ಪ್ರಮುಖ ಸುದ್ದಿ
ಸರ್ಕಾರಿ ಬಸ್ ಗೆ ತಹಸೀಲ್ದಾರ್ ತೆರಳುತ್ತಿದ್ದ ಸರ್ಕಾರಿ ಜೀಪು ಡಿಕ್ಕಿ !
ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ವಜ್ಜಲ ಗ್ರಾಮದ ಸಮೀಪ ಸರ್ಕಾರಿ ಬಸ್ ಗೆ ಹಿಂಬದಿಯಿಂದ ಸುರಪುರ ತಹಸೀಲ್ದಾರ್ ಅವರಿದ್ದ ಜೀಪು ಡಿಕ್ಕಿಯಾಗಿದೆ. ಪರಿಣಾಮ ಜೀಪಿನ ಮುಂಭಾಗ ನುಜ್ಜುಗುಜ್ಜಾದ ಘಟನೆ ನಡೆದಿದೆ. ಆದರೆ, ಅದೃಷ್ಟವಶಾತ್ ಸುರಪುರ ತಹಸೀಲ್ದಾರ್ ಸುರೇಶ್ ಅಂಕಲಗಿ ಮತ್ತು ಚಾಲಕ ಸುರಕ್ಷಿತವಾಗಿದ್ದಾರೆ.
ಸರ್ಕಾರಿ ಬಸ್ ಸುರಪುರದಿಂದ ವಿಜಯಪುರದತ್ತ ತೆರಳುತ್ತಿತ್ತು. ಹಿಂಬದಿಯಿಂದ ತಹಸೀಲ್ದಾರ್ ಅವರಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದ್ದರಿಂದ ಸರ್ಕಾರಿ ಬಸ್ ಚಾಲಕ ಸಹ ಕೊಂಚ ಗಾಬರಿಗೊಳಗಾಗಿದ್ದಾನೆ. ಆದರೆ, ಬಸ್ ನಿಯಂತ್ರಣಕ್ಕೆ ತೆಗೆದುಕೊಂಡು ರಸ್ತೆಬದಿಗೆ ನಿಲ್ಲಿಸಿದ್ದಾನೆ. ಸದ್ಯ ಬಸ್ ನಲ್ಲಿದ್ದವರು ಯಾರಿಗೂ ಸಹ ಯಾವುದೇ ತೊಂದರೆ ಆಗಿಲ್ಲ.
ಜೀಪಿನ ಚಾಲಕ ಮತ್ತು ತಹಸೀಲ್ದಾರ್ ಅದೃಷ್ಟವಶಾತ್ ಪರಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಹುಣಸಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.