ನಾಲಾಯಕ್ ಯಾರೆಂದು ಜನ ತೀರ್ಮಾನಿಸ್ತಾರೆ : ತನ್ವೀರ್ ಸೇಠ್ ಗೆ ಸಚಿವ ಯು.ಟಿ.ಖಾದರ್ ತಿರುಗೇಟು
ಉಡುಪಿ : ನಾನು ನನ್ನ ಸಮುದಾಯ, ಬೇರೆ ಸಮುದಾಯ ಎಂದು ಬೇಧಭಾವ ತೋರದೆ ಶಾಸಕನಾಗಿ, ಸಚಿವನಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ಮುಸ್ಲಿಂ ಸಮುದಾಯ ಯಾರೊಬ್ಬರ ಸ್ವತ್ತೂ ಅಲ್ಲ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಎರಡೆರಡು ಖಾತೆಗಳನ್ನು ನಿರ್ವಹಣೆ ಮಾಡಿದ್ದೇನೆ. ಪಕ್ಷದ ಹೈಕಮಾಂಡ್ ಗೆ ನಮ್ಮ ಸಾಮರ್ಥ್ಯ ಗೊತ್ತಿದೆ. ಯಾರು ನಾಲಾಯಕ್ ಎಂದು ಜನ ತೀರ್ಮಾನಿಸುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆಗೆ ಸಚಿವ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.
ಉಡುಪಿ ತಾಲ್ಲೂಕಿನ ಉದ್ಯಾವರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮಾಜಿ ಸಚಿವ ತನ್ವೀರ್ ಸೇಠ್ ಗೆ ನನ್ನ ಮೇಲೆ ಸ್ವಲ್ಪ ಪ್ರೀತಿ ಹೆಚ್ಚು ಅಂದಿದ್ದಾರೆ. ನಾನು ಯಾರ ಸಚಿವ ಸ್ಥಾನಕ್ಕೂ ಕಲ್ಲು ಹಾಕಿಲ್ಲ ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಜಮೀರ್ ಅಹಮ್ಮದ್ ಖಾನ್ ಹಾಗೂ ಯು.ಟಿ.ಖಾದರ್ ಸಮುದಾಯದ ಪರ ಕೆಲಸ ಮಾಡಿಲ್ಲ. ಅವರು ಸಚಿವ ಸ್ಥಾನಕ್ಕೆ ಅರ್ಹರಲ್ಲ ಎಂಬರ್ಥದಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಚಿವ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.