ತ್ರಿವಳಿ ತಲಾಖ್ ಮಸೂದೆ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ
ಸಂಸತ್ತಿನಲ್ಲಿ ಜಾರಿಯಾದ ತ್ರಿವಳಿ ತಲಾಖ್ ಮಸೂದೆ ವಿರೋಧಿ ಮುಸ್ಲಿಂ ಪ್ರತಿಭಟನೆ
ಯಾದಗಿರಿಃ ಕೇಂದ್ರ ಸರ್ಕಾರ ಮಂಡಿಸಿರುವ ತ್ರಿವಳಿ ತಲಾಕ್ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲೆಯ ಶಹಾಪುರ ನಗರದಲ್ಲಿ ಎಸ್ಡಿಪಿಐ ನೇತೃತ್ವದಲ್ಲಿ ಮುಸ್ಲಿಂ ಬಂಧುಗಳಿಂದ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.
ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಆಧಾರವಾಗಿಟ್ಟುಕೊಂಡು ತ್ರಿವಳಿ ತಲಾಕ್ ಕುರಿತು ಹೊಸ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ತ್ರಿವಳಿ ತಲಾಕ್ ನಿಷೇಧವನ್ನು ಮುಸ್ಲಿಂ ಸಮುದಾಯದ ಎಲ್ಲಾ ವರ್ಗದ ಜನ ಸ್ವಾಗತಿಸಿದ್ದಾರೆ. ಆದರೆ ನೂತನ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ತಲಾಖ್ ನೀಡಿದವರಿಗೆ 3 ವರ್ಷ ಶಿಕ್ಷೆ ನೀಡುವ ಹೊಸ ನಿಯಮವನ್ನು ಜಾರಿ ಮಾಡುವ ಪ್ರಸ್ತಾಪವನ್ನು ಮುಂದಿರಿಸಿದೆ. ಶಿಕ್ಷೆ ನೀಡುವುದು ಸಲ್ಲದು. ಇದು ಮುಸ್ಲಿಂ ಕಾನೂನಿನೊಡನೆ ಹಸ್ತಕ್ಷೇಪ ನಡೆಸುತ್ತಿರುವುದು ತಿಳಿದು ಬರುತ್ತದೆ. ಮುಸ್ಲಿಂ ಕಾನೂನು ವಯಕ್ತಿಕವಾಗಿದೆ. ಮುಸ್ಲಿಂ ಧರ್ಮದ ಅನುಸಾರ ಸಂಪ್ರದಾಯದ ಪ್ರಕಾರ ನಡೆಯಲು ಅನುವು ಮಾಡಿಕೊಡಬೇಕು. ಕೇಂದ್ರ ಸರ್ಕಾರ ವಯಕ್ತಿಕ ಮುಸ್ಲಿಂ ಕಾನೂನಿನ ಮೇಲೆ ಪ್ರಹಾರ ನಡೆಸುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಈಗಾಗಲೇ ಮುಸ್ಲಿಂ ಹಿರಿಯ ಮೌಲ್ವಿಗಳು, ಬುದ್ಧಿಜೀವಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಸ್ಲಿಂ ಪರ್ಸನಲ್ ಬೋರ್ಡ್ ಸಹ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಮೂಲಕ ಮುಸ್ಲಿಂ ಮಹಿಳೆಯರಿಗೆ ಅನುಕೂಲವಾಗಿದೆ ಎಂಬ ಭ್ರಮೆಯನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಕೂಡಲೇ ತ್ರಿವಳಿ ತಲಾಕ್ ಕುರಿತು ನೂತನ ಮಸೂದೆ ಜಾರಿಯಾಗಬಾರದು ಎಂದು ಒತ್ತಾಯಿಸಿದರು. ಮುಂಚಿತವಾಗಿ ನಗರದ ಜೈನಾಮಸೀದಿಯಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಸ್ಡಿಪಿ ಜಿಲ್ಲಾ ಅಧ್ಯಕ್ಷ ಇಸಾಕ್ ಹುಸೇನ್, ಖಾಲಿದ್, ದಲಿತ ಮುಖಂಡ ನೀಲಕಂಠ ಬಡಿಗೇರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು.