ಶಹಾಪುರಃ ಸಿಡಿಲಿನ ಆರ್ಭಟಕ್ಕೆ 19 ಕುರಿಗಳು ಬಲಿ
ಆತಂಕಗೊಂಡ ಕುರಿಗಾಹಿಗಳು ಸಂಕಷ್ಟದಲ್ಲಿ ಕುಟುಂಬ
yadgiri, ಶಹಾಪುರಃ ಶನಿವಾರ ಸಂಜೆ ಬೆಟ್ಟದಿಂದ ಮನೆ ಕಡೆ ಹೊರಟಿದ್ದ ಕುರಿಗಳಿಗೆ ಸಿಡಿಲು ಅಪ್ಪಳಿಸಿ 120ಕ್ಕೂ ಹೆಚ್ಚು ಕುರಿ ಹಿಂಡಿನಲ್ಲಿ, ಒಟ್ಟು 19 ಕುರಿಗಳು ಅಕ್ಬರ್ ಹುಸೇನಿ ದರ್ಗಾದ ಹಿಂದಿನ ಬೆಟ್ಟದಲ್ಲಿ ಮೃತಪಟ್ಟ ಘಟನೆ ಕುರಿಗಾಹಿಗಳ ಬದುಕಿಗೆ ಆತಂಕ ತಂದೊಡ್ಡಿದೆ.
ಅಂದಾಜು 4 ಲಕ್ಷ ರೂಪಾಯಿ ಮೌಲ್ಯದ ಕುರಿಗಳು ಸಿಡಿಲಿನ ಆರ್ಭಟಕ್ಕೆ ಬಲಿಯಾಗಿದ್ದು, ಕುರಿಗಾಹಿಗಳಾದ ಸಂಗಪ್ಪ ತಂದೆ ಮಲ್ಲಪ್ಪ ಜಂಗಳಿ, ದೇವಪ್ಪ ತಂದೆ ನಾಗಪ್ಪ ವಗ್ಗನವರ ಅವರಿಗೆ ಸೇರಿದ್ದಾಗಿವೆ. ಸಂಜೆ ಸುಮಾರಿಗೆ ಸಿಡಿಲಿನ ಪ್ರಖರತೆಗೆ ಬೆಚ್ಚಿ ಬೀಳುವಂತಾಗಿತ್ತು, ಅದೃಷ್ಟವಶಾತ್ ಕುರಿಗಾಹಿಗಳು ಕಲ್ಲು ಬಂಡೆಗೆ ನಿಂತ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಬದುಕಿಗೆ ಬರೆಃ ಕುರಿಗಾಹಿಗಳು ಕುರಿ ಸಾಕಾಣಿಕೆಯನ್ನೆ ನಂಬಿಕೊಂಡು ಕಷ್ಟಪಟ್ಟು ಸಂಸಾರ ನಿರ್ವಹಣೆ ಮಾಡುತ್ತಿದ್ದು, ಮಳೆ ಇಲ್ಲದೆ ಮೇವಿಗಾಗಿ ಕುರಿಗಳನ್ನು ದೂರದ ಬೆಟ್ಟಕ್ಕೆ ಹೊಡೆದುಕೊಂಡು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಸಿಡಿಲು ಕುರಿಗಾಹಿಗಳ ಬುದಕಿಗೆ ದೊಡ್ಡ ಪೆಟ್ಟು ನೀಡಿದ್ದು, ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಪ್ರಕೃತಿ ಇಂತದ್ದೊಂದು ಸಂಕಷ್ಟ ತಂದಿದ್ದಕ್ಕೆ ಇಡೀ ಕುಟುಂಬದ ಬದುಕಿಗೆ ಆತಂಕ ಎದುರಾಗಿದೆ. ತಾಲೂಕಾ ದಂಡಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಕುರಿಗಾಯಿಗಳ ಸಂಕಷ್ಟಕ್ಕೆ ಸ್ಪಂಧಿಸುವ ಅಗತ್ಯವಿದೆ. ಕೂಡಲೇ ಸರ್ಕಾರದಿಂದ ಪರಿಹಾರ ಒದಗಿಸುವ ಕೆಲಸವಾಗಬೇಕೆಂದು ಕನ್ನಡ ಸೇನೆಯ ಮುಖಂಡ ದೇವು ಭೀ.ಗುಡಿ ಮನವಿ ಮಾಡಿದ್ದಾರೆ.
ಗುಡ್ಡದಲ್ಲಿ ಕುರಿಗಳನ್ನು ಮೇಯಿಸಿಕೊಂಡು ಇನ್ನೇನು ಹೊತ್ತು ಮುಳುಗುತ್ತಿದೆ ಎಂದು ವಾಪಸ್ ಮನೆ ಕಡೆ ಕುರಿಗಳನ್ನು ಹೊಡೆದುಕೊಂಡು ಹೊರಟಿದ್ದೇವು. ಮೋಡ ಆವರಿಸಿ ಗುಡುಗು ಮಿಂಚು ಗೊಡೆಯಲಾರಂಭಿಸಿತು. ಸುರ್ರನೆ ಮಳೆ ಸುರಿಯಲಾರಂಭಿಸಿತು. ನಾವೆಲ್ಲ ಬಂಡೆ ಕಲ್ಲಿನ ಆಸರೆ ಪಡೆದುಕೊಂಡು ನಿಂತೇವು. ಅಷ್ಟರಲ್ಲಿ ಅಬ್ಬರದ ಸಿಡಿಲು ಹೊಡೆಯಿತು ತಕ್ಷಣಕ್ಕೆ ಮೈ ಝುಮ್ಮೆಂದು ನಾವೆಲ್ಲ ಜಾಗ ಬಿಟ್ಟು ಕದಲಾಗಲಿಲ್ಲ. ಅಷ್ಟೊಂದು ಭಯಂಕರ ಶಬ್ಧ ಮಿಂಚು ಹೊಡೆಯಿತು. ನಿಮಿಷದಲ್ಲಿ ಕುಡಿಗಳು ಸಾವನ್ನಪ್ಪಿ ನೆಲಕ್ಕುರುಳಿದ್ದವು ಎಂದು ಕುರಿಗಾಯಿ ಸಂಗಪ್ಪ ಮತ್ತು ದೇವಪ್ಪ ತಮ್ಮ ಅಳಲನ್ನು ಕಣ್ಣೀರು ಇಡುತ್ತಲೇ ತೋಡಿಕೊಂಡರು.