ಅಂಕಣಸರಣಿ

ಮಾನವ ಸಂವೇದನೆಗಳಿಗೆ ಕುಂಚದಿಂದ ಜೀವ ತುಂಬುವ ಶಿಕ್ಷಕ ರುದ್ರಪ್ಪ ತಳವಾರ

ರುದ್ರಪ್ಪ ತಳವಾರ ಕೈಯಲ್ಲಿ ಅರಳಿದ ಮಾಯಾಲೋಕ

ರಾಘವೇಂದ್ರ ಹಾರಣಗೇರಾ

ಮಾನವನ ಸೃಜನಶೀಲ ಮನಸ್ಸು ಅಭಿವ್ಯಕ್ತಿಗಾಗಿ ಕಂಡುಕೊಂಡ ಹಲವಾರು ಮಾಧ್ಯಮಗಳಲ್ಲಿ ಚಿತ್ರಕಲೆಯೂ ಒಂದಾಗಿದೆ. ಆಧುನೀಕರಣ, ಕಂಪ್ಯೂಟರೀಕರಣದ ಸಮಕಾಲೀನ ಸಂದರ್ಭದಲ್ಲಿ ಇಂದು ಚಿತ್ರಕಲೆ ವಿಶಿಷ್ಠವಾಗಿ, ವೈವಿಧ್ಯಮಯವಾಗಿ ರಚನೆಯಾಗುತ್ತ, ಹೊಸ ಸಾಧ್ಯತೆಗಳಿಗೆ ನಾಂದಿಯಾಡುತ್ತ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ.

ಇಂತಹ ಚಿತ್ರಕಲೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ರುದ್ರಪ್ಪ ಎಸ್. ತಳವಾರ ಅವರು ಬಹಳಷ್ಟು ಕ್ರೀಯಾಶೀಲತೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರುದ್ರಪ್ಪ ತಳವಾರ

ವಿನಯಶೀಲ, ಸ್ನೇಹಪರ ಜೀವಿ ಶಿಕ್ಷಕ ತಳವಾರ ಅವರು ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆಯಲ್ಲಿ ಶ್ರದ್ಧೆಯಿಂದ, ಅತೀವ ಆಸಕ್ತಿ, ಉತ್ಸಾಹದಿಂದ ಕೃಷಿ ಮಾಡುತ್ತಿದ್ದಾರೆ. ಅಕ್ರಾಲಿಕ ಮಾಧ್ಯಮ, ಲ್ಯಾಂಡ ಸ್ಕೇಪ್, ಪೋಸ್ಟರ್ ಮಾಧ್ಯಮ, ಜಲವರ್ಣ, ಸೃಜನಶೀಲ ಪೇಂಟಿಂಗ್ ಮಾಧ್ಯಮಗಳಲ್ಲಿ ಸಂಪ್ರದಾಯಿಕ ಮತ್ತು ನೈಜ ಶೈಲಿಯ ಚಿತ್ರಗಳನ್ನು ರಚಿಸಿ ಮಿಶ್ರ ಮಾಧ್ಯಮದಲ್ಲಿಯೂ ಪ್ರಯೋಗ ಮಾಡುತ್ತಾರೆ.

ಕಲಾವಿದ ರುದ್ರಪ್ಪ ತಳವಾರ ಅವರ ಕಲಾಕೃತಿಗಳಲ್ಲಿ ಪ್ರಖರವಾದ, ಢಾಳಾದ ಬಣ್ಣಗಳನ್ನು ಬಳಸದಿರುವುದು ಶ್ಲಾಘನೀಯ. ಸರಳ, ಮೂರ್ತ ಕೃತಿಗಳಲ್ಲಿ ಅವರು ಜನಸಾಮಾನ್ಯರಿಗೆ ಅರ್ಥವಾಗುವಂತೆ ಜನಪ್ರೀಯ ರೂಪಗಳನ್ನು ತಮ್ಮ ಕುಂಚ ಕಲೆಯಲ್ಲಿ ಅರಳಿಸುತ್ತಾರೆ. ವರ್ತಮಾನ ಸಂದರ್ಭದ ಕಲಾಪೇಕ್ಷಗಳಿಗೆ ಪೂರಕವಾಗಿ ಕಲಾಕೃತಿಗಳನ್ನು ರಚಿಸುವುದು ತಳವಾರ ಅವರ ಚಿತ್ರಕಲೆಯ ವಿಶೇಷವಾಗಿದೆ.

ಬುದ್ಧನ ಮತ್ತು ಬುದ್ಧನ ಕಾಲದ ಪರಿಕರಗಳನ್ನು, ಐತಿಹಾಸಿಕ ತಾಣಗಳು, ದೇವಾಲಯಗಳು, ಸ್ತೂಪಗಳು ಮುಂತಾದವುಗಳನ್ನು ಅಕ್ರಾಲಿಕ ಮಾಧ್ಯಮದಲ್ಲಿ ರಚಿಸಿದ್ದಾರೆ ಮತ್ತು ಈ ಕಲಾಕೃತಿಗಳನ್ನು ನಿಸರ್ಗದ ಭಾಗಗಳನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಕಲೆಗೆ ಹೊಸ ರೂಪವನ್ನು ನೀಡಲು ಪ್ರಯತ್ನಿಸಿದ್ದಾರೆ. ಇದು ಅವರ ಸೃಜನಶೀಲ ಕಲೆಗೆ ಸಾಕ್ಷಿ ಒದಗಿಸುತ್ತದೆ.

ವಿಮಾನ ದುರಂತ, ಹಡಗು ದುರಂತ, ನೆರೆ ಹಾವಳಿ ಮುಂತಾದ ಪ್ರಚಲಿತ ವಿದ್ಯಾಮಾನ ಘಟನೆಗಳನ್ನು ಅಕ್ರಾಲಿಕ ಮಾಧ್ಯಮದಲ್ಲಿ ರಚಿಸಿದ್ದಾರೆ. ಮತ್ತು ಇವುಗಳನ್ನು ಕ್ರಿಯೇಟಿವ್ ಲ್ಯಾಂಡ್‍ಸ್ಕೇಪ್‍ನಲ್ಲಿ ಚಿತ್ರಣ ಮಾಡಿರುವುದು ವಿಶೇಷವಾಗಿದೆ. ಈ ಪ್ರಕಾರದಲ್ಲಿ ನಿಸರ್ಗ ಕಲಾಕೃತಿಗಳನ್ನು ಸೃಜನಾತ್ಮಕವಾಗಿ ಅನಾವರಣಗೊಳಿಸುತ್ತಾರೆ.

ಈ ಕಲೆಯಲ್ಲಿ ತಳವಾರ ಅವರು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕ್ರಿಯೇಟಿವ್ ಲ್ಯಾಂಡ್‍ಸ್ಕೇಪ್ ಕಲೆ ಇಂದು ಜಗತ್ತಿನಲ್ಲಿ ಬಹಳ ಮಹತ್ವ ಪಡೆದುಕೊಳ್ಳುತ್ತಿದೆ ಎಂದು ರುದ್ರಪ್ಪ ತಳವಾರ ಅವರು ಹೇಳುತ್ತಾರೆ. ಬುದ್ಧ, ವಿಮಾನ ದುರಂತ, ನೆರೆ ಹಾವಳಿ, ಹಡಗು ದುರಂತ ಮುಂತಾದ ಚಿತ್ರಕಲಾ ಕೃತಿಗಳಲ್ಲಿ ಹೊಸತನದ ಸೆಳಕುಗಳನ್ನು ನೊಡಬಹುದು. ನೊಡುವ ಕಲಾಸಕ್ತರಿಗೆ ತೃಪ್ತಿಯ ಭಾವ ತರುತ್ತದೆ. ತಮಗೆ ಕಾಡುವ ಸಮಾಜದ ಅನೇಕ ಸಮಸ್ಯೆಗಳು, ತಲ್ಲಣಗಳು, ಬದುಕು, ಬದುಕಿನ ಅನುಭವಗಳನ್ನು ಚಿತ್ರಕಲೆಯಲ್ಲಿ ಅಭಿವ್ಯಕ್ತಿಸುವುದರ ಮೂಲಕ ನಮ್ಮ ಕಣ್ಮನ ಸೆಳೆಯುತ್ತಾರೆ.

ಕಲಾವಿದನ ಕಲಾಕೃತಿ ಅಲಂಕಾರಿಕ ವಸ್ತುವಲ್ಲ, ಅದು ಒಬ್ಬ ಕಲಾವಿದನ ಸೃಜನಶೀಲತೆ ಅಭಿವ್ಯಕ್ತವಾಗುತ್ತದೆ. ಅದು ಭಾವ ಪ್ರಚೋದನೆಯಾಗಿರಬೇಕು ಎಂಬ ಖ್ಯಾತ ಚಿತ್ರಕಲಾವಿದ ಎಂ.ಟಿ. ಭೋಪಲೆಯವರ ಅಭಿಪ್ರಾಯದಂತೆ ತಳವಾರ ಅವರ ಚಿತ್ರಕಲಾಕೃತಿಗಳಲ್ಲಿ ಇಂತಹ ಸೂಕ್ಷ್ಮ ಭಾವಗಳನ್ನು ಕಾಣಬಹುದು ಜಲವರ್ಣ, ಅಕ್ರಾಲಿಕ್ ಮಾಧ್ಯಮದ ಅನೇಕ ವರ್ಣಚಿತ್ರಗಳಲ್ಲಿ ತಳವಾರ ಅವರ ಸೂಕ್ಷ್ಮ ಸಂವೇದನೆ ಮತ್ತು ಕಲಾ ಪ್ರೌಢಿಮೆ ಅಭಿವ್ಯಕ್ತವಾಗಿದೆ.

ಕಲಾಕೃತಿಗಳಿಗೂ ಕಾಲಕ್ಕೂ ತುಂಬಾ ಗಾಢÀವಾದ ಸಂಬಂಧವಿದೆ ಆದ್ದರಿಂದ ಚಿತ್ರಕಲಾಕೃತಿಯೊಂದು ಸೂಕ್ತವಾದ ಕಾಲ, ಸಂದರ್ಭ, ಸನ್ನಿವೇಶಗಳಲ್ಲಿಯೇ ಅರಳಬೇಕು ಅಂದಾಗ ಮಾತ್ರ ಆ ಕಲಾಕೃತಿಗಳಿಗೆ ಒಂದು ಮಹತ್ವ ಬರುತ್ತದೆ ಎಂಬುದು ನನ್ನ ಅಭಿಪ್ರಾಯ ಈ ಹಿನ್ನಲೆಯಲ್ಲಿ ಕಲಾವಿದ ರುದ್ರಪ್ಪ ತಳವಾರ ಅವರ ಅನೇಕ ಚಿತ್ರಕಲಾಕೃತಿಗಳು ಅರಳಿವೆ.

ಕಲೆ ಜನಸಾಮಾನ್ಯರ ಮನಸ್ಸುಗಳಿಗೆ ಅರ್ಥವಾದಾಗ ಆ ಕಲೆ ಎಲ್ಲಾ ಕಾಲಕ್ಕೂ ಮಹತ್ವ ಪಡೆದುಕೊಳ್ಳುತ್ತದೆ. ಇಂದಿನ ಅತ್ಯಾಧುನಿಕ ಕಂಪ್ಯೂಟರ್ ಯುಗದಲ್ಲಿ ಕುಂಚಕಲೆಯನ್ನು ಗಂಭಿರವಾಗಿ ಪರಿಗಣಿಸಿರುವ ರುದ್ರಪ್ಪ ತಳವಾರ ಅವರು ತಮ್ಮ ಕಲೆಯಿಂದ ನೈಜ ಚಿತ್ರಗಳನ್ನು ಪ್ರತಿಬಿಂಬಿಸುವ ಅವರ ಚಿತ್ರಕಲಾ ಪ್ರತಿಭೆಗೆ, ಚಿತ್ರಕಲಾಕೃತಿಗಳಿಗೆ ಅನೇಕ ಪ್ರಶಸ್ತಿ, ಸನ್ಮಾನ, ಗೌರವಗಳು ಸಂದಿವೆ.

ರಾಜ್ಯ ಚಿತ್ರಕಲಾ ಶೈಕ್ಷಣಿಕ ಸಮ್ಮೇಳನ 2004-05 ಕಲಬುರಗಿ, ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ ಹಾಸನ 2008-09, ಆಳ್ವಾಸ್ ವರ್ಣ ಜಾಗೃತಿ ರಾಜ್ಯ ಚಿತ್ರಕಲಾವಿದರ ಬೃಹತ್ ಶಿಬಿರ ಮೂಡಬಿದಿರೆ 2010, 8ನೇ ಶೈಕ್ಷಣಿಕ ಚಿತ್ರಕಲಾ ಸಮ್ಮೇಳನ ಮೈಸೂರು, ರಾಜ್ಯಮಟ್ಟದ ಚಿತ್ರಕಲಾ ಸಮ್ಮೇಳನ ಉಡುಪಿ 2013 ಹೀಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಚಿತ್ರಕಲಾ ಪ್ರದರ್ಶನಗಳಲ್ಲಿ, ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

ಇವರ ಚಿತ್ರಕಲೆಯ ಸಾಧನೆಗೆ ರಾಜ್ಯ ಕಲಾರತ್ನ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಮಾರ್ಗದರ್ಶಕ ಶಿಕ್ಷಕ ಪ್ರಶಸ್ತಿ, ಸಾಧನ ಶ್ರೀ ಪುರಸ್ಕಾರ 2011, 66ನೇ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾಡಳಿತದಿಂದ ಪ್ರಶಸ್ತಿ ಸನ್ಮಾನ, ಶಿಕ್ಷಕರ ಕಲ್ಯಾಣ ನಿಧಿಯಿಂದ ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿ 2013-14, 2013ರಲ್ಲಿ ಗುಲ್ಬರ್ಗಾ ವಿ.ವಿ.ಯಿಂದ ಹೈದರಬಾದ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ್ಮ ಶಿಕ್ಷಕ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಗುಲ್ಬರ್ಗಾ ಇವರಿಂದ ಉತ್ತಮ ಕಲಾಕೃತಿಗೆ ಪ್ರಶಸ್ತಿ, ರಾಜ್ಯ ಕಲಾಶಿಕ್ಷಕ ಶ್ರೀ ಪ್ರಶಸ್ತಿ ಇಲಕಲ್ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಶಿಕ್ಷಕ, ಕಲಾವಿದ ರುದ್ರಪ್ಪ ಎಸ್.ತಳವಾರ ಅವರು ಶೈಕ್ಷಣಿಕ ಹಾಗೂ ಚಿತ್ರಕಲಾ ಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆಯನ್ನು ಹಾಗೂ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದಾರೆ.

ತಮ್ಮ ಕಲೆಯಲ್ಲಿ ಹೆಚ್ಚು ಜಲವರ್ಣ ಮತ್ತು ಅಕ್ರಾಲಿಕ್ ಮಾಧ್ಯಮಗಳಿಂದ ಸೃಜನಾತ್ಮಕ ಪೆಂಟಿಂಗ್‍ಗಳನ್ನು ಬಳಸಿಕೊಳ್ಳುವ ತಳವಾರ ಅವರು ಚಿತ್ರಕೆಲೆಗೆ ಸಂಬಂಧಿಸಿದಂತೆ ಲೇಖನ ಬರಹಗಳಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಕಲೆಯಲ್ಲಿ ವಿಶಿಷ್ಠವಾಗಿ ಕೃಷಿ ಮಾಡುತ್ತಿರುವ ರುದ್ರಪ್ಪ ತಳವಾರ ಅವರು ತನ್ನ ಕಲೆಯಲ್ಲಿ ಹೊಸತನವನ್ನು ಕಾಣಬೇಕು, ಸಾಧಿಸಬೇಕೆಂಬ ಛಲವಿದೆ, ತಮ್ಮ ಕಲಾಕೃತಿಗಳಲ್ಲಿ ನಿರ್ಧಿಷ್ಠ ಶೈಲಿಯನ್ನು ರೂಢಿಸಿಕೊಳ್ಳುವ ಪ್ರಯತ್ನವಿದೆ, ವೃತ್ತಿ ಮತ್ತು ಕಲೆಯಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಪ್ರಮಾಣಿಕತೆ ಇದೆ.

ತನ್ನ ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಲಾವಿದ ರುದ್ರಪ್ಪ ತಳವಾರ ಅವರು ನಾಡಿಗೆ ವಿಶಿಷ್ಠ ಕಲಾವಿದನಾಗಿ ಕಾಣಿಕೆಯಾಗುವ ಭರವಸೆ ಮೂಡಿಸುತ್ತಿದ್ದಾರೆ ಎಂದು ಹೇಳಿದರೆ ಅತೀಶಿಯೋಕ್ತಿಯಾಗಲಾರದು. ಇದೇ ನವೆಂಬರ್ 25ರಂದು ಕನ್ನ ಮತ್ತು ಸಂಸ್ಕøತಿ ಇಲಾಖೆಯ ಧನಸಹಾಯದೊಂದಿಗೆ ಕಲಬುರ್ಗಿಯ ಮಾತೋಶ್ರೀ ಗುರುಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ರುದ್ರಪ್ಪ ಎಸ್. ತಳವಾರರವರ ಸೃಜನಶೀಲ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪೂರ.
ಜಿ. ಯಾದಗಿರಿ ಮೊ. 9901559873

Related Articles

Leave a Reply

Your email address will not be published. Required fields are marked *

Back to top button