ದೇಶದ ಬಲಿಷ್ಠ ಪ್ರಜೆಗಳಾಗಿ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ-ದರ್ಶನಾಪುರ
ಶಹಾಪುರಃ ಸಂಭ್ರಮದ ಶಿಕ್ಷಕರ ದಿನಾಚರಣೆ
ದೇಶದ ಬಲಿಷ್ಠ ಪ್ರಜೆಗಳಾಗಿ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ-ದರ್ಶನಾಪುರ
ಶಿಕ್ಷಕರು ದೇಶದ ಬಹು ದೊಡ್ಡ ಶಕ್ತಿ – ದರ್ಶನಾಪುರ
yadgiri, ಶಹಾಪುರಃ ಸಾಕಷ್ಟು ಶ್ರಮ ಪಟ್ಟು ತಿದ್ದಿ ತೀಡಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವ ಮೂಲಕ ಅವರನ್ನು ದೇಶದ ಉತ್ತಮ, ಬಲಿಷ್ಠ ಪ್ರಜೆಗಳನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ. ಉತ್ತಮ ಶಿಕ್ಷಣ ವರನ್ನು ಸುಶಿಕ್ಷರನ್ನಾಗಿ ಮಾಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರವಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಸಮೀಪದ ಭೀಮರಾಯನಗುಡಿಯ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಮತ ಪಂಥಗಳೆನ್ನದೆ, ಬಡವ ಬಲ್ಲಿದರೆನ್ನದೆ, ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರಿ ಶಾಲೆಯ ವ್ಯವಸ್ಥೆಯೊಂದಿಗೆ ಉತ್ತಮ ಬೋಧನೆ ಮಾಡಿ ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸುವ ಮೂಲಕ ಅವರಲ್ಲಿ ಅಕ್ಷರದ ಅರಿವೂ ಮೂಡಿಸುವಲ್ಲಿ ತಾಲೂಕಿನ ಶಿಕ್ಷಕರ ಸೇವೆ ಅಪಾರವಿದೆ.
ಜೀವನದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಗುರುವಿನ ಅನುಗ್ರಹವಿಲ್ಲದೆ ಮುಂದುವರೆಯಲೂ ಸಾಧ್ಯವಿಲ್ಲ. ಶಿಕ್ಷಣದ ಗುಣಮಟ್ಟ ಸುಧಾರಣೆಯಿಂದ ದೇಶ ಪ್ರಗತಿ ಜೊತೆಗೆ ಸಶಕ್ತತೆ ಹೊಂದಲು ಸಾಧ್ಯವಿದೆ.
ಶೈಕ್ಷಣಿಕವಾಗಿ ಸಬಲರಾಗಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ನಮ್ಮ ತಾಲೂಕಿನಲ್ಲಿ ಮಾದರಿ ಡಿಗ್ರಿ ವಸತಿ ಕಾಲೇಜು ಕಟ್ಟಡ ಮುಗಿಯುವ ಹಂತದಲ್ಲಿದೆ. ಅದೊಂದು ತಾಲೂಕಿಗೆ ಉತ್ತಮ ಈ ಭಾಗದ ಯುವಕರಿಗೆ ಬಲವಾದ ಕಾಲೇಜು ಅಂದರೆ ತಪ್ಪಿಲ್ಲ. ಶೈಕ್ಷಣಿಕ ಮಟ್ಟ ಸುಧಾರಿಸಿದ್ದಲ್ಲಿ ದೇಶ ಸಮೃದ್ಧಿಯಾಗಿ ಬೆಳೆಯಲಿದೆ ಎಂದರು.
