ರಾಹುಲ್ ರನ್ ಫಾರ್ ಟೆಂಪಲ್ : ಕರ್ನಾಟಕದಲ್ಲೂ ಮೃದು ಹಿಂದುತ್ವದತ್ತ ಕಾಂಗ್ರೆಸ್ ಒಲವು?
-ಮಲ್ಲಿಕಾರ್ಜುನ ಮುದನೂರ್
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಜೆಂಡಾ ಹೊತ್ತು ಬಂದ ಬಿಜೆಪಿ ಹಿಂದುತ್ವದ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಹಿಂದುತ್ವದ ಹೆಸರಿನಲ್ಲಿ ಮತಬ್ಯಾಂಕ್ ನಿರ್ಮಾಣ ಮಾಡುವ ತಂತ್ರಗಾರಿಕೆಯಲ್ಲಿ ತೊಡಗಿದ್ದು ಓಪನ್ ಸೀಕ್ರೆಟ್. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಧರ್ಮಾತೀತ ಹಣೆಪಟ್ಟಿಯೊಂದಿಗೆ ಬಿಜೆಪಿಯ ಹಿಂದುತ್ವವಾದವನ್ನು ಖಂಡಿಸುತ್ತ ಬಂದಿದೆ. ಆ ಮೂಲಕ ಅಲ್ಪಸಂಖ್ಯಾತರ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವದರಲ್ಲಿ ತೊಡಗಿದ್ದು ಕೂಡ ಅಷ್ಟೇ ಸತ್ಯ. ಆದರೆ, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿದೆ.
ಕಳೆದ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಮೃದು ಹಿಂದುತ್ವದತ್ತ ವಾಲಿದ್ದರು. ಸೋಮನಾಥ ದೇಗುಲ ಸೇರಿದಂತೆ ಗುಜರಾತಿನಲ್ಲಿ ಹೋದಲ್ಲೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿದರು. ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಆ ಮೂಲಕ ಮೃದು ಹಿಂದುತ್ವ ಧೋರಣೆ ತೋರ್ಪಡಿಸಿ ಹಿಂದೂ ಮತಗಳನ್ನು ಸೆಳೆಯಲೆತ್ನಿಸಿದ್ದರು. ಪರಿಣಾಮ ಗುಜರಾತಿನಲ್ಲಿ ಕಾಂಗ್ರೆಸ್ ಚೇತರಿಕೆಯನ್ನೂ ಕಂಡಿತು. ಹೀಗಾಗಿ, ಚುನಾವಣಾ ಫಲಿತಾಂಶದ ಬಳಿಕವೂ ರಾಹುಲ್ ಗಾಂಧಿ ರನ್ ಫಾರ್ ಟೆಂಪಲ್ ಮುಂದುವರೆಸಿದರು.
ಮತ್ತೊಂದು ಕಡೆ ಸಂಜೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಚುನಾವಣ ಭಾಷಣ ಮಾಡುವ ಸಂದರ್ಭದಲ್ಲಿ ಸಮೀಪದ ಮಸೀದಿಯಲ್ಲಿ ಅಜಾನ್ ಕೂಗಿದ ಶಬ್ದ ಕೇಳಿ ಭಾಷಣ ನಿಲ್ಲಿಸಿದ್ದರು. ಐದು ನಿಮಿಷದ ಬಳಿಕ ಪ್ರಾರ್ಥನೆಗೆ ನಮ್ಮ ಭಾಷಣದಿಂದಾಗಿ ತೊಂದರೆ ಆಗಕೂಡದು ಎಂದು ಮೌನವಹಿಸಿದೆ ಎಂದು ಹೇಳಿದ್ದರು. ಆ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಯತ್ನಿಸಿದ್ದರು. ಹೀಗೆ ಮತಗಳಿಕೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಿನ್ನ ಪ್ರಯತ್ನದ ಮೂಲಕ ಮತದಾರರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಮುಂಬರುವ ಕರ್ನಾಟಕ ಚುನಾವಣೆ ಸಂದರ್ಭದಲ್ಲೂ ಸಹ ಇದೇ ರೀತಿಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾಡಲಿದ್ದಾರೆ. ರಾಹುಲ್ ಗಾಂಧಿ ಕರ್ನಾಟಕದ ಪ್ರಮುಖ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸಿದ್ಧರಾಮಯ್ಯ ದೇಗುಲ ಭೇಟಿ ಆರಂಭಿಸಿದ್ದಾರೆ. ನಿನ್ನೆಯಷ್ಟೇ ದಾವಣಗೆರೆಯಲ್ಲಿ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೂ ಮುನ್ನ ನಗರದ ದೇವಿಯ ದೇಗುಲಕ್ಕೆ ಭೇಟಿ ನೀಡುವ ಮೂಲಕ ಮೃದು ಹಿಂದುತ್ವದತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ.
ಮೃದು ಹಿಂದುತ್ವದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ ನಾನು ಹಿಂದು, ಜಾತ್ಯಾತೀತತೆ ನನ್ನ ಬದ್ಧತೆ. ಆದರೆ, ಬಿಜೆಪಿ, ಆರ್ ಎಸ್ ಎಸ್ ನ ಹಿಂದುತ್ವವನ್ನು ವಿರೋಧಿಸುತ್ತೇನೆ ಎಂದಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿ ಅದ್ಯಕ್ಷ ಅಮಿತ್ ಶಾ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಓಲೈಕೆಗಾಗಿ ಮಠಗಳ ಭೇಟಿ ಹಾಗೂ ದೇಗುಲಗಳ ಭೇಟಿ ಮೂಲಕ ಬಿಜೆಪಿ ಮತಬೇಟೆಗೆ ಹೊರಡುವ ಸಾಧ್ಯತೆ ಇದೆ.
ಏನೇ ಆಗಲಿ ಬರುವ ಚುನಾವಣೆಗಳು ಅಭಿವೃದ್ಧಿಯ ಆಧಾರದ ಮೇಲೆ, ಉತ್ತಮ ವಿಚಾರಗಳ ಆಧಾರದ ಮೇಲೆ ನಡೆಯಬೇಕಿದೆ. ಆದರೆ, ಸದ್ಯದ ರಾಜಕೀಯ ಚಿತ್ರಣ ನೋಡಿದರೆ ಅಭಿವೃದ್ಧಿ, ವಿಷಯಾಧಾರಿತ ರಾಜಕಾರಣದ ಬದಲು ಧರ್ಮಾಧಾರಿತ ರಾಜಕಾರಣವೇ ನಡೆಯುವ ಮುನ್ಸೂಚನೆ ಕಂಡು ಬರುತ್ತಿದೆ. ಆದರೂ, ಕರ್ನಾಟಕದ ಪ್ರಗ್ನಾವಂತ ಮತದಾರರು ರಾಜಕಾರಣಿಗಳ ಗಿಮಿಕ್ ಗೆ ಮರಳಾಗದೆ ಅಭಿವೃದ್ಧಿಗೆ ಮತ ನೀಡುವ ಮೂಲಕ ರಾಜಕಾರಣಕ್ಕೆ ಹೊಸ ದಿಕ್ಕು ತೋರಲಿ ಎಂಬುದು ನಮ್ಮ ಆಶಯ.