ಪ್ರಮುಖ ಸುದ್ದಿ
ನಾಟಕ ವೀಕ್ಷಣೆಗೆ ಹೊರಟ ಮೂವರ ಬದುಕು ದಾರುಣ ಅಂತ್ಯ!
ವಿಜಯಪುರ: ಆ ಮೂವರು ಯುವಕರು ಒಂದೇ ಬೈಕಿನಲ್ಲಿ ನಾಟಕ ವೀಕ್ಷಣೆಗೆಂದು ಹೊರಟಿದ್ದರು. ಆದರೆ, ಅಪರಿಚಿತ ವಾಹನದ ರೂಪದಲ್ಲಿ ಬಂದ ಯಮರಾಯ ಮಾತ್ರ ಆ ಮೂವರ ಜೀವ ಬಲಿ ಪಡೆದಿದ್ದಾನೆ. ಜಸ್ಟ್ ಹಿಟ್ ಅಂಡ್ ರನ್ ಮಾಡಿದ್ದ ಆ ಅಪರಿಚಿತ ವಾಹನದ ಚಾಲಕ ಮಾನವೀಯತೆ ಮರೆತು ಹೊರಟು ಬಿಟ್ಟಿದ್ದಾನೆ. ಪರಿಣಾಮ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಮೂವರು ಬೈಕ್ ಸವಾರರು ಸಾವಿಗೀಡಾದ ದಾರುಣ ಘಟನೆ ನಡೆದಿದೆ.
ನೆಬಗೇರಿ ಗ್ರಾಮದ ರವಿ ನಾಯಕ(25), ಮೂಕಿಹಾಳ ಗ್ರಾಮದ ಅನೀಲ್ ನಾಯಕ(28), ಸಿದ್ದಣ್ಣ ತ್ಯಾಪಿ(30) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ನಾಟಕ ವೀಕ್ಷಣೆಗೆಂದು ನೆಬಗೇರಿ ಗ್ರಾಮದಿಂದ ಮೂಕಿಹಾಳ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಮುದ್ದೇಬಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹಿಟ್ ಅಂಡ್ ರನ್ ಮಾಡಿದ ಅಪರಿಚಿತ ವಾಹನ ಪತ್ತೆಗಾಗಿ ಜಾಲ ಬೀಸಿದ್ದಾರೆ.