ನಿಯಮ ಬಾಹಿರ ತಂಬಾಕು ಮಾರಾಟ-ಪ್ರಕರಣ ದಾಖಲು
ತಂಬಾಕು ಮಾರಾಟ- ಕಿರಾಣಾ ಅಂಗಡಿಗಳ ಮೇಲೆ ದಾಳಿ
ಕಾನೂನು ಉಲ್ಲಂಘಿಸಿದವರ ವಿರುದ್ಧ ಕೇಸು ದಾಖಲು
ಯಾದಗಿರಿಃ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು ಕೋಟ್ಪಾ ಕಾಯ್ದೆ-2003 ರ ಅಡಿಯಲ್ಲಿ ಯಾದಗಿರಿ ನಗರದ ಗಾಂಧಿ ಚೌಕ್‍ನಲ್ಲಿರುವ ಕಿರಾಣಾ ಅಂಗಡಿ, ಪಾನ್‍ಶಾಪ್ ಹಾಗೂ ಹೋಟೆಲ್‍ಗಳ ಮೇಲೆ ಗುರುವಾರ ದಾಳಿ ಮಾಡಿ, ಪ್ರಕರಣಗಳನ್ನು ದಾಖಲಿಸಿದ್ದಾರೆ.
ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್ ಅವರು ಮಾತನಾಡಿ, ಕೋಟ್ಪಾ-2003 ಕಾಯ್ದೆಯಡಿ ಸೆಕ್ಷನ್-4, 5, 6ಎ, 6ಬಿ ಮತ್ತು ಸೆಕ್ಷನ್-7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್, ಪಾನ್‍ಶಾಪ್, ಧಾಬಾ ಹಾಗೂ ಶಾಲಾ- ಕಾಲೇಜು ಪ್ರದೇಶದ 100 ಮೀಟರ್ ಅಂತರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದಿಸುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧವಿದೆ. ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿಸಿದರು.
ಪರಿಸರ ಇಂಜಿನಿಯರ್ ಸಂಗಮೇಶ ಅವರು ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಅಂಗಡಿಗಳಲ್ಲಿ ಪ್ಲಾಸ್ಟಿಕ್‍ಗಳನ್ನು ಬಳಸುವುದು ಹಾಗೂ ಪ್ಲಾಸ್ಟಿಕ್‍ನಲ್ಲಿ ಯಾವುದೇ ತರಹದ ವಸ್ತುಗಳನ್ನು ಸಾರ್ವಜನಿಕರಿಗೆ ನೀಡುವುದು ಅಪರಾಧವಾಗಿದೆ. ನಿಯಮವನ್ನು ಉಲ್ಲಂಘಿಸಿದಲ್ಲಿ 25,000 ರೂ.ಗಳವರೆಗೆ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದರು.
ನಗರ ಪೊಲೀಸ್ ಠಾಣೆಯ ಎ.ಎಸ್.ಐ ಈರಣ್ಣ, ವಾಯು ಮಾಲಿನ್ಯ ನಿಯಂತ್ರಣ ಸಹಾಯಕ ಪರಿಸರ ಅಧಿಕಾರಿ ಬಸವರಾಜ ಹಾಗೂ ನಗರಸಭೆ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.