ಪತ್ರಕರ್ತ ಸುನೀಲ್ ಹತ್ಯೆಗೆ ಸುಪಾರಿ ಕೇಸ್: ರವಿ ಬೆಳಗೆರೆಗೆ ಇಂದು ಜೈಲಾ? ಬೇಲಾ?
ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಹಾಯ್ ಬೆಂಗಳೂರ್ ಪತ್ರಿಕೆಯ ಗೌರವ ಸಂಪಾದಕ ರವಿ ಬೆಳಗೆರೆ ಬಂಧನದಲ್ಲಿದ್ದಾರೆ. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು ಸಿಸಿಬಿ ಪೊಲೀಸರು 1ನೇ ಎಸಿಎಂಎಂ ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಎಸಿಪಿ ಸುಬ್ರಮಣಿ ನೇತೃತ್ವದ ಸಿಸಿಬಿ ಟೀಮ್ ಸುಪಾರಿ ಪ್ರಕರಣದ ಬಗ್ಗೆ ನಾಲ್ಕು ದಿನಗಳ ಕಾಲ ರವಿ ಬೆಳಗೆರೆ ಅವರನ್ನು ವಿಚಾರಣೆ ನಡೆಸಿದೆ. ಆದರೆ, ರವಿ ಬೆಳಗೆರೆ ಮಾತ್ರ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ‘ ಸುಪಾರಿ ಕೊಟ್ಟಿಲ್ಲ’ ಎಂದು ಒಂದೇ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ರವಿ ಬೆಳಗೆರೆ ಪೊಲೀಸ್ ಕಸ್ಟಡಿ ವಿಸ್ತರಿಸುವಂತೆ ಪೊಲೀಸರು ಮತ್ತಷ್ಟು ಕಾಲಾವಕಾಶ ಕೇಳುವ ಸಾಧ್ಯತೆ ಇದೆ.
ಮತ್ತೊಂದು ಕಡೆ ರವಿ ಬೆಳಗೆರೆ ಪರ ವಕೀಲ ದಿವಾಕರ್ ಇಂದು ಜಾಮೀನು ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಲಿದ್ದಾರೆ. ರವಿ ಬೆಳಗೆರೆ ಆರೋಗ್ಯ ಸಮಸ್ಯೆ ಮುಂದಿಟ್ಟು ಬೆಳಗೆರೆಗೆ ಜಾಮೀನು ನೀಡುವಂತೆ ಮನವಿ ಮಾಡಲಿದ್ದಾರೆ. ಇಂದು ಮದ್ಯಾನದ ಹೊತ್ತಿಗೆ ಪತ್ರಕರ್ತ ರವಿ ಬೆಳಗೆರೆಗೆ ಇಂದು ಜೈಲಾ? ಬೇಲಾ? ಎಂಬುದು ಗೊತ್ತಾಗಲಿದೆ.