ಯಾದಗಿರಿಃ ಮೂವರು ಅಂತರರಾಜ್ಯ ಕಳ್ಳರ ಬಂಧನ, ಮಾರಕಾಸ್ತ್ರ ವಶಕ್ಕೆ
4 ಲಕ್ಷ ಮೌಲ್ಯದ ಸಾಮಾಗ್ರಿ, ಮಾರಕಾಸ್ತ್ರ ವಶಕ್ಕೆ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಡಿಗ್ರಿ ಕಾಲೇಜು ಕಂಪೌಂಡ್ ಮರೆಯಾಗಿ ಕುಳಿತು ದಾರಿಯಲ್ಲಿ ಹೋಗುವವರನ್ನು ಬೆದರಿಸಿ ಹಣ ಕೀಳುವದಲ್ಲದೆ, ಹೊಂಚುಹಾಕಿ ನಗರದ ಮನೆಗಳನ್ನು ಕಳುವು ಮಾಡುತ್ತಿದ್ದ 8 ಜನರ ತಂಡ ಹೊಂದಿದ್ದ ಅಂತರರಾಜ್ಯ ಕಳ್ಳರಲ್ಲಿ 3 ಜನರನ್ನು ಪೊಲೀಸರು ಬೆನ್ನಟ್ಟಿ ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಸುಮಾರಿಗೆ 8 ಜನರ ಕಳ್ಳರ ತಂಡ ಶಹಾಪುರ ಹೊರಹೊಲಯದಲ್ಲಿರುವ ಡಿಗ್ರಿ ಕಾಲೇಜು ಕಂಪೌಂಡ ಮರೆಯಲ್ಲಿ ಕುಳಿತು ಹೊಂಚು ಹಾಕುತ್ತಿದ್ದಾಗ ಖಚಿತ ಮಾಹಿತಿ ಸಂಗ್ರಹಿಸಿದ ಶಹಾಪುರ ಪಿಐ ನಾಗರಾಜ ಜಿ, ಹಾಗೂ ಸಿಬ್ಬಂದಿಗಳಾದ ರಾಜೇಂದ್ರ, ಗಣೇಶ, ಬಾಬು, ಹೊನ್ನಪ್ಪ ಭಜಂತ್ರಿ, ಸತೀಶ ನರಸನಾಯಕ, ಸಿದ್ರಾಮಯ್ಯ ಪುರಾಣಿಕ, ಬಸವರಾಜ, ಹಣಮಂತ ಇವರುಗಳು ದರೋಡೆಕೋರರನ್ನು ಬೆನ್ನಟ್ಟಿ 3 ಜನರನ್ನು ಹಿಡಿದಿದ್ದು, ಇನ್ನುಳಿದ 5 ಜನರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಮೂರು ಜನರು ಕುಖ್ಯಾತ ದರೋಡೆಕೋರರ ತಾಣವೆಂದೇ ಹೆಸರು ಪಡೆದ ಶಹಾಪುರ ತಾಲೂಕಿನ ಕನ್ಯಾಕೋಳೂರ ಗ್ರಾಮದ ಜಾಪಾನಾಯ್ಕ ತಾಂಡಾ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ. ಆರೋಪಿತರನ್ನು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಮೂರು ಜನರಿಂದ 3 ಲಕ್ಷ,.ರೂ ಮೌಲ್ಯದ ಒಂದು ಕಾರು ಮತ್ತು 30 ಸಾವಿರ ರೂ. ಮೌಲ್ಯದ ಬೈಕ್ ಸೇರಿದಂತೆ 37 ಮೊಬೈಲ್, 49 ಪಾಕೆಟ್ ಹತ್ತಿ ಬೀಜ (75 ಸಾವಿರ ಮೌಲ್ಯ) ಮತ್ತು ನಗದು 30 ಸಾವಿರ ರೂ. ಒಟ್ಟು 4 ಲಕ್ಷದ 30 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ಕ್ರಮ ಕೈಗೊಂಡಿದ್ದಾರೆ. ಬಂಧಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕಾರ್ಯ ಮುಂದುವರೆದಿದೆ.
ಅಂತರರಾಜ್ಯದಲ್ಲೂ ಪ್ರಕರಣ ದಾಖಲು
ಬಂಧಿತ ದರೋಡೆಕೋರರಿಂದ ಮಾರಾಕಾಸ್ತ್ರಗಳಾದ ಮಚ್ಚು, ಸೈಕಲ್ ಚೈನು, 2 ಕಬ್ಬಿಣದ ಹಾರಿ, 1 ಕಬ್ಬಿಣದ ರಾಡು ಮತ್ತು ಖಾರದ ಪುಡಿ ಪಾಕೆಟ್‍ಗಳನ್ನು ಜಪ್ತಿ ಮಾಡಿಕೊಂಡು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ದರೋಡೆಕೋರರ 8 ಜನರ ತಂಡ ಕರ್ನಾಟಕದ ಗಂಗಾವತಿ, ರಾಯಚೂರ, ಬಸವನ ಬಾಗೇವಾಡಿ. ಹುಮ್ನಾಬಾದ್ , ಕಲಬುರ್ಗಿ, ಮಹಾರಾಷ್ಟ್ರ ಬಾಂಬೆ, ಸಂಗಾರಡ್ಡಿ ಜಿಲ್ಲೆಗಳಲ್ಲಿ ಕಳುವಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅಲ್ಲಿನ ಠಾಣೆಗಳಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.