ಚಾಕು ತೋರಿಸಿ ಹಣ ವಸೂಲಿಃ ಇರ್ವರ ಬಂಧನ
ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಆರೋಪಿಗಳಿಬ್ಬರ ಬಂಧನ
ಯಾದಗಿರಿ, ಶಹಾಪುರಃ ಮಧ್ಯ ರಾತ್ರಿ ಸಮಯದಲ್ಲಿ ರಸ್ತೆಗೆ ಅಡ್ಡಲಾಗಿ ನಿಂತು ಚಾಲಕರಿಗೆ ಚಾಕು ತೋರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಹಾಪುರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲಾ ಎಸ್‍ಪಿ ಹೃಷಿಕೇಶ ಭಗವಾನ್ ಹಾಗೂ ಡಿಎಸ್ಪಿ ಶಿವನಗೌಡ ಅವರ ಸೂಕ್ತ ಮಾರ್ಗದರ್ಶನದಲ್ಲಿ ಶಹಾಪುರ ಪಿಐ ಹನುಮರಡ್ಡೆಪ್ಪನವರ ನೇತೃತ್ವದಲ್ಲಿ ಪಿಎಸ್‍ಐ ಚಂದ್ರಕಾಂತ ಮ್ಯಾಕಲೆ ಹಾಗೂ ಎಚ್‍ಸಿಗಳಾದ ಮಲ್ಲಣ್ಣ, ಹೊನ್ನಪ್ಪ, ಬಾಬು, ಸತೀಶಕುಮಾರ, ಸಿದ್ರಾಮಯ್ಯ ಸೇರಿದಂತೆ ಪಿಸಿಗಳಾದ ಚಂದ್ರಕಾಂತ, ಹಣಮಂತ, ಬಸವರಾಜ ಹಾಗೂ ಪ್ರೊಭೆಷನರಿ ಪಿಎಸ್‍ಐಯವರ ತಂಡ ನಿನ್ನೆ ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಹತ್ತಿಗೂಡೂರ ಸಮೀಪದ ದೇವದುರ್ಗಾ ಕ್ರಾಸ್ ಬಳಿ ಆರೋಪಿತರಾದ ದೇವಪ್ಪ ತಂದೆ ಹಣಮಂತ (21) ಸಾ. ದರಿಯಾಪೂರ ತಾ.ಶಹಾಪುರ ಹಾಗೂ ಮಲ್ಲಪ್ಪ ತಂದೆ ಶಿವಪ್ಪ ದುಂಡಾಪುರ ಸಾ.ಮಹಲರೋಜಾ ತಾ.ಶಹಾಪುರ ಈ ಇಬ್ಬರು ಆರೋಪಿತರು ತಾಲೂಕಿನ ಬೀರನೂರ ಕಡೆ ಹೊರಟಿದ್ದಾಗ ಪೊಲೀಸರಿಗೆ ಸಂಶಯ ಬಂದಿದ್ದು, ಫಾಲೋ ಮಾಡಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿತರನ್ನು ಠಾಣೆಗೆ ಕರೆ ತಂದ ಪೊಲೀಸರ ತಂಡ, ವಿಚಾರಣೆಗೊಳಪಡಿಸಿದಾಗ ಅವರು ಹಣ ವಸೂಲಿ ಮಾಡುತ್ತಿರುವದು ಸೇರಿದಂತೆ ನಗರದ ಮಡಿವಾಳೇಶ್ವರ ಬಡಾವಣೆ ವ್ಯಾಪ್ತಿ ಮಹಿಳೆಯೋರ್ವಳ 17 ಗ್ರಾಂ. ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಹೋಗಿದ್ದು ಅಲ್ಲದೆ ಅದನ್ನು ಮಾರಾಟ ಮಾಡಿರುವುದಾಗಿ ಆರೋಪಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಒಂದು ಚಾಕು ಸೇರಿದಂತೆ 25 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್‍ಪಿ ಶಿವನಗೌಡ ಅವರು ತಿಳಿಸಿದರು.