ಪಠ್ಯದಲ್ಲಿ ಗೊಂದಲದ ವಿಷಯಗಳು – ದರ್ಶನಪುರ ಬೇಸರ
ಪ್ರಸಕ್ತ ಕರ್ನಾಟಕ ಸರ್ಕಾರ ಪಠ್ಯ ಪುಸ್ತಕದಲ್ಲಿ ಸಾಕಷ್ಟು ಲೋಪ ದೋಷಗಳನ್ನು ಪ್ರಿಂಟ್ ಮಾಡಿದೆ. ಇದಕ್ಕೆಲ್ಲ ಪಠ್ಯ ರಚನಾ ಸಮಿಯೇ ಕಾರಣ, ಸಮಿತಿಯಲ್ಲಿ ಎಂತಹ ಚಿಂತಕರಿದ್ದಾರೆ ಎಂಬುದು ಬಹಳ ಮುಖ್ಯ. ಪಠ್ಯದಲ್ಲಿ ಬಂದಿರುವ ವಿಷಯಗಳು ಸಾಕಷ್ಟು ಚರ್ಚೆಗೆ ಗ್ರಾಸವಾದವು. ಇಲ್ಲದ ಇತಿಹಾಸ ತಿಳಿ ಹೇಳಿದರೆ, ಮಕ್ಕಳು ಮುಂದೆ ಏನಾಗಬಹುದು. ಹೀಗಾಗಿ ಪಠ್ಯದಲ್ಲಿ ಈ ಬಾರಿ ಗೊಂದಲದ ಪಾಠಗಳನ್ನು ರೂಪಿಸಲಾಗಿತ್ತು. ಅದಕ್ಕೆಲ್ಲ ಸರ್ಕಾರವೇ ಹೊಣೆ ಹೊತ್ತು ಕೆಲವೊಂದು ತಿದ್ದುಪಡಿ ಮಾಡಿ ಹೊಸ ರೂಪ ಕೊಡಲು ಒಪ್ಪಿಗೆ ಸೂಚಿಸಿತ್ತು. ಮುಂದೆ ಪಠ್ಯ ರಚನೆ ಸಮಿತಿ ಏನು ಮಾಡಲಿದೆ ಕಾದು ನೋಡಬೇಕಿದೆ ಎಂದು ಶಾಸಕ ದರ್ಶನಾಪುರ ಪಠ್ಯ ರಚನಾ ಸಮಿತಿ ಕುರಿತು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಪಾಟೀಲ್, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಕೃಷಿ ಮಹಾ ವಿದ್ಯಾಲಯದ ಡೀನ್ ಡಾ.ಚನ್ನಬಸವಣ್ಣ, ಡಾ.ಡಿ.ಎನ್.ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೆದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಎಸ್.ಸೂರ್ಯವಂಶಿ ಉಪಸ್ಥಿತರಿದ್ದರು.
ಸಮಾರಂಭ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ವಹಿಸಿದ್ದರು. ಅಥಿತಿಗಳಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಕ್ರಪ್ಪ ಗೊಂದೆನೂರ, ಕರಾಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಯಾಳಗಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶರಣಪ್ಪ ಪಾಟೀಲ್ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮೂವರು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ವೀರಯ್ಯಸ್ವಾಮಿ ಸ್ವಾಗತಿಸಿದರು. ಕಲಾವಿದ ಶರಣು ಜಾಲಹಳ್ಳಿ ಪ್ರಾರ್ಥಿಸಿದರು. ಶಿಕ್ಷಕ ಶರಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಲಕ್ಷ್ಮಣ ಲಾಳಸಗೇರಿ ನಿರೂಪಿಸಿ ವಂದಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸುಮಾರು 1500 ಕೋಟಿ ಅನುದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಅಭಿವೃದ್ಧಿಗೆ ಶೇ.80 ರಷ್ಟು ಹಣ ಮೀಸಲಿಡಲಾಗಿದೆ. ಆ ಯೋಜನೆಯಡಿ ಕ್ಷೇತ್ರದ ಪ್ರತಿ ಶಾಲಾ, ಕಾಲೇಜು ಅಭಿವೃದ್ದಿಗೆ ಅನುಕೂಲವಾಗಿದೆ. ಅಲ್ಲದೆ ಈ ಭಾಗದ ಜೀವನಾಡಿಯಾದ ಕೃಷ್ಣಾ ಕಾಡಾ, ಕೃಷಿ ವಿಶ್ವ ವಿದ್ಯಾಲಯ ಮತ್ತು ಶೈಕ್ಷಣಿಕ ಪರಗತಿಗೆ ಭೇಕಾದ ಪೂರ್ವ ಸ್ಥಳಗಳನ್ನು ನಮ್ಮ ತಂದೆಯವರಾದ ದೂರದೃಷ್ಠಿ ರಾಜಕಾರಣಿಯಾಗಿದ್ದ, ಕ್ಷೇತ್ರದ ಅಭಿವೃದ್ಧಿಗೆ ಅಪಾರ ಒಲವು ಹೊಂದಿದ್ದ ಅವರು ಶೈಕ್ಷಣಿಕ, ಕೃಷಿ ಕಾಲೇಜು ಬೇಕಾದ ಎಲ್ಲಾ ಕೆಲಸವನ್ನು ಮಾಡಿದ್ದರು. ಇಂದು ಅವರು ಶೈಕ್ಷಣಿಕೆ ಪ್ರಗತಿಗೆ ಮೀಸಲಿಟ್ಟ ಸ್ಥಲ ಇರುವದರಿಂದಲೇ ಎಲ್ಲಾ ಕೆಲಸಗಳು ಸುಲಭವಾಗಿ ಮಾಡುವಂತಾಗಿದೆ ಯುಕೆಪಿ ಕ್ಯಾಂಪ್, ಕಾಡಾ ವಿಭಾಗ, ಅಲ್ಲದೆ 371(ಜೆ) ಜಾರಿಯಿಂದ ಕಕ ಭಾಗ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಿದೆ.
-ಶರಣಬಸಪ್ಪಗೌಡ ದರ್ಶನಾಪುರ. ಶಾಸಕರು.