ಕಾಡುಮೃಗಗಳ ಕದನ : ಹುಲಿರಾಯನಿಗೆ ಮಣಿಸಿದ ಜಾಂಬವಂತ!
ಗಂಡು ಹುಲಿ ಮತ್ತು ಹೆಣ್ಣು ಕರಡಿ ನಡುವೆ ಕದನ!
-ಮಲ್ಲಿಕಾರ್ಜುನ ಮುದನೂರ್
ಕಾಲ ಬದಲಾಗುತ್ತಲೇ ಸಾಗಿದೆ. ಕುಡಿಯುವ ನೀರೂ ಸಹ ಹಣ ನೀಡಿ ಕೊಳ್ಳಬೇಕಾಗಿ ಬಂದಿದೆ. ಶುದ್ಧ ಗಾಳಿ ಸೇವನೆಗೂ ಮನುಷ್ಯ ಪರದಾಡುವ ಸ್ಥಿತಿಯಿದೆ. ಭೂಮಿ ಬರಿದಾಗುತ್ತಲೇ ಸಾಗಿದೆ. ಪ್ರಕೃತಿಯ ಮಳೆಗಾಲ, ಚಳಿಗಾಲ, ಬೇಸಿಗೆಗಾಲಗಳಲ್ಲೂ ಭಾರೀ ವ್ಯತ್ಯಾಸಗಳಾಗುತ್ತಿವೆ. ಇನ್ನು ಮಹಿಳೆಯರು ಪುರುಷರ ಧಿರಿಸನ್ನು ಧರಿಸುವುದು. ಪುರುಷರು ಮಹಿಳೆಯರಿಗಿಂತ ಬಲಹೀನರಾಗಿ ಮನೆ ಸೇರುವುದು ಮಾಮೂಲಾಗಿದೆ. ಮಹಾರಾಷ್ಟ್ರದಲ್ಲಿ ನಡೆದ ಹುಲಿ ಮತ್ತು ಕರಡಿಯ ಫೈಟ್ ಬದಲಾದ ಕಾಲಕ್ಕೆ ಹಿಡಿದ ಕನ್ನಡಿ.
ಹುಲಿರಾಯನ ಕಂಡರೆ ಕಾಡು ಪ್ರಾಣಿಗಳಲ್ಲೆವೂ ಬಾಲ ಮುದುರಿಕೊಳ್ಳುತ್ತವೆ ಎಂಬುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ, ಮಹಾರಾಷ್ಟ್ರದ ಚಂದಾಪುರ ಬಳಿಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಗುರುವಾರ ಮದ್ಯಾನದ ವೇಳೆ ನಡೆದ ಘಟನೆ ಭಾರೀ ಅಚ್ಚರಿ ಮೂಡಿಸಿದೆ. ಕರಡಿಯೊಂದು ಹುಲಿಯ ಜೊತೆಗೆ ತೀವ್ರ ಸೆಣೆಸಾಟ ನಡೆಸಿದೆ. ಕರಡಿಯ ಪ್ರತಿದಾಳಿ ಕಂಡು ಬೆಚ್ಚಿಬಿದ್ದ ಹುಲಿ ಬಂದ ದಾರಿಗೆ ಸುಂಕವಿಲ್ಲದೆ ಮರಳಿದೆ.
ಬಂಬೂ ಫಾರೆಸ್ಟ್ ಸಫಾರಿಯ ಮುಖ್ಯ ಪರಿಸರವಾದಿ ಅಕ್ಷಯ ಕುಮಾರ್ ತಮ್ಮ ಕ್ಯಾಮರಾದಲ್ಲಿ ಹುಲಿ ಮತ್ತು ಕರಡಿಯ ಫೈಟ್ ನ ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೆ. ಬೇಸಿಗೆ ಶುರುವಾದ್ದರಿಂದ ಹುಲಿ ಮತ್ತು ಕರಡಿ ಒಂದೇ ನೀರಿನ ತೊಟ್ಟಿಗೆ ನೀರನ್ನು ಸೇವಿಸಲು ಬಂದಿದ್ದವು. ಇದೇ ಸಂದರ್ಭದಲ್ಲಿ ಕರಡಿ ಮತ್ತು ಹುಲಿ ನಡುವೆ ಕದನ ನಡೆದಿದೆ. ಮತ್ತೊಂದು ವಿಶೇಷ ಅಂದರೆ ಸುಮಾರು ಹುಲಿ ಗಂಡು ಜಾತಿಗೆ ಸೇರಿದ್ದಾಗಿದೆ. ಕರಡಿ ಹೆಣ್ಣು ಜಾತಿಗೆ ಸೇರಿದೆ ಎಂದು ತಿಳಿದು ಬಂದಿದೆ.
ಅಕ್ಷಯ ಕುಮಾರ್ ಅವರು ಸೆರೆ ಹಿಡಿದಿರುವ ಕರಡಿ ಮತ್ತು ಹುಲಿಯ ಸೆಣೆಸಾಟದ ದೃಶ್ಯಾವಳಿಗಳು ಕ್ಷಣಾರ್ಧದಲ್ಲಿ ದೇಶಾದ್ಯಂತ ವೈರಲ್ ಆಗಿವೆ. ಬಲು ಅಪರೂಪದ ದೃಶ್ಯವನ್ನು ನೋಡಿದ ಜನರೆಲ್ಲಾ ಜಾಂಬವಂತನ ಧೈರ್ಯ ಶೌರ್ಯವನ್ನು ಕಂಡು ಹುಬ್ಬೇರಿಸುತ್ತಿದ್ದಾರೆ. ಹುಲಿಗಳೇ ಹೆಚ್ಚಾಗಿರುವ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ವಲಯದಲ್ಲೇ ಜಾಂಬವಂತ ಹುಲಿರಾಯನಿಗೆ ಫೈಟ್ ನೀಡಿದ್ದು ಹೀಗೂ ಉಂಟೇ ಎಂಬ ಪ್ರಶ್ನೆಯನ್ನು ಮೂಡಿಸುತ್ತಿದೆ.