಿಯೂ ಭೇಟಿ ನೀಡುವುದಿಲ್ಲ. ಇದರಿಂದಾಗಿ ಶಾಲೆಯ ಮುಖ್ಯಶಿಕ್ಷಕರಾದ ಬನ್ನಪ್ಪ ಶಂಕ್ರಪ್ಪ ಅವರು ಸುಮಾರು ವರ್ಷಗಳಿಂದ ಶಾಲೆಗೆ ಬರದೆ ಹಾಜರಾತಿ ಪುಸ್ತಕದಲ್ಲಿ ರುಜು ಮಾಡಿ ಪ್ರತಿ ತಿಂಗಳು ಸಂಬಳ ಪಡೆದಿದ್ದಾರೆ (ಈಗ ಅಮಾನತ್ತಿನಲ್ಲಿಡಲಾಗಿದೆ).
ಇರುವ ಒಬ್ಬ ಕಾಯಂ ಸಹ ಶಿಕ್ಷಕರು ಶಾಲೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೊಬ್ಬ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಾಂಡಾ ನಿವಾಸಿಗಳು ತಿಳಿಸಿದರು ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ನೀಡಿದ ವರದಿಯಲ್ಲಿ ವಿವರಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟದ ಕುರಿತು ವಿಚಾರಿಸಿ, ಪರಿಶೀಲಿಸಿದಾಗ ಅಡುಗೆ ಮಾಡುವ ಪಾತ್ರೆಗಳಿಲ್ಲ. ಅಡುಗೆ ಸಹಾಯಕಿ ತಮ್ಮ ಮನೆಯಿಂದ ಪಾತ್ರೆಗಳನ್ನು ತಂದಿರುತ್ತಾರೆ. ಅಡುಗೆ ಕೋಣೆ ಕಟ್ಟಡ ಪ್ರಗತಿಯಲ್ಲಿದ್ದು, ಮಕ್ಕಳ ತರಗತಿ ಕೋಣೆಯಲ್ಲಿ ತಯಾರಿಸುತ್ತಿರುವುದು ಕಂಡುಬಂದಿದೆ. ಇನ್ನು ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಿಸುತ್ತಿಲ್ಲ. 2018-19ನೇ ಸಾಲಿನ ಶಿಷ್ಯವೇತನಕ್ಕಾಗಿ ಆನ್‍ಲೈನ್ ಅರ್ಜಿ ಸಲ್ಲಿಸಿದ್ದು, ಹಿಂದಿನ ವರ್ಷಗಳ ಶಿಷ್ಯವೇತನ ಸಿಕ್ಕಿಲ್ಲ ಎಂಬುದು ಶಾಲಾ ಮಕ್ಕಳಿಂದ ತಿಳಿದುಬಂತು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲೆಯ ಸುತ್ತಮುತ್ತ ಸ್ವಚ್ಛತೆ ಇಲ್ಲ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಶಾಲೆಯ ಆಗು-ಹೋಗುಗಳನ್ನು ಗಮನಿಸುವುದಿಲ್ಲ. ವಿಷಯವಾರು ಶಿಕ್ಷಕರಿಲ್ಲದ ಕಾರಣ ಒಂದೇ ಕಡೆ ಪಾಠ ಮಾಡಲಾಗುತ್ತಿದೆ. ಆದ್ದರಿಂದ ವಿಷಯವಾರು ಶಿಕ್ಷಕರು ನೇಮಿಸಬೇಕು. ಕಳೆದ 10 ವರ್ಷಗಳಿಂದ ಶಿಷ್ಯ ವೇತನ ನೀಡದ ಕುರಿತು ತನಿಖೆ ನಡೆಸಬೇಕು.
ಬಾಲ ನ್ಯಾಯ ಕಾಯ್ದೆ(ಪೋಷಣೆ-ರಕ್ಷಣೆ)2015ರ ಆಶಯ ಮತ್ತು ಸಂವಿಧಾನದ ಆಶಯ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕುಗಳು ಮಕ್ಕಳಿಗೆ ದೊರಕುವಂತಾಗಬೇಕು ಎಂಬ ಕೆಲವು ಸುಧಾರಣೆಯ ಅಂಶಗಳ ಮನವಿಯನ್ನೊಳಗೊಂಡ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಡಾ.ಹಣಮಂತ್ರಾಯ ಸಿ.ಕರಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